Advertisement

ಕನ್ನಡಕ್ಕೆ ಕುತ್ತು ತರುವಶಕ್ತಿ ಈವರೆಗೂ ಹುಟ್ಟಿಲ್ಲ; ರಾಜಾಹುಲಿಗೆ ಸಾಹಿತಿಗಳ ಬಹುಪರಾಕ್‌

11:48 AM Jan 07, 2023 | Team Udayavani |

ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ (ಹಾವೇರಿ): ಕನ್ನಡಕ್ಕೆ ಆಪತ್ತು ಎಂಬ ಆತಂಕದಿಂದ ಹೊರಬನ್ನಿ. ಕನ್ನಡಕ್ಕೆ ಆತಂಕ ತರುವ ಶಕ್ತಿ ಜಗತ್ತಿನಲ್ಲಿ ಈವರೆಗೆ ಹುಟ್ಟಿಲ್ಲ. ಮುಂದೆಯೂ ಹುಟ್ಟುವುದಿಲ್ಲ ಎಂಬ ಆತ್ಮವಿಶ್ವಾಸ ಹೊಂದಿರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಹಾವೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕೆ ತನ್ನದೇ ಆದ ಅಂತರ್‌ ಶಕ್ತಿ ಇದೆ. ಕನ್ನಡ ಸಂಸ್ಕೃತಿಗೆ ಭಾಷೆಯ ಕೊಡುಗೆ ದೊಡ್ಡದಿದೆ. ಕನ್ನಡ ಶ್ರೀಮಂತವಾಗಿದ್ದು ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಭಾಷೆ.

ಇದು ಕನ್ನಡಿಗರ ಬದುಕು ಬಹಳ ಪುರಾತನ ಹಾಗೂ ಶ್ರೇಷ್ಠ ಎಂಬುದನ್ನು ಸಾರುತ್ತದೆ. ಕನ್ನಡ ಸಂಸ್ಕೃತಿಗೆ ವಿಶಿಷ್ಟ ಶಕ್ತಿ ಇದ್ದು ಇಂಥ ವಿಶಿಷ್ಟ ಕನ್ನಡದ ಬೆಳವಣಿಗೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಅನೇಕರು ಒಟ್ಟಾಗಿ ಹೋರಾಡಿದ ಫಲವಾಗಿ ಕರ್ನಾಟಕ ರೂಪುಗೊಂಡಿದೆ. ಮೈಸೂರು ಎಂದಿದ್ದ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಟ್ಟ ದಿ| ದೇವರಾಜು ಅರಸು ಅವರನ್ನೂ ಈ ಸಂದರ್ಭದಲ್ಲಿ ನೆನೆಯಬೇಕು. ಕನ್ನಡನಾಡು ಸಂಪತ್ಭರಿತವಾಗಿದೆ.

ಕನ್ನಡ ನಾಡಿನ ಕೃಷಿ ಸಂಪತ್ತಿಗೆ ನಿಸರ್ಗದ ಕೊಡುಗೆ ಅಪಾರವಾಗಿದ್ದು ಇದಕ್ಕೆ ರೈತರ ಬೆವರು, ಕಾರ್ಮಿಕರ ಶ್ರಮ ಬೆರೆಸಿ ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕು ಕಟ್ಟಿ ಕೊಳ್ಳಲಾಗುತ್ತಿದೆ. ಸಮ್ಮೇಳನಾಧ್ಯಕ್ಷರಾದ ದೊಡ್ಡರಂಗೇಗೌಡರು ಹೆಸರಿನಂತೆ ದೊಡ್ಡ ಹೃದಯ, ಮನಸ್ಸುಳ್ಳವರಾಗಿದ್ದಾರೆ. ಜತೆಗೆ ಎಲ್ಲ ರಂಗಗಳಲ್ಲಿ ಪರಿ ಪೂರ್ಣರು ಎಂಬುದನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ಹೇಳಿದರು.

Advertisement

ರಾಜಾಹುಲಿಗೆ ಸಾಹಿತಿಗಳ ಬಹುಪರಾಕ್‌
ರಾಜಕೀಯ ಸಮಾವೇಶಗಳಲ್ಲಿ ಜೋರಾದ ಶಿಳ್ಳೆ, ಚಪ್ಪಾಳ್ಳೆಗಳು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸರ್ವೇ ಸಾಮಾನ್ಯ. ಆದರೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲೂ ಬಿಎಸ್‌ವೈಗೆ ಸಾಹಿತ್ಯ ಪ್ರೇಮಿಗಳು ಭರ್ಜರಿ ಕೂಗು, ಶಿಳ್ಳೆ, ಚಪ್ಪಾಳೆಗಳ ಮೂಲಕ ಬಹುಪರಾಕ್‌ ಹಾಕಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿಗಳು ತಮ್ಮ ಭಾಷಣದ ಸಂದರ್ಭದಲ್ಲಿ, ಸ್ವಾಗತಕಾರರು ಸ್ವಾಗತ ಭಾಷಣ ಮಾಡುವಾಗ ಅಷ್ಟೇ ಏಕೆ ಅತಿಥಿಗಳು ಭಾಷಣ
ಮಾಡುವಾಗೊಮ್ಮೆ ಬಿಎಸ್‌ವೈ ಹೆಸರು ಹೇಳುತ್ತಿದ್ದಂತೆಯೇ ಸೇರಿದ್ದ ಜನಸ್ತೋಮ ಶಿಳ್ಳೆ, ಚಪ್ಪಾಳೆ ಮೂಲಕ ಬಿಎಸ್‌ವೈಗೆ ಬಹುಪರಾಕ್‌ ಹಾಕಿದರು.

ನಾನೊಬ್ಬ ಕನ್ನಡದ ಸೇವಕ. ನಿಯತ್ತಿನ ಹಾಗೂ ಪ್ರಾಮಾಣಿಕ ಸೇವಕ. ಕನ್ನಡ ಭಾಷೆಗೆ ಹತ್ತು ಹಲವು ಸವಾಲಿದ್ದು ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಉಳಿಸಿ ಬೆಳೆಸಲು ಬೇಕಾದ ಸಮಗ್ರ ಕಾನೂನು ಸ್ವರೂಪ ಕೊಡಲಾಗುತ್ತಿದೆ.

● ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next