ನವದೆಹಲಿ: ಕನ್ನಡ ಸೇರಿದಂತೆ ಇನ್ನುಮುಂದೆ ದೇಶದ 13 ಪ್ರಾದೇಶಿಕ ಭಾಷೆಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಫಿಎಫ್)ಯ ಪರೀಕ್ಷೆ ಬರೆಯಲು ಕೇಂದ್ರಸರ್ಕಾರ ಅನುಮತಿ ನೀಡಿದೆ. ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗೆ ಪ್ರಾಧಾನ್ಯತೆ ನೀಡುವ ಕೂಗು ಕೇಳಿಬಂದಿದ್ದ ಬೆನ್ನಲ್ಲೇ, ಕೇಂದ್ರಸರ್ಕಾರ ತೆಗೆದುಕೊಂಡಿರುವ ಈ ಐತಿಹಾಸಿಕ ನಿರ್ಣಯ ಮಹತ್ವ ಪಡೆದುಕೊಂಡಿದೆ.
ಸಿಎಪಿಫ್ನಲ್ಲಿ ಯುವಜನರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾನ್‌ಸ್ಟೆಬಲ್ (ಜಿಡಿ)ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸುವ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದು ಸ್ಥಳೀಯ ಭಾಷೆಗಳನ್ನು ಉತ್ತೇಜಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈಗಾಗಲೇ ಹಿಂದಿ-ಇಂಗ್ಲೀಷ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಇದರ ಜತೆಗೆ ಹೊಸದಾಗಿ 13 ಭಾಷೆಗಳು ಸೇರ್ಪಡೆಗೊಳ್ಳುತ್ತಿವೆ. ಸಿಎಪಿಎಫ್ನ ಅಡಿಯಲ್ಲಿ ಬರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ) ಹಾಗೂ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (ಎನ್‌ಸಿಜಿ) ಪರೀಕ್ಷೆಗಳಿಗೂ ಇದು ಅನ್ವಯವಾಗಲಿದೆ.
ಕೇಂದ್ರದ ನಿರ್ಣಯವನ್ನು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಗೋವಾ ಸಿಎಂ ಪ್ರಮೋದ್ ಸಾವಂತ್, ತಮಿಳು ನಾಡು ಸಿಎಂ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವರು ಸ್ವಾಗತಿಸಿ, ಧನ್ಯವಾದ ತಿಳಿಸಿದ್ದಾರೆ.
13 ಪ್ರಾದೇಶಿಕ ಭಾಷೆಗಳಿವು
ಕನ್ನಡ, ತಮಿಳು, ಮಲಯಾಳಂ, ಉರ್ದು, ತೆಲುಗು, ಅಸ್ಸಾಮಿ, ಬಂಗಾಳಿ, ಗುಜರಾತಿ, ಕೊಂಕಣಿ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ
13 ಸ್ಥಳೀಯ ಭಾಷೆಗಳಲ್ಲೂ ಸಿಎಪಿಎಫ್ ಪರೀಕ್ಷೆ ಬರೆಯಲು ಅವಕಾಶ ನೀಡುವ ನಿರ್ಣಯ ತೆಗೆದುಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿರ್ಣಯದಿಂದ ಅಭ್ಯರ್ಥಿಗಳು ತಮ್ಮ ಸ್ಥಳೀಯ ಭಾಷೆಗಳಲ್ಲೇ ಪರೀಕ್ಷೆ ಬರೆಯಲು ಸಹಾಯವಾಗಲಿದೆ
– ಬಸವರಾಜ ಬೊಮ್ಮಾಯಿ, ಕರ್ನಾಟಕ ಮುಖ್ಯಮಂತ್ರಿ