Advertisement

ಕನ್ನಡದ ಕಡಲು ತುಂಬುವ ಬಗೆ

03:45 AM Jul 14, 2017 | |

ಸದ್ಯ ಮೂರು ರೀತಿಯ ಕನ್ನಡ ಪ್ರಜ್ಞೆಗಳನ್ನು ಗುರುತಿಸಬಹುದು. ಅವುಗಳೆಂದರೆ ಕುಂಭಕರ್ಣ ಪ್ರಜ್ಞೆ, ಲಕ್ಷ್ಮಣ ಪ್ರಜ್ಞೆ ಮತ್ತು ಹನುಮ ಪ್ರಜ್ಞೆ. ವರ್ಷಕ್ಕೊಮ್ಮೆ ಮಾತ್ರ ಜಾಗೃತವಾಗುವ‌ ಪ್ರಜ್ಞೆಯನ್ನು ಕುಂಭಕರ್ಣ ಪ್ರಜ್ಞೆ ಎಂದು ಕರೆಯುವರು. ವರ್ಷಕ್ಕೊಮ್ಮೆ ನಡೆಯುವ ಅಖೀಲ ಭಾರತೀಯ ಸಾಹಿತ್ಯ ಸಮ್ಮೇಳನಗಳು ಈ ಪ್ರಜ್ಞೆಗೆ ಸೇರುತ್ತವೆ…. 

Advertisement

ಮಾಜಿ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದರು 1956ರ ನವೆಂಬರ್‌ 1ರಂದು ಚೆಲುವ ಕನ್ನಡನಾಡನ್ನು ಉದ್ಘಾಟಿಸುವ ಸಂದರ್ಭದಲ್ಲಿ ಕನ್ನಡ ಕುಲಪುರೋಹಿತರಾಗಿದ್ದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಹಂಪೆ ವಿರೂಪಾಕ್ಷನ ಮುಂದೆ ಕನ್ನಡಕ್ಕಾಗಿ ಹೋರಾಡಿದ ಗಣ್ಯರು ಕನ್ನಡ ನೆಲದ ಎಲ್ಲ ಭಾಗಗಳಿಂದ ತಂದಿದ್ದ ಮಣ್ಣು ಮತ್ತು ನೀರನ್ನು ಪೂಜಿಸಿ, ಅರ್ಥಪೂರ್ಣವಾಗಿ ಹೊಸ ರಾಜ್ಯದ ಉದಯಕ್ಕೆ ಸ್ವಾಗತ ಕೋರಿದರು. ಆದರೆ ಕಾಸರಗೋಡು, ಅಕ್ಕಲಕೋಟೆ, ಸೋಲಾಪುರ ಮೊದಲಾದ ಗಡಿಪ್ರದೇಶಗಳ ಅಚ್ಚಕನ್ನಡ ನೆಲದ ಮಣ್ಣಿಗೆ ಮತ್ತು ನೀರಿಗೆ ಆ ಭಾಗ್ಯ ದೊರೆಯದೆ ಹೋಯಿತು. ಕರ್ನಾಟಕದ ನದಿಗಳಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ. ಆದರೆ ಅಖೀಲ ಕರ್ನಾಟಕ ಎಂಬ ಕಲ್ಪನೆ ಕೇವಲ ಕವಿಕಲ್ಪನೆ ಯಾಗಿಯೇ ಉಳಿದು ಹೋಗಿದೆ. ಅನ್ಯ ರಾಜ್ಯಗಳಲ್ಲಿ ಸೇರಿ ಹೋದ ಕರ್ನಾಟಕದ ಕೆಲವು ಭೂಭಾಗಗಳಲ್ಲಿ ಅಂದು ಕತ್ತರಿಸಿದ ಗಾಯ ಒಣಗದೆ ಇಂದಿಗೂ ರಕ್ತ ಒಸರುವಂತಾಗಿದೆ. 

ಮನುಷ್ಯನಿಗೆ ಬದುಕುವುದಕ್ಕೆ ಒಂದು ಒಳ್ಳೆಯ ಭೌತಿಕ ಪರಿಸರ ಎಷ್ಟು ಅವಶ್ಯಕವೋ ಬಾಳುವುದಕ್ಕೆ ಒಂದು ಸಾಂಸ್ಕೃತಿಕ ಪರಿಸರವೂ ಅಷ್ಟೇ ಅವಶ್ಯಕವಾಗಿದೆ. ವ್ಯಕ್ತಿಗೆ ಅನ್ನ, ಆಹಾರವನ್ನು ಭೌತಿಕ ಪರಿಸರ ಕೊಟ್ಟರೆ ಸಂಸ್ಕೃತಿಯನ್ನು ಸಾಂಸ್ಕೃತಿಕ ಪರಿಸರ ನೀಡುತ್ತದೆ. ಒಂದು ಸಂಸ್ಕೃತಿಯ ವಾಹಕವಾಗಿ ಭಾಷೆ ಕೆಲಸ ಮಾಡುತ್ತದೆ. 

ಕರ್ನಾಟಕದ ಭೌತಿಕ ಪರಿಸರವೇ ಒಂದು ವಿಶಿಷ್ಟ ಮಾದರಿ ಯದ್ದು. ಒಂದು ಕಡೆ ಬಯಲು, ಇನ್ನೊಂದು ಕಡೆ ಕರಾವಳಿ, ಮಗದೊಂದು ಕಡೆ ಬೆಟ್ಟಗುಡ್ಡಗಳು. ಇವುಗಳ ಮಧ್ಯೆ ವಿವಿಧ ಜಾತಿ, ಧರ್ಮ ಭಾಷೆಯ ಜನರು. ವೈವಿಧ್ಯಮಯ ಆಹಾರ, ವೇಷಭೂಷಣ, ನಂಬಿಕೆ, ನಡವಳಿಕೆಗಳು. ಹಲವಾರು ಶಿಷ್ಟ- ಜನಪದ ಭಾಷಾ, ಕಲಾಸಂಪತ್ತು. ವಿಶಿಷ್ಟವಾದ ವಾಸ್ತು-ಶಿಲ್ಪ ಮಾದರಿಗಳು. ಎರಡು ಸಾವಿರ ವರ್ಷಗಳ ಸಾಹಿತ್ಯ ರಾಶಿ, ಅದರಲ್ಲಿ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ಮಾದರಿಗಳು. ಹೊಸಗನ್ನಡದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ, ಮಹಿಳಾ ಹೀಗೆ ವಿವಿಧ ಪಂಥಗಳು. ದ್ವೆ„ತ, ಅದ್ವೆ„ತ, ವಿಶಿಷ್ಟಾದ್ವೆ„ತ, ಶಕ್ತಿ ವಿಶಿಷ್ಟಾದ್ವೆ„ತ, ಜೈನ, ವೈಷ್ಣವ, ಭಾಗವತ, ಶೈವ, ವೀರಶೈವ ಮೊದಲಾದ ಪ್ರಾಚೀನ ಭಾರತೀಯ ತಣ್ತೀಶಾಸ್ತ್ರಗಳಿಗೆ ಮತ್ತು ಮಾರ್ಕ್ಸ್ವಾದ, ಅಸ್ತಿತ್ವವಾದ, ಗಾಂಧಿವಾದ, ಅಂಬೇಡ್ಕರ್‌ವಾದ, ಲೋಹಿಯವಾದ ಮೊದಲಾದ ಆಧುನಿಕ ತಣ್ತೀಶಾಸ್ತ್ರಗಳಿಗೆ ಕನ್ನಡ ಸಾಹಿತ್ಯ ಸ್ಪಂದಿಸುತ್ತಾ, ಪ್ರತಿಕ್ರಿಯಿಸುತ್ತಾ ಬಂದ ಬಗೆ ವಿಶಿಷ್ಟವಾದದ್ದು. ಈ ದೃಷ್ಟಿಯಿಂದ ರಾಷ್ಟ್ರ ಸಾಹಿತ್ಯ ಮತ್ತು ಜಾಗತಿಕ ಸಾಹಿತ್ಯಕ್ಕೆ ಕನ್ನಡದ ಪ್ರತಿಕ್ರಿಯೆ ಅಧ್ಯಯನ ಯೋಗ್ಯವಾಗಿದೆ.

ಕನ್ನಡ, ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದಲ್ಲದೆ ಶಾಸ್ತ್ರೀಯ ಭಾಷೆಯ ಮಾನ್ಯತೆಯನ್ನೂ ಪಡೆದುಕೊಂಡಿದೆ. ಅನೇಕ ಆಧುನಿಕ ಮಹಾಕಾವ್ಯಗಳು, ಮಹಾಕಾದಂಬರಿಗಳು, ಜನಪದ ಮಹಾಕಾವ್ಯಗಳು ಕನ್ನಡದ ಸಾಹಿತ್ಯ ಸಂಪತ್ತನ್ನು ಶ್ರೀಮಂತ ಗೊಳಿಸಿವೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲೂ ಅನ್ಯ ಭಾಷೆಗೆ ಸರಿಗಟ್ಟುವ ಗುಣಮಟ್ಟದ ಸಾಹಿತ್ಯವನ್ನು ಕನ್ನಡ ಭಾಷೆ ಹೊಂದಿದೆ. ಇದೆಲ್ಲ ಪ್ರತಿಯೊಬ್ಬ ಕನ್ನಡಿಗನೂ ಸಂಭ್ರಮಿ ಸಬೇಕಾದ, ಅಭಿಮಾನಪಡಬೇಕಾದ ವಿಚಾರವಾಗಿದೆ. ಆದರೆ ಈ ಕನ್ನಡ ದೇವಿಯ ನುಡಿಸಂಪತ್ತಿನ ಆಸ್ತಿಯನ್ನು ಪರಿಚಯಿಸುವ, ಬೆಳೆಸುವ, ದಾಟಿಸುವ ಮತ್ತು ಕಾಪಿಡುವ ಕೆಲಸವನ್ನು ನಾವೆಷ್ಟು ಮಾಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿ ಕೊಳ್ಳುವುದು ಒಳ್ಳೆಯದು. ಇಂದು ಕನ್ನಡ ಭಾಷೆಗೆ, ಸಂಸ್ಕೃತಿಗೆ ಬಂದಿರುವ ಅಪಾಯ ಯಾವುದು? ಯಾರಿಂದ? ಮತ್ತು ಅದರಿಂದ ಪಾರಾಗುವ ಬಗೆ ಹೇಗೆ ಎಂಬುದನ್ನು ಪ್ರತಿಯೊ ಬ್ಬರೂ ಚಿಂತಿಸಬೇಕಾಗಿದೆ.

Advertisement

ಕನ್ನಡಿಗರಿಗೆಂದಲ್ಲ ಜಗತ್ತಿನ ಎಲ್ಲ ಭಾಷಿಕರಿಗೂ ಅತ್ಯಂತಹ ಆಕರ್ಷಕ ಮತ್ತು ಅಪಾಯಕಾರಿಯಾಗಿರುವುದು ಇಂಗ್ಲಿಷ್‌ ಭಾಷೆ. ಒಂದು ಭಾಷೆ ಇನ್ನೊಂದು ಭಾಷೆಗೆ ಅಪಾಯ ಆಗು ವುದು ಯಾವಾಗ ಎಂದು ಆಲೋಚಿಸಿದರೆ ಅದರ ಸತ್ಯ ಗೊತ್ತಾಗುತ್ತದೆ. ಇಂಗ್ಲಿಷ್‌ ಒಂದು ಭಾಷೆಯಾಗಿ ಬಂದರೆ ತೊಂದರೆ ಇಲ್ಲ. ಆದರೆ ಇಂಗ್ಲಿಷ್‌ ಒಂದು ಸಂಸ್ಕೃತಿಯಾಗಿ ಬಂದಿದೆ. ಅದು ಆತ್ಮ ವಿಶ್ವಾಸವನ್ನು ಬೆಳೆಸಬೇಕಿತ್ತು. ಆದರೆ ಅದು ಅಹಂಕಾರವನ್ನೂ ಒಣ ಪ್ರತಿಷ್ಠೆಯನ್ನೂ ಮೇಲರಿಮೆಯನ್ನೂ ಬೆಳೆಸಿದೆ. ವಿಶ್ವ ಮಟ್ಟದಲ್ಲಿ ಇಂದು ಇಂಗ್ಲಿಷ್‌ ಭಾಷೆ ಕೇವಲ ಸಂವಹನದ ನೆಲೆಯಲ್ಲಿ ವರ್ತಿಸುವುದಿಲ್ಲ. ಅದು ಆರ್ಥಿಕ, ಔದ್ಯೋಗಿಕ, ಸಾಮಾಜಿಕ ನೆಲೆಗಳಲ್ಲಿಯೂ ಪ್ರವರ್ತಿಸುತ್ತಿದೆ.

ಕರ್ನಾಟಕದಲ್ಲಿರುವ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಕಡ್ಡಾಯವಾಗಿ ಕನ್ನಡವಾಗಿರಬೇಕು ಎಂಬ ಚರ್ಚೆ ಮೂರು ದಶಕಗಳಷ್ಟು ಹಳೆಯದು. 80ರ ದಶಕಗಳಲ್ಲಿ ಸರಕಾರಿ ಮಾನ್ಯತೆಯುಳ್ಳ ಶಾಲೆಗಳಲ್ಲಿ ಪ್ರಾಥಮಿಕ ಹಂತಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣವಿರಬೇಕೆಂದೂ ಮತ್ತು ಈ ಶಾಲೆಗಳಲ್ಲಿ ಹೈಸ್ಕೂಲ್‌ವರೆಗಿನ ಶಿಕ್ಷಣದಲ್ಲಿ ಪ್ರಥಮ ಭಾಷೆ ಕನ್ನಡವಾಗಿರಬೇಕೆಂದು ಕೆಲವು ಸರಕಾರಿ ವರದಿಗಳು ಮತ್ತು ಶಾಸನಬದ್ಧ ಅಧಿಸೂಚನೆಗಳು ಕರ್ನಾಟಕದಲ್ಲಿ ಬಂದುವು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟು, ಭಾಷಾ ಮಾಧ್ಯಮದ ಆಯ್ಕೆಯ ಹಕ್ಕನ್ನು ವಿದ್ಯಾರ್ಥಿಗಳ ಪಾಲಕರಿಗೆ ಕೊಟ್ಟದ್ದು, ಕನ್ನಡ ಭಾಷಾ ಮಾಧ್ಯಮ ಹೋರಾಟಕ್ಕೆ ಹಿನ್ನಡೆಯಾಗಿದೆ. ಇದರ ಮಧ್ಯದಲ್ಲಿ ಉದಾರೀಕರಣ, ಜಾಗತೀಕರಣ, ನಗರೀಕರಣ, ಖಾಸಗೀಕರಣಗಳು ಕನ್ನಡ ಅಂತಃಕರಣವನ್ನು ಹಿಂಡಿ ಹಿಪ್ಪೆಮಾಡಿವೆ. ಉದ್ಯೋಗ ಕೇಂದ್ರಿತ, ವಿಜ್ಞಾನ ಕೇಂದ್ರಿತ ಬೋಧನೆಯ ಶಿಕ್ಷಣ ಪದ್ಧತಿಯಿಂದ ಕನ್ನಡ ಭಾಷೆ, ಸಾಹಿತ್ಯ ಮೂಲೆಗುಂಪಾಗಿದೆ. ಕನ್ನಡ ಮಾತನಾಡುವವರು ಈ ಕೀಳರಿಮೆಯನ್ನು ಅನುಭವಿಸುವಂತಾಗಿದೆ. ಇಂಗ್ಲಿಷ್‌ ಮಾತನಾಡುವವರು ಆಧುನಿಕ ಬಿಳಿಯರ ಮರ್ಜಿಗೆ ಏರಿ ಹೋಗಿದ್ದಾರೆ. ಕನ್ನಡ ಕಲಿತರೆ ಅನ್ನ, ಆತ್ಮಾಭಿಮಾನ ಸಿಗುವುದರ ಬಗ್ಗೆ ಯುವ ತಲೆಮಾರಿಗೆ ಸಂದೇಹ ಬರತೊಡಗಿದೆ. ಈ ಸಂದೇಹವನ್ನೇ ಮೂಲಬಂಡವಾಳವನ್ನಾಗಿ ಮಾಡಿಕೊಂಡು ಖಾಸಗಿ ಇಂಗ್ಲಿಷ್‌ ಶಿಕ್ಷಣ ಕೇಂದ್ರಗಳು ಕನ್ನಡಿಗರ ಬೆವರನ್ನೂ ರಕ್ತವನ್ನೂ ಹೀರುತ್ತಿವೆ.

ಈ ಸ್ಥಿತಿಯಲ್ಲಿ ಕನ್ನಡಿಗರಲ್ಲಿ ಮತ್ತೆ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಹೇಗೆಂದು ಯೋಚಿಸಬೇಕಾಗಿದೆ. ಸದ್ಯ ಮೂರು ರೀತಿಯ ಕನ್ನಡ ಪ್ರಜ್ಞೆಗಳನ್ನು ಗುರುತಿಸಬಹುದು. ಅವುಗಳೆಂದರೆ ಕುಂಭಕರ್ಣ ಪ್ರಜ್ಞೆ, ಲಕ್ಷ್ಮಣ ಪ್ರಜ್ಞೆ ಮತ್ತು ಹನುಮ ಪ್ರಜ್ಞೆ. ವರ್ಷಕ್ಕೊಮ್ಮೆ ಮಾತ್ರ ಜಾಗೃತವಾಗುವ‌ ಪ್ರಜ್ಞೆಯನ್ನು ಕುಂಭಕರ್ಣ ಪ್ರಜ್ಞೆ ಎಂದು ಕರೆಯುವರು. ವರ್ಷಕ್ಕೊಮ್ಮೆ ನಡೆಯುವ ಅಖೀಲ ಭಾರತೀಯ ಸಾಹಿತ್ಯ ಸಮ್ಮೇಳನಗಳು ಈ ಪ್ರಜ್ಞೆಗೆ ಸೇರುತ್ತವೆ. ರಾಜ್ಯದ ಗಡಿಪ್ರದೇಶಗಳಲ್ಲಿ ಆಗಲಿ ಅಥವಾ ರಾಜ್ಯದ ಒಳಗಡೆಯೇ ಆಗಲಿ ಕನ್ನಡ ಭಾಷೆಗೆ, ಸಂಸ್ಕೃತಿಗೆ  ಆತಂಕ, ಆಕ್ರಮಣಗಳಾದಾಗ ಕನ್ನಡ ಪರ ಹೋರಾಟ ಮಾಡುವ ಪ್ರಜ್ಞೆಯೇ ಲಕ್ಷ್ಮಣ ಪ್ರಜ್ಞೆ. ಇದು ಕನ್ನಡಕ್ಕೆ ಹೊರಗಿನ ವೈರಿಗಳು ಬರದಂತೆ ಕಾಪಾಡುತ್ತದೆ. ಕನ್ನಡವನ್ನು ಸದಾ ತನ್ನ ಹೃದಯದಲ್ಲಿ ಜಾಗೃತ ಸ್ಥಿತಿಯಲ್ಲಿಡುವುದು ಹನುಮ ಪ್ರಜ್ಞೆಯಾಗಿದೆ. ಇದು ವ್ಯಕ್ತಿಯ ಒಳಗಿನ ವೈರಿಗಳನ್ನು ತಡೆಯುತ್ತದೆ. ಉಳಿದೆಲ್ಲ ಪ್ರಜ್ಞೆಗಳು ಹನುಮ ಪ್ರಜ್ಞೆಗೆ ಪೂರಕವಾಗಿರಬೇಕು. 

ಕನ್ನಡಪರ ಬೆಳವಣಿಗೆಗಳು, ಚಳವಳಿಗಳು ಕ್ಷಣಿಕ ಸುಖದ ಬಬ್ಬಲ್‌ಗ‌ಮ್‌ಗಳಾಗದೆ ಕನ್ನಡ ಸಂವರ್ಧನೆಯಾಗಬೇಕು.
ನಮ್ಮ ರಾಜ್ಯದ ಕನ್ನಡ ಶಾಲೆಗಳು ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಹೊಂದಬೇಕಾಗಿದೆ. ಕನ್ನಡ ಪಠ್ಯಪುಸ್ತಕಗಳ ಗುಣ
ಮಟ್ಟ, ಬೋಧನೆಯ ರೀತಿ ಉತ್ತಮ ಮತ್ತು ಆಕರ್ಷಕವಾ ಗಿದೆ. ಸಕಾಲದಲ್ಲಿ  ಅದು ಹೊರಬರಬೇಕಾಗಿದೆ. ಕನ್ನಡ ಭಾಷಾ ಬೋಧನೆಯಲ್ಲಿ ಬಳಸುವ ಭಾಷೆ ಕೇವಲ ಸಂತೆಯ ಭಾಷೆ ಯಾಗದೆ ಸಾಹಿತ್ಯದ ಭಾಷೆಯನ್ನು ಬಳಸಬೇಕಾಗಿದೆ. ಆ ಮೂಲಕ ವಿದ್ಯಾರ್ಥಿಗಳನ್ನು ಕನ್ನಡ ಭಾಷೆಯ ಕಡೆಗೆ ಆಕರ್ಷಿಸಬೇಕು. ಇದಕ್ಕಾಗಿ ಕನ್ನಡ ಅಧ್ಯಾಪಕರು ವಿಶೇಷ ಅಧ್ಯಯನ ಮತ್ತು ವಿಶೇಷ ಆಸಕ್ತಿಗಳನ್ನು ಬೆಳೆಸಿಕೊಳ್ಳಬೇಕು. ಬಹಳ ಮುಖ್ಯವಾಗಿ ಕನ್ನಡ ಕಲಿತವರಿಗೆ ಅನ್ನ, ಆತ್ಮಗೌರವ ಸಿಗಬೇಕು. ಇದಕ್ಕೆ ಬೇಕಾದ ವ್ಯವಸ್ಥೆ ಸರಕಾರ ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ಓದಿ ವಿಶ್ವ ಮಟ್ಟದ ಕೀರ್ತಿ ಪಡೆದ ಸಾಹಿತಿಗಳ, ವಿಜ್ಞಾನಿಗಳ, ಕಲಾವಿದರ, ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಬೇಕು. 

ಇಂದು ಕನ್ನಡ ಸಂಸ್ಕೃತಿ ಎಂಬುದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಯುರೋಪ್‌, ಜರ್ಮನಿ, ಅಮೆರಿಕ, ಆಸ್ಟ್ರೇ ಲಿಯ, ನ್ಯೂಜಿಲ್ಯಾಂಡ್‌, ಗಲ್ಫ್ ದೇಶಗಳೇ ಮೊದಲಾದ ಖಂಡಾಂತರಗಳಲ್ಲಿ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಗುಜರಾತ್‌, ಕಲ್ಕತ್ತಾ, ದಿಲ್ಲಿ ಮೊದಲಾದ ರಾಜ್ಯಗಳಲ್ಲಿ ಕನ್ನಡ ಅಧ್ಯಯನ ಪೀಠಗಳು, ಕನ್ನಡ ಪರ ಸಂಘಟನೆಗಳು ಇವೆ. ಇವುಗಳಲ್ಲದೆ ಬೆಳಗಾವಿ, ಹೈದ್ರಾಬಾದ್‌, ಬಳ್ಳಾರಿ, ಸೋಲಾಪುರ, ಅಕ್ಕಲಕೋಟೆ, ರಾಯಚೂರು, ಬೀದರ್‌, ಕಾಸರಗೋಡು ಮೊದಲಾದ ಗಡಿಪ್ರದೇಶಗಳಲ್ಲಿ ಕೂಡ ಕನ್ನಡ ಸಂಘಟನೆಗಳ‌ ಮೂಲಕ ಕನ್ನಡದ ಸಂಸ್ಕೃತಿಯನ್ನು ಜಾಗೃತಗೊಳಿಸುವ, ಉಳಿಸುವ ಪ್ರಯತ್ನಗಳು ನಡೆಯುತ್ತಿವೆ. ಕನ್ನಡದ ಸಾಂಸ್ಕೃತಿಕ ಪರಿಸರವನ್ನು ಜೀವಂತವಾಗಿ ಇಟ್ಟುಕೊಳ್ಳಲು ಕನ್ನಡದ ಚಟುವಟಿಕೆಗಳನ್ನು ನಿರಂತರವಾಗಿ ಇವು ಮಾಡುತ್ತಿವೆ. ಅನ್ಯ ಪ್ರದೇಶಗಳಲ್ಲಿರುವ ಈ ಕನ್ನಡಿಗರಿಗೆ ಸಾಂಸ್ಕೃತಿಕ ಅನನ್ಯತೆಗೆ ಇದು ಅನಿವಾರ್ಯವಾಗಿದೆ. ಜಗತ್ತಿನ ಬೇರೆ ಬೇರೆ ಕಡೆ ಇರುವ ಇಂಥ ಸಣ್ಣ ಸಣ್ಣ ಕನ್ನಡದ ತೊರೆಗಳಿಂದಲೇ ಕನ್ನಡದ ಕಡಲು ತುಂಬಬೇಕಾಗಿದೆ. 

ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳಿಗೆ ಸಕಾಲದಲ್ಲಿ ಪಠ್ಯ ಪುಸ್ತಕಗಳ ವಿತರಣೆ, ಯೋಗ್ಯ ಸೌಲಭ್ಯಗಳ ರೂಪೀಕರಣ, ಅಲ್ಲಿನ ಕನ್ನಡ ಸಂಘ ಸಂಸ್ಥೆಗಳಿಗೆ ಕನ್ನಡ ಚಟುವಟಿಕೆಗಳಿಗೆ ಸಹಾಯ ಧನ ವಿತರಣೆ ಇಂಥ ಕೆಲಸವನ್ನು ಸರಕಾರ ಈಗಾಗಲೇ ಮಾಡುತ್ತಿದೆ. ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕಾ ಗಿದೆ. ಕಾಸರಗೋಡಿನಂಥ ಗಡಿಪ್ರದೇಶ ರಾಜಕೀಯವಾಗಿ ಕೇರಳದಲ್ಲಿದೆ. ಅದರ ಮೇಲೆ ಮಲೆಯಾಳ ಭಾಷೆಯ ನಿರಂತರ ಆಕ್ರಮಣ ನಡೆಯುತ್ತಿದ್ದರೂ ಅಲ್ಲಿ ಈಗ 189 ಕನ್ನಡ ಶಾಲೆಗಳು, 2 ಕಾಲೇಜುಗಳು ಮತ್ತು ಒಂದು ಶಿಕ್ಷಣ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿನ ಅನೇಕ ಕನ್ನಡ ಪರ ಸಂಘಟನೆಗಳು ನಿರಂತರ ಕನ್ನಡ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಮಾತ್ರವಲ್ಲದೆ ಅಲ್ಲಿನ ಕನ್ನಡಿಗರು ತಮ್ಮ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿದ್ದಾರೆ. ಅಲ್ಲಿನ ಪ್ರಾಥಮಿಕ ಮತ್ತು ಹೈಸ್ಕೂಲಿನ ಕನ್ನಡ ಪಠ್ಯ ಪುಸ್ತಕಗಳು ಗುಣ ಮಟ್ಟದಲ್ಲಿ ಕರ್ನಾಟಕಕ್ಕೆ ಮಾದರಿಯಾಗುವಂತಿವೆ. ಇದೆಲ್ಲವೂ ಅಲ್ಲಿನ ಕನ್ನಡಿಗರ ಕನ್ನಡ ಪ್ರೀತಿಯಿಂದ ನಡೆಯುತ್ತಿವೆ. ಇಂಥ ಕೆಲಸಗಳು ಎಲ್ಲಾ ಗಡಿಪ್ರದೇಶಗಳಲ್ಲಿ ನಡೆದಾಗ ಕನ್ನಡ ದೀಪ ನಂದಲು ಸಾಧ್ಯವಿಲ್ಲ.

ನಮ್ಮ ಮಕ್ಕಳನ್ನು ನಾವು ಯಾವ ಶಾಲೆಗಳಲ್ಲಿ ಓದಿಸುತ್ತಿ ದ್ದೇವೆ? ನಾವು ಯಾವ ಪತ್ರಿಕೆಗಳನ್ನು ಓದುತ್ತಿದ್ದೇವೆ? ನಾವು ನೋಡುವುದು ಯಾವ ಭಾಷೆಯ ಸಿನಿಮಾವನ್ನು? ನಮ್ಮ ಮನೆಯ ಬೋರ್ಡ್‌ ಯಾವ ಭಾಷೆಯಲ್ಲಿದೆ? ನಮ್ಮ ಲೆಟರ್‌ ಹೆಡ್‌ಗಳು ಯಾವ ಭಾಷೆಯಲ್ಲಿ ಅಚ್ಚಾಗಿವೆ? ನಮ್ಮ ಮನೆಯ ಲಗ್ನ ಪತ್ರಿಕೆ ಅಚ್ಚಾಗಿರುವುದು ಯಾವ ಭಾಷೆಯಲ್ಲಿ? ನಾವು ಬ್ಯಾಂಕ್‌ಗಳಿಗೆ ಚೆಕ್‌ ಬರೆಯುವುದು ಯಾವ ಭಾಷೆಯಲ್ಲಿ? ನಾವು ಬರೆಯುವ ಪತ್ರದಲ್ಲಿ ಎಷ್ಟು ಭಾಗ ಕನ್ನಡ ಇದೆ? ಇಂಥ ನೂರಾರು ಪ್ರಶ್ನೆಗಳನ್ನು ನಾವು ಕೇಳಬೇಕು. ಅವುಗಳ ಉತ್ತರ ನಮ್ಮನ್ನು ಚುಚ್ಚದ್ದಿದ್ದರೆ ನಾವು ಕನ್ನಡಿಗರು ಎಂದು ಹೇಳಿಕೊಳ್ಳುವ ಯೋಗ್ಯತೆ ಪಡೆದಿದ್ದೇವೆ ಎಂದು ಅರ್ಥ” ಎಂಬ ಹಾ. ಮಾ. ನಾಯಕರ ಮಾತನ್ನು ಸದಾ ನೆನೆಪಿನಲ್ಲಿಡಬೇಕು. ಆಗ ಕನ್ನಡ ಎಂಬುದು ಸಂಸ್ಕೃತಿ ಮಂದಿರವಾಗುತ್ತದೆ. ಇಲ್ಲದೆ ಹೋದರೆ ಅದು ಕೇವಲ ಅಸ್ಥಿಪಂಜರವಾಗುತ್ತದೆ.

– ಟಿ. ಎ. ಎನ್‌. ಖಂಡಿಗೆ

Advertisement

Udayavani is now on Telegram. Click here to join our channel and stay updated with the latest news.

Next