Advertisement

ಭುವನೇಶ್ವರಿ ಮುಂದೆ ನಂದದ ಕನ್ನಡ ದೀಪ

04:24 PM Nov 01, 2018 | |

ನರೇಗಲ್ಲ: ಹೆಸರಿಗೆ ತಕ್ಕಂತೆ ಅದು ದೊಡ್ಡ ಮನೆ. ಬೀದಿಯಲ್ಲಿ ಹಾದು, ನಡುಮನೆ ಮೆಟ್ಟಿಲು ಹತ್ತಿ, ಬಲಕ್ಕೆ ತಿರುಗಿ ದೇವರ ಮನೆ ಹೊಕ್ಕರೆ ಆಳೆತ್ತರದ ತೈಲ ವರ್ಣದ ಭುವನೇಶ್ವರಿ ದೇವಿ ಚಿತ್ರಪಟ ಕಣ್ಣಿಗೆ ಬೀಳುತ್ತದೆ. ಅಚ್ಚುಕಟ್ಟಾಗಿ ಕಟ್ಟು ಹಾಕಿಸಿಟ್ಟಿರುವ ದೇವಿ ಪಟದ ಮುಂದೆ ಸದಾ ಕನ್ನಡದ ದೀಪ ಬೆಳಗುತ್ತಲೆ ಇರುತ್ತದೆ.

Advertisement

ಕರ್ನಾಟಕ ಏಕೀಕರಣಕ್ಕೆ ಗದಗ ಜಿಲ್ಲೆ ಕೊಡುಗೆ ಅಪಾರ. ಅದರಲ್ಲೂ ನರೇಗಲ್ಲ ಹೋಬಳಿ ವ್ಯಾಪ್ತಿಗೆ ಬರುವ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಅವರ ಹೋರಾಟ, ಸಂಘಟನೆ ಶಕ್ತಿ ಅನುಪಮ. ಜೀವನದುದ್ದಕ್ಕೂ ಕರ್ನಾಟಕ ಏಕೀಕರಣ, ಅಭಿವೃದ್ಧಿಯನ್ನೆ ಉಸಿರಾಗಿಸಿಕೊಂಡಿದ್ದ ದೊಡ್ಡಮೇಟಿ ಅವರ ಮನೆಯಲ್ಲಿ ನಿತ್ಯವೂ ಭುವನೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲುತ್ತದೆ.

ಶ್ರೀ ಭುವನೇಶ್ವರಿ ದೊಡ್ಡಮೇಟಿ ಕುಟುಂಬದ ಮನೆದೇವತೆಯೇ ಆಗಿದ್ದಾಳೆ. 65 ವರ್ಷಗಳಿಂದ ದಿನವೂ ತಪ್ಪದೇ ದೇವಿ ಪೂಜಿಸಲ್ಪಡುತ್ತಾಳೆ. ಕನ್ನಡದ ನಂದಾದೀಪ ಸದಾ ಬೆಳಗುತ್ತದೆ. ಗ್ರಾಮಕ್ಕೆ ಭೇಟಿ ನೀಡುವ ಕನ್ನಡ ಪ್ರೇಮಿಗಳು, ಹೋರಾಟಗಾರರು ದೇವಿ ಗಾಂಭೀರ್ಯ ಕಣ್ತುಂಬಿಕೊಳ್ಳದೇ ಹಿಂದಿರುಗಲಾರರು. ಅಷ್ಟರ ಮಟ್ಟಿಗೆ ಕಲಾಕೃತಿ ಪ್ರತಿಯೊಬ್ಬರ ಹೃದವನ್ನು ಗೆಲ್ಲುತ್ತದೆ.

ಕಲಾಕೃತಿ ವಿಶೇಷ: ಇಡೀ ರಾಜ್ಯದಲ್ಲಿ ತೈಲ ವರ್ಣದಲ್ಲಿ ರಚನೆಯಾದ ಪ್ರಪ್ರಥಮ ಭುವನೇಶ್ವರಿ ದೇವಿ ಕಲಾಕೃತಿ ಇದು. ಹೋರಾಟಗಾರರಿಗೆ ಸ್ಫೂತಿ ತುಂಬಲೆಂದು ಜನವರಿ 1953 ರಲ್ಲಿ ಜಕ್ಕಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಏಕೀಕರಣ ಶಿಬಿರದಲ್ಲಿ ಗದಗ ಮಾಡೆಲ್‌ ಹೈಸ್ಕೂಲ್‌ ಚಿತ್ರಕಲಾ ಶಿಕ್ಷಕ ಸಿ.ಎನ್‌. ಪಾಟೀಲರು ಈ ಕಲಾಕೃತಿ ರಚಿಸಿದ್ದರು. ಕಲಾಕೃತಿ ರಚನೆಗೆ ಅಂದಾನಪ್ಪ ಕರ್ನಾಟಕ ಮಹಿಮ್ನಃ ಸ್ತೋತ್ರ ಕೃತಿ ಪ್ರೇರಣೆ. ಇಂದು ಎಲ್ಲೆಡೆ ಕಾಣುವಂಥ ಭುವನೇಶ್ವರಿ ದೇವಿ ಚಿತ್ರದಂತಲ್ಲ ಇದು. ಕರ್ನಾಟಕ ನಕಾಶೆಯನ್ನು ಆವರಿಸಿಕೊಂಡಿರುವ ದೇವಿ ಚಿತ್ರದ ಹಿನ್ನೆಲೆ ಸೂರ್ಯ, ಚಂದ್ರ, ನಕ್ಷತ್ರಗಳು ಕಂಗೊಳಿಸುತ್ತವೆ. ವಿಶ್ವ ಇರುವವರೆಗೂ ಕನ್ನಡನಾಡು ಇರುತ್ತದೆ ಎಂಬ ಕಲ್ಪನೆ ಇದರಲ್ಲಿ ಸಾಕಾರಗೊಂಡಿದೆ. ಕಲಾಕೃತಿಯಲ್ಲಿ 16 ಶಾಕ್ತಪೀಠಗಳನ್ನು ಸಂಕೇತಿಸಲಾಗಿದೆ. ತ್ರಿಶೂಲ, ಕಲಮ, ಪುಸ್ತಕ ಹಿಡಿದ ದೇವಿ ಲಕ್ಷ್ಮೀ, ಸರಸ್ವತಿ, ಪರಮೇಶ್ವರಿಯನ್ನು ಹೋಲುತ್ತಾಳೆ.

ಎರಡ್ಮೂರು ವರ್ಷಗಳ ಹಿಂದಿನವರೆಗೂ ಇದೇ ಕಲಾಕೃತಿಯನ್ನು ರೋಣ ತಾಲೂಕಾಡಳಿತ ಪ್ರತಿ ವರ್ಷ ರಾಜ್ಯೋತ್ಸವದಂದು ಮೆರವಣಿಗೆ ಮಾಡುತ್ತಿತ್ತು. ಮತ್ತೆ ಸಂಜೆ ಗ್ರಾಮದಲ್ಲೂ ಮೆರವಣಿಗೆ ನಡೆಯುತ್ತಿತ್ತು. ನವರಾತ್ರಿ ಸಂದರ್ಭ ಮನೆ ಆವರಣದಲ್ಲಿ ಕಲಾಕೃತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಗ್ರಾಮದ ಪ್ರತಿಯೊಬ್ಬರೂ ದೇವಿಗೆ ಬನ್ನಿ ಅರ್ಪಿಸಿ ಪುನೀತರಾಗುತ್ತಾರೆ ಎಂದು ಕುಟುಂಬದ ಕುಡಿ ಹಾಗೂ ತಾ.ಪಂ ಸದಸ್ಯ ಅಂದಾನಪ್ಪ (ಸಂದೇಶ) ದೊಡ್ಡಮೇಟಿ ತಿಳಿಸಿದರು.ಸಿಕಂದರ ಎಂ.ಆರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next