ಬೆಂಗಳೂರು: ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳ ದಾಳಿ ನಡುವೆಯೂ ತನ್ನಲ್ಲಿರುವ ಸತ್ವದಿಂದಾಗಿ ಕನ್ನಡ ಭಾಷೆ ಸಮೃದ್ಧವಾಗಿ ಬೆಳೆದು ನಿಂತಿದೆ ಎಂದು ಹಿರಿಯ ಸಾಹಿತಿ ಪಿ.ವಿ.ನಾರಾಯಣ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು, ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ಮಾವಳ್ಳಿ ಲಕ್ಷಿಪತಿ ಹಾಗೂ ಬಿ.ಎಂ ನಂಜುಂಡಸ್ವಾಮಿ ಅವರಿಗೆ ಕನ್ನಡ ಚಳವಳಿ ವೀರಸೇನಾನಿ “ಮ.ರಾಮಮೂರ್ತಿ ದತ್ತಿ ಪ್ರಶಸ್ತಿ’ ಮತ್ತು ಹಿರಿಯ ಪತ್ರಕರ್ತ ಎಚ್.ಬಿ ಮದನಗೌಡ ಅವರಿಗೆ “ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಷಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು. ಕನ್ನಡಕ್ಕೆ ತನ್ನದೇ ಆದ ಶಕ್ತಿಯಿದೆ.
ಕನ್ನಡ ಲಿಪಿಯನ್ನು ಬಳಸಿಕೊಂಡು ಸಂಸ್ಕೃತದಲ್ಲಿ ಶಾಸನಗಳನ್ನು ರಚಿಸಲಾಗಿದೆ. ಬ್ರಾಹ್ಮಿ ಭಾಷೆ ನಂತರದ ಪ್ರಾಚೀನ ಭಾಷೆ ಕನ್ನಡವಾಗಿದ್ದರೂ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಲಾಗಿದೆ. ಕನ್ನಡ ಭಾಷೆ ಗಿರುವ ಆತಂರಿಕ ಶಕ್ತಿಯಿಂದಾಗಿಯೇ ಕನ್ನಡ ಇನ್ನೂ ಜನ ಮಾನಸದಲ್ಲಿ ಉಳಿದಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕನ್ನಡಪರ ಹೋರಾಟಗಾರ ಮಾವಳ್ಳಿ ಲಕ್ಷ್ಮೀಪತಿ, ಕನ್ನಡ ಪರ ಹೋರಾಟಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದ ಮ.ರಾಮಮೂರ್ತಿ ಅವರ ಹೆಸರಿನ ದತ್ತಿ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ವೇಳೆ ಸರ್ಕಾರ ಕನ್ನಡ ಪರ ಹೋರಾಟಗಾರರನ್ನು ಮರೆಯುವುದು ಸರಿಯಲ್ಲ. ಕನ್ನಡಕ್ಕಾಗಿ ಹಲವು ಸಂಘ -ಸಂಸ್ಥೆಗಳು ತಮ್ಮದೇ ಆದ ಕೊಡುಗೆ ನೀಡಿದ್ದು, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು, ಕನ್ನಡಕ್ಕೆ ಕೊಡುಗೆ ನೀಡಿರುವ ಸಂಸ್ಥೆಗಳ ಹೆಸರುಗಳನ್ನು ರಾಜ್ಯೋತ್ಸವ ಪ್ರಶಸ್ತಿಗಾಗಿ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ರಾಜಶೇಖರ ಹತಗುಂದಿ, ವ.ಚ. ಚನ್ನೇಗೌಡ ಮತ್ತು ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.