ವಿಜಯಪುರ: ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಸುದೀರ್ಘ ಸಾಂಸ್ಕೃತಿಕ ಇತಿಹಾಸ ಹೊಂದಿದೆ. ಇದೀಗ ಕನ್ನಡ ಭಾಷೆ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು. ಕನ್ನಡ ಕನ್ನಡಿಗರ ಅನ್ನದ ಭಾಷೆಯಾಗಿ ಜೀವನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಬೇಕು ಎಂದು ಸಾಹಿತಿ ಸಂಗಮೇಶ ಬದಾಮಿ ಅಭಿಪ್ರಾಯಪಟ್ಟರು.
ನಗರದ ಎಸ್.ಸಿ.ಉಪ್ಪಿನ ವಾಣಿಜ್ಯ ಮಹಾವಿದ್ಯಾಲಯದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಥ ಸರಳ-ಸುಂದರ ಕನ್ನಡ ಭಾಷೆಯನ್ನು ದೈವತ್ವಕ್ಕೆ ಕೊಂಡೊಯ್ದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಇಂತ ಕನ್ನಡ ಕಟ್ಟುವ ಕೆಲಸ ಮಾಡಿದ ಶರಣರ ನೆಲೆಯೇ ವಿಜಯಪುರ ಜಿಲ್ಲೆಯಾಗಿದ್ದು, ಕನ್ನಡ ಭಾಷಾ ಸಂರಕ್ಷಣೆಯಲ್ಲಿ ಜಿಲ್ಲೆಯ ಕೊಡುಗೆ ಅನುಪಮ ಎಂದರು.
ಕನ್ನಡ ಇದೊಂದು ಭಾಷೆಯಲ್ಲ ನಮ್ಮ ಭಾವನೆಗಳ ಸಂಯೋಜನೆ. ಶತ ಶತಮಾನಗಳಿಂದ ಸಂಸ್ಕೃತ ಭಾಷೆ ಶ್ರೇಷ್ಠವೆನಿಸಿಕೊಳ್ಳುತ್ತ ಜನರಿಂದ ಜನರಿಗಾಗಿ ಮೂಡಿ ಬಂದ ಜನಮಾನಸದ ಮಂತ್ರವೇ ಕನ್ನಡ ನುಡಿ. ಕನ್ನಡ ನಾಡಿನ ಜೋಗಫಾಲ್ಸ್, ಕೆ.ಆರ್.ಎಸ್, ಗೋಕಾಕ ಫಾಲ್ಸ್, ಆಲಮಟ್ಟಿ ಜಲಾಶಯ ಯಾವ ಕೈಲಾಸ ಪರ್ವತಕ್ಕಿಂತ ಕಡಿಮೆ ಇಲ್ಲ. ಈ ಮಣ್ಣಿನ ಮೈಸೂರು ಅರಮನೆ ವಿಧಾನಸೌಧ, ಗೋಳಗುಮ್ಮಟ ಯಾವ ತಾಜಮಹಲಗಿಂತ ಕಡಿಮೆಯಿಲ್ಲ. ಹೀಗೆ ವಿಶ್ವಭಾರತೀಯ ಕೀರ್ತಿಯನ್ನು ವಿಶ್ವದೆತ್ತರಕ್ಕೆ ತಲುಪಿಸಿದ ಕನ್ನಡದ ರಾಜ ರಾಜೇಶ್ವರಿ, ಕನ್ನಡ ಆರು ಕೋಟಿ ಜನರ ಜೀವನಾಡಿ, ದ್ರಾವಿಡ ಭಾಷೆಗಳಲ್ಲಿಯೇ ಅಗ್ರಸ್ಥಾನ ಪಡೆದ ಹಿರಿಮೆ ಸವಿಗನ್ನಡದು. ಪ್ರಪಂಚದಲ್ಲಿ 6000 ಸಾವಿರ ಭಾಷೆಗಳಲ್ಲಿ ಸಮೃದ್ಧ 30 ಭಾಷೆಗಳಲ್ಲಿ ಕನ್ನಡವೂ ಸೇರಿದೆ ಎಂಬುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಕನ್ನಡ ಕನ್ನಡಿಗರ ಉಸಿರು, ಅದು ಇರಬೇಕು. ಎಂದೆಂದೂ ಹಸಿರು ಎಂಬ ಆಶಾಭಾವನೆ ಹೊಂದಬೇಕಾಗಿದೆ. ಯುವಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಕರುನಾಡ ದೀಪವನ್ನು ಸಿರಿನುಡಿಯ ದೀಪವನ್ನಾಗಿಸಬೇಕಾಗಿದೆ ಎಂದು ಕರೆ ನೀಡಿದರು.
ಕನ್ನಡ ನಾಡು ವರ್ಣಮಯ ಇತಿಹಾಸ ಹೊಂದಿದ್ದು, ಬಹುಭಾಷೆ, ಬಹು ಸಂಸ್ಕೃತಿ ಮತ್ತು ಬಹು ಧರ್ಮಗಳ ನೆಲೆಬೀಡು ಇದಾಗಿದೆ. ಕರ್ನಾಟಕವೇ ಕರ್ಮಭೂಮಿ, ಕನ್ನಡವೇ ನನ್ನಸಿರು, ನಾಡ ನುಡಿಯ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಖ್ಯ ಆಡಳಿತಾಧಿಕಾರಿಗಳಾದ ಡಾ| ಎಚ್. ವೆಂಕಟೇಶ ಹೇಳಿದರು.
ಪ್ರಾಂಶುಪಾಲ ಐಶ್ವರ್ಯ ಸಂಗಮ, ಉಪ ಪ್ರಾಂಶುಪಾಲ ವೀರೇಶ ಮೂರ್ತಿ, ಅಧ್ಯಾಪಕರಾದ ಪ್ರೀತಿ ಪಾಟೀಲ, ಗಿರಿಜಾ, ಕಿರಣ, ಹಿರೇಮಠ, ರೋಹಿಣಿ, ಆಶಾ, ಸುಧೀಕ್ಷಾ ಪಾಟೀಲ ಇದ್ದರು.