ಬೀದರ: ಕನ್ನಡ ಭಾಷೆಯು ತನ್ನದೇಯಾದ ಸುದೀರ್ಘ ಮತ್ತು ಶ್ರೇಷ್ಠವಾದ ಪರಂಪರೆ ಹೊಂದಿದೆ. ಕನ್ನಡ ಭಾಷೆ ಸತತವಾಗಿ ಬಳಸುವ ಮೂಲಕ ಬೆಳೆಸುವ ಮತ್ತು ಉಳಿಸುವ ಮಹತ್ವದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಪುಂಡಲೀಕರಾವ್ ಇಟಕಂಪಳ್ಳಿ ತಿಳಿಸಿದರು.
ನಗರದ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ “ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಬರವಣಿಗೆ ರೂಢಿಸಿಕೊಳ್ಳಬೇಕು. ಪ್ರತಿದಿನ ಕನ್ನಡ ದಿನಪತ್ರಿಕೆಗಳ ಓದು ಈ ನಿಟ್ಟಿನಲ್ಲಿ ತುಂಬಾ ಸಹಕಾರಿ ಎಂದು ಹೇಳಿದರು.
ಸಾಹಿತಿ ಶ್ರೀದೇವಿ ಖಂಡಾಳೆ ಉಪನ್ಯಾಸ ನೀಡಿ, ಕನ್ನಡ ಭಾಷೆ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿದ್ದು, ತನ್ನದೇಯಾದ ಲಿಪಿ ಹೊಂದುವ ಮೂಲಕ ಸಮೃದ್ಧವಾದ ಸಾಹಿತ್ಯದ ಫಸಲನ್ನು ಪಡೆದು ಜಗತ್ತಿನಾದ್ಯಂತ ತನ್ನ ಛಾಪನ್ನು ಮೂಡಿಸಿಕೊಂಡಿದೆ. ಹಲ್ಮಿಡಿ ಶಾಸನದಿಂದ ಪ್ರಾರಂಭವಾದ ಇದರ ಬೆಳವಣಿಗೆ ರಾಜಮನೆತನಗಳ ಕಾಲಾವಧಿಯಲ್ಲಿ ವಿಕಸಿತಗೊಳ್ಳುತ್ತಾ ಶ್ರೇಷ್ಠ ಹಾಗೂ ಜನಪರವಾದ ಭಾಷೆ, ಸಾಹಿತ್ಯವಾಗಿ ರೂಪಗೊಂಡಿದೆ. ಕನ್ನಡಿಗರು ಸ್ವಾಭಿಮಾನದ ಪ್ರತೀಕವಾಗಿದ್ದಾರೆ. ಅಖಂಡ ಕರ್ನಾಟಕ ರೂಪಗೊಳ್ಳಲು ಹಲವಾರು ಸಾಹಿತಿಗಳ, ಹೋರಾಟಗಾರರ, ಮುತ್ಸದಿಗಳ ಕೊಡುಗೆ ಸಾಕಷ್ಟಿದೆ ಎಂದರು.
ಜಾನಪದ ಗಾಯಕ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆಗೆ ಬ್ರಿಟಿಷ ವಿದ್ವಾಂಸರ ಕೊಡುಗೆ ತುಂಬಾ ದೊಡ್ಡದಿದೆ. ಕಿಟ್ಟಲ್ ಅವರು ವಿಶ್ವಕೋಶ ದಂತಹ ಉಪಯುಕ್ತ ಗ್ರಂಥ ನೀಡಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಸೀನಿಯರ್ ಫೆಲೋಶಿಪ್ ಪುರಸ್ಕೃತ ಡಾ| ಸುನಿತಾ ಕೂಡ್ಲಿಕರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಡಾ| ಅತಿವಾಳೆ ಅವರು ಸಾಹಿತ್ಯ ವೇದಿಕೆ ಮೂಲಕ ರಚನಾತ್ಮಕ ಹಾಗೂ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ವೇದಿಕೆ ಗೌರವಾಧ್ಯಕ್ಷ ಡಾ| ಸಂಜೀವಕುಮಾರ್ ಅತಿವಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿ ಜಿಲ್ಲೆ ಬೀದರನಲ್ಲಿ ಹೆಚ್ಚೆಚ್ಚು ಕನ್ನಡದ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟಿರುವ ಘಟನೆಗೆ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆಗಳು ಮುಂದೆ ಆಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು. ಡಾ| ರವೀಂದ್ರ ಲಂಜವಾಡಕರ್ ಸ್ವಾಗತಿಸಿದರು. ಸೃಜನ್ಯ ಅತಿವಾಳೆ ನಿರೂಪಿಸಿದರು. ಡಾ| ಶಾಮರಾವ ನೆಲವಾಡೆ ವಂದಿಸಿದರು.