ಮುಂಬಯಿ: ಕನ್ನಡ ಭಾಷೆಯ ಬಗೆಗಿನ ಕೀಳರಿಮೆಯೇ ಕನ್ನಡ ಭಾಷೆಯ ಆತಂಕಕ್ಕೆ ಕಾರಣವಾಗಿದೆ. ಅದು ಬಸವಣ್ಣ, ಪಂಪ ಹಾಗೂ ಕನಕರು ಬೇರೆ ಯಾವ ಭಾಷೆಯ ಆಧಾರವನ್ನಿಟ್ಟು ಕೊಳ್ಳದೆ ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ಪರಿಚಯಿಸಿದರು. ಆದರೆ ಇಂದು ಸಾಹಿತ್ಯ ರಚಿಸುವಾಗ ಹಾಗೂ ಕನ್ನಡ ಮಾತನಾಡುವಾಗಲೂ ಇಂಗ್ಲಿಷ್ ಭಾಷೆಯನ್ನು ಆಧಾರವಾಗಿಟ್ಟು ಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ ಎಂದು ಸಾಹಿತಿ ವರದರಾಜ ಚಂದ್ರಗಿರಿ ಅವರು ನುಡಿದರು.
ಸೆ. 3ರಂದು ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ಡೊಂಬಿವಲಿ ಕರ್ನಾಟಕ ಸಂಘದ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ -10 ಕಲಾ ಸಂಗಮ ಸಂಭ್ರಮದಲ್ಲಿ ನಡೆದ ಕನ್ನಡ-ಕನ್ನಡಿಗ-ಕರ್ನಾಟಕ ಒಂದು ಚಿಂತನೆ ಎಂಬ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಶಿಕ್ಷಣದ ಮುಖಾಂತರ ಆಧುನಿಕತೆಯ ಕಡೆಗೆ ದಾಪುಗಾಲು ಹಾಕುತ್ತಿದ್ದೇವೆ. ಆದರೆ ಈ ಆಧುನಿಕತೆಯ ಭರಾಟೆಯಲ್ಲಿ ಕನ್ನಡ ಭಾಷೆಯಿಂದ ದೂರ ಹೋಗುತ್ತಿದ್ದೇವೆ. ಕನ್ನಡ ಸಾಹಿತ್ಯ ಅನೇಕ ಮಜಲುಗಳನ್ನು ದಾಟಿ ಬಂದಿದೆ. ವಿಕೇಂದ್ರಿಕರಣದ ಎಲ್ಲಾ ಹಂತಗಳು ಮುಗಿದು ಹೋಗಿದ್ದರೂ ಸಹಿತ ಸಮಸ್ಯೆಗಳಿಗೆ ಪರಿಹಾರವೇ ಸಿಕ್ಕಿಲ್ಲ ಎಂದು ಹೇಳಿದ ಅವರು ಇಂದಿನ ಯುವ ಸಮೂಹವನ್ನು ಸಂವೇದನಶೀಲರನ್ನಾಗಿ ಮಾಡುವ ಜವಾಬ್ದಾರಿ ಸಾಹಿತಿಗಳದ್ದಾಗಿದ್ದು, ಕನ್ನಡ ಸಾಹಿತ್ಯ ಜನಪರವಾಗದೆ ಜನಪರ ಸಾಹಿತ್ಯವಾಗಬೇಕು ಎಂದು ನುಡಿದರು.
ಗೋಷ್ಠಿಯಲ್ಲಿ ಭಾಗವಹಿಸಿದ ಇನ್ನೋರ್ವ ಸಾಹಿತಿ ಗಣನಾಥ ಎಕ್ಕಾರು ಅವರು, ಒಂದು ಕಾಲದಲ್ಲಿ ಜನರ ಬದುಕುವ ಸ್ಥಿತಿಯು ಸಂಸ್ಕೃತಿ, ಸಾಹಿತ್ಯವು ಸಂಸ್ಕೃತಿಯ ಒಂದು ಅಂಗವಾಗಿದ್ದು, ಸಂಸ್ಕೃತಿ ಅಲ್ಲಿನ ಭೌಗೋಳಿಕತೆಯ ಮೇಲೆ ಅವಲಂಬಿಸಿರುತ್ತಿತ್ತು. ಕನ್ನಡ ಸಾಹಿತ್ಯ ಕಲೆ ಇವೆಲ್ಲವೂ ಸಂಸ್ಕೃತಿಯನ್ನು ತಿಳಿಸುವ ಮಾಧ್ಯಮವಾಗಿದೆ. ಕರ್ನಾಟಕದ ಸಂಗತಿ ಎಲ್ಲಾ ಸಂಸ್ಕೃತಿಗಳ ಮಿಶ್ರಣವಿದ್ದು, ಎಲ್ಲಾ ಸಂಸ್ಕೃತಿಗಳು ನಮ್ಮದೆಂದು ತಿಳಿದಾಗ ಪ್ರತ್ಯೇಕ ರಾಜ್ಯದ ಪ್ರಶ್ನೆಯೇ ಬರುವುದಿಲ್ಲ. ಬಹುತ್ವ ಭಾರತದ ಸಂಸ್ಕೃತಿಯ ಲಕ್ಷಣವಾಗಿದ್ದು, ನಾವು ಇತರರ ಜಾನಪದ ಕಲೆಯನ್ನು ಗೌರವಿಸಬೇಕು. ಮುಂಬಯಿ ಕನ್ನಡ ಎಂಬುದು ಉಪಭಾಷೆ ಇದು ಕನ್ನಡ ಸಂಸ್ಕೃತಿಗೆ ನೀಡುವ ಕೊಡುಗೆಯಾಗಿದ್ದು, ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಆದ್ದರಿಂದ ನಮ್ಮ ಶ್ರೀಮಂತ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ-ಬೆಳೆಸಲು ಕಂಕಣಬದ್ಧರಾಗೋಣ ಎಂದು ಕರೆ ನೀಡಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ಕನ್ನಡ ವಿಭಾಗ ಮುಂಬಯಿ ವಿವಿ ವಿಶ್ರಾಂತ ಮುಖ್ಯಸ್ಥ ಡಾ| ತಾಳ್ತಜೆ ವಸಂತ್ ಕುಮಾರ್ ಅವರು ಮಾತನಾಡಿ, ನಮ್ಮ ಕನ್ನಡ ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದೆ. ಆದರೆ ನಾವು ನಮ್ಮ ವೈವಿಧ್ಯತೆಯ ಸಂಸ್ಕೃತಿಯಿಂದ ದೂರ ಹೋಗುತ್ತಿದ್ದು, ದುರ್ದೈವದ ಸಂಗತಿಯಾಗಿದ್ದು, ಇದರಿಂದ ವಿವಿಧತೆಯಲ್ಲೂ ಏಕತೆಯನ್ನು ಕಾಣುವ ನಮ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳಾದ ಡಾ| ದಾಕ್ಷಾಯಣಿ ಯಡಹಳ್ಳಿ, ಡಾ| ಸುನೀತಾ ಎಂ. ಶೆಟ್ಟಿ, ಡಾ| ಗಿರಿಜಾ ಶಾಸ್ತಿÅ, ಮೋಹನ್ ಮಾರ್ನಾಡ್, ಅಶೋಕ್ ಶೆಟ್ಟಿ, ಜಿ. ಟಿ. ಆಚಾರ್ಯ, ಡಾ| ಜಿ. ಪಿ. ಕುಸುಮಾ ಮೊದಲಾದವರು ಉಪಸ್ಥಿತರಿದ್ದರು. ಡೊಂಬಿವಲಿ ಕರ್ನಾಟಕ ಸಂಘದ ವತಿಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ಸಂಘದ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಸನತ್ ಕುಮಾರ್ ಜೈನ್ ವಂದಿಸಿದರು.
ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ವಿಠuಲ್ ಎ. ಶೆಟ್ಟಿ, ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ, ಉಪಾಧ್ಯಕ್ಷ ಡಾ| ದಿಲೀಪ್ ಕೋಪರ್ಡೆ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ ಎನ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಕುಲಾಲ್, ಸುವರ್ಣ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಸತೀಶ ಆಲಗೂರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಮಲಾ ವಿ. ಶೆಟ್ಟಿ, ಪ್ರಭಾಕರ ಶೆಟ್ಟಿ, ಎಸ್. ಎನ್. ಸೋಮಾ, ರಮೇಶ್ ಕಾಖಂಡಕಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ : ಗುರುರಾಜ ಪೋತನೀಸ್.