Advertisement

ಕನ್ನಡ ಅನ್ನದ ಭಾಷೆಯಲ್ಲ, ಎಂದವರ್ಯಾರು?

03:05 PM Nov 01, 2021 | Team Udayavani |

“ಇಂಗ್ಲಿಷ್‌, ಹಿಂದಿ ಕಲಿಯಬೇಕು.. ಇಲ್ಲವಾದರೆ ಮುಂದೆ ಬದುಕು ಕಷ್ಟವಾಗಿಬಿಡುತ್ತದೆ. ಕೆಲಸ ಸಿಗುವುದಿಲ್ಲ. ಬದುಕು ಕಟ್ಟಿಕೊಳ್ಳಲಾಗದು’ ಇದು ನಮ್ಮ ಈಗಿನ ತಲೆಮಾರಿನ ವೇದವಾಕ್ಯವಾಗಿಬಿಟ್ಟಿದೆ. ಕನ್ನಡ ಕಲಿತರೆ ಹೊಟ್ಟೆ ತುಂಬುವುದಿಲ್ಲ ಎನ್ನುವ ನಾವು, ಮಕ್ಕಳಿಗೆ ಕನ್ನಡದ ಪರಿಚಯ ಮಾಡಿಸುವುದನ್ನೇ ಬಿಟ್ಟುಬಿಟ್ಟಿದ್ದೇವೆ. ಆದರೆ ಅದೇ ಕನ್ನಡದಲ್ಲಿ ವೃತ್ತಿ ಗಿಟ್ಟಿಸಿಕೊಂಡು, ಪ್ರತೀ ದಿನ ಅದನ್ನೇ ಕೆಲಸವಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡ ಹಲವರು ನಮ್ಮ ಮಧ್ಯೆಯಿದ್ದಾರೆ. ಕನ್ನಡ “ಅನ್ನದ ಭಾಷೆ’ಯಲ್ಲ ಎನ್ನುವವರಿಗೆ ಇಲ್ಲಿದೆ ನಮ್ಮ ಉತ್ತರ…

Advertisement

ವಿದೇಶದಲ್ಲೂ ಅಭಿಮಾನಿಗಳು
ಸುದರ್ಶನ್‌ ಭಟ್‌, ಭಟ್‌ ಆ್ಯಂಡ್‌ ಭಟ್‌ ಯೂಟ್ಯೂಬ್‌ ಚಾನೆಲ್‌
ಕೋವಿಡ್ ಸಮಯದಲ್ಲಿ ಸುಮ್ಮನೆ ಆರಂಭಿಸಿದ್ದು ಭಟ್‌ ಆ್ಯಂಡ್‌ ಭಟ್‌ ಯೂಟ್ಯೂಬ್‌ ಚಾನೆಲ್‌. ಆಮೇಲೆ ಅದರಲ್ಲೇ ಸ್ಥಳೀಯ ಸೊಗಡನ್ನ ಸೇರಿಸಿ ವೀಡಿಯೋ ಮಾಡಿದೆವು. ಅದಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತು. ಒಂದೂವರೆ ವರ್ಷದ ಹಿಂದೆ ಆರಂಭಿಸಿದ ಈ ಚಾನೆಲ್‌ಗೆ ಈಗ 5 ಲಕ್ಷ ಸಬ್‌ ಸ್ಕ್ರೈಬರ್ಸ್‌ ಇದ್ದಾರೆ. ಅಡುಗೆ ಜತೆ ನಮ್ಮ ಭಾಷೆ, ಸ್ಥಳೀಯತೆಯನ್ನೂ ಮೆಚ್ಚಿ ವೀಡಿಯೋ ನೋಡುತ್ತಾರೆ. ನಾನು ಕಾಸರಗೋಡಿನವನಾದರೂ ಕನ್ನಡದಲ್ಲೇ ವೀಡಿಯೋ ಮಾಡುತ್ತೇನೆ. ಕೇರಳದ ಜನರೂ ನನ್ನ ವೀಡಿಯೋಗಳನ್ನ ನೋಡಿ ಮೆಚ್ಚಿಕೊಳ್ತಾರೆ. ಯೂಟ್ಯೂಬ್‌ನಲ್ಲಿ ನಾವು ಹಾಕುವ ವೀಡಿಯೋ ಚೆನ್ನಾಗಿದ್ದರೆ ಭಾಷೆ ಎನ್ನುವುದು ಅಡ್ಡಿಯಾಗುವುದೇ ಇಲ್ಲ. ನಮ್ಮ ಚಾನೆಲ್‌ನ ವೀಡಿಯೋಗಳನ್ನು ಬರೀ ಕರ್ನಾಟಕ, ಬರೀ ಭಾರತವಲ್ಲ ವಿದೇಶದಲ್ಲಿರುವವರೂ ನೋಡ್ತಾರೆ. ಅವರಿಗಾಗಿಯೇ ನಾವು ಇಂಗ್ಲಿಷ್‌ನಲ್ಲಿ ಸಬ್‌ಟೈಟಲ್‌ ಹಾಕಲಾರಂಭಿಸಿ ದ್ದೇವೆ. 23 ವರ್ಷದವನಾದ ನನ್ನನ್ನು ಇವತ್ತು ಈ ಮಟ್ಟಿಗೆ ತರೋದಕ್ಕೆ ನನ್ನ ಭಾಷೆ, ನನ್ನ ಸ್ಥಳೀಯತೆ ಮತ್ತೆ ನನ್ನ ಕಂಟೆಂಟ್‌ ಕಾರಣ.

ಸರಕಾರಿ ಕೆಲಸ ಬೇಕಿಲ್ಲ, ಕನ್ನಡದಲ್ಲೇ ಬದುಕಿದೆ
ನಂದಿನಿ ರಮೇಶ್‌, ಸಂಭಾಷಣೆ ಬರಹಗಾರ್ತಿ
ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದೇ ಒಂದು ಕವನದಿಂದ ನನಗೆ ಜೀ ಕನ್ನಡದ ಡ್ರಾಮಾ ಜೂನಿಯರ್ಸ್‌ನಲ್ಲಿ ಸ್ಕ್ರಿಪ್ಟ್ ಬರೆಯುವ ಅವಕಾಶ ಸಿಕ್ಕಿತು. ಸರಕಾರಿ ಕೆಲಸದಲ್ಲಿದ್ದ ನಾನು 2 ತಿಂಗಳು ಯೋಚಿಸಿ ಆ ಕೆಲಸವನ್ನು ಬಿಟ್ಟು, ಟಿವಿ ಕ್ಷೇತ್ರಕ್ಕೆ ಬರುವ ನಿರ್ಧಾರ ಮಾಡಿದೆ. ಡ್ರಾಮಾ ಜೂನಿಯರ್ಸ್‌ ಆದ ಮೇಲೆ ಒಂದೆರೆಡು ತಿಂಗಳು ಏನು ಮಾಡಬೇಕು ಎನ್ನುವುದೂ ಗೊತ್ತಾಗದೆ, ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದೆ. ಆದರೆ ಈಗ ಒಂದು ದಿನವೂ ಪುರುಸೊತ್ತು ಇಲ್ಲದಷ್ಟು ಕೆಲಸ ನನ್ನ ಹುಡುಕಿಕೊಂಡು ಬರುತ್ತಿದೆ. 2016ರಲ್ಲಿ ಈ ಕ್ಷೇತ್ರಕ್ಕೆ ಬಂದ ನಾನು ಒಂದೇ ವರ್ಷದಲ್ಲಿ ಇಲ್ಲಿ ಒಳ್ಳೆ ಸ್ಥಾನ ತೆಗೆದುಕೊಂಡೆ. ಇವತ್ತು ಕಲರ್ಸ್‌ ಕನ್ನಡ, ಜೀ ಕನ್ನಡದ 3 ಧಾರವಾಹಿಗಳಿಗೆ ಸಂಭಾಷಣೆ ಬರೀತಿದೀನಿ. ಐದು ವರ್ಷದಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಒಂದೇ ಒಂದು ದಿನಕ್ಕೂ ನನ್ನ ಹೆಜ್ಜೆ ತಪ್ಪು ಎನಿಸಲಿಲ್ಲ. ಪ್ರತೀ ದಿನ ಹೆಮ್ಮೆಯೊಂದಿಗೆ ಬದುಕುತ್ತಿದ್ದೇನೆ. ಸರಕಾರಿ ಕೆಲಸದಲ್ಲಿದ್ದಾಗ ತಿಂಗಳಿಗೆ 3,000 ಇದ್ದ ಸಂಬಳವನ್ನ 9 ಸಾವಿರಕ್ಕೆ ಏರಿಸಿಕೊಳ್ಳೋದಕ್ಕೆ ವರ್ಷಗಟ್ಟಲೆ ಕಷ್ಟಪಟ್ಟಿದೆ. ಆದರೆ ಈ ಕ್ಷೇತ್ರದಲ್ಲಿ ಕೆಲವೇ ತಿಂಗಳಲ್ಲಿ ದಿನಕ್ಕೆ 9 ಸಾವಿರ ದುಡಿಯುವಷ್ಟು ಬೆಳೆದೆ.

ಇದನ್ನೂ ಓದಿ:ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆ! 2020ರ ಮಾಹಿತಿ ಹೊರ ಹಾಕಿದ ಕೇಂದ್ರ

ಬೇರೆ ರಾಜ್ಯದಲ್ಲೂ ಇದೆ ಅವಕಾಶ
ಸ್ಪರ್ಶ ಆರ್‌.ಕೆ, ಕಂಠದಾನ ಕಲಾವಿದೆ, ಗಾಯಕಿ
ಮನೆಯವರ ಸಂಪೂರ್ಣ ಬೆಂಬಲವಿದ್ದಿದ್ದರಿಂದ ನಾನು ಗಾಯಕಿಯಾಗಿ ವೃತ್ತಿ ಆರಂಭಿಸಿದೆ. ಆದರೆ ಕೊರೊನಾ ಬಂದ ಅನಂತರ ಯಾವುದೇ ಶೋಗಳು ಇಲ್ಲದಿದ್ದರಿಂದ ಕೆಲಸ ಇಲ್ಲದಂತಾಗಿತ್ತು. ಆ ಸಮಯದಲ್ಲಿ ಕನ್ನಡದಲ್ಲಿ ಡಬ್ಬಿಂಗ್‌ ಧಾರಾವಾಹಿಗಳು ಆರಂಭವಾದವು. ಮೊದಲೇ ಎರಡು ಸಿನೆಮಾಗಳಿಗೆ ಕಂಠದಾನ ಮಾಡಿದ್ದ ನನಗೆ ಮಹಾಭಾರತ ಧಾರವಾಹಿಯಲ್ಲಿ ದ್ರೌಪದಿಗೆ ಧ್ವನಿ ನೀಡುವ ಅದೃಷ್ಟದ ಅವಕಾಶ ಸಿಕ್ಕಿತು. ಅದಾದ ಮೇಲೆ ಒಂದರ ಅನಂತರ ಒಂದೆನ್ನುವಂತೆ ಅವಕಾಶಗಳು ಬರತೊಡಗಿದವು. ಅದರಲ್ಲೂ ನನ್ನ ಕೆಲಸದ ಆಯ್ಕೆ ನಾವೇ ಮಾಡಿ ಕೊಳ್ಳುವ ಸ್ವಾತಂತ್ರ್ಯ ನನಗಿದೆ. ಐಟಿ-ಬಿಟಿಗಳಲ್ಲಿ ಕೆಲಸ ಮಾಡುವವರಿ ಗಿಂತ ಹೆಚ್ಚು ಕೆಲಸದ ಅವಕಾಶಗಳು ನಮಗಿವೆ. ಹಿಂದೊಂದು ಕಾಲದಲ್ಲಿ, ಕನ್ನಡ ಕಲಿತರೆ ಕರ್ನಾಟಕ ಬಿಟ್ಟು ಬೇರೆಲ್ಲೂ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬೇರೆ ಬೇರೆ ಭಾಷೆಗಳ ಚಿತ್ರರಂಗದವರು ಕನ್ನಡದಲ್ಲೂ ಸಿನೆಮಾ ಬಿಡುಗಡೆ ಮಾಡುತ್ತಿದ್ದಾರೆ. ಅದರಿಂದಾಗಿ ಬೇರೆ ರಾಜ್ಯಗಳಲ್ಲೂ ನಮಗೆ ಒಳ್ಳೆಯ ಅವಕಾಶ ಸಿಗುತ್ತಿವೆ. ಎಷ್ಟೋ ಭಾಷೆಗಳಿಗೆ ಹೋಲಿಸಿದರೆ ನಾವು, ಕನ್ನಡ ಸಿನೆರಂಗದವರು ತುಂಬಾನೇ ಒಳ್ಳೆ ಸ್ಥಾನದಲ್ಲಿ ದ್ದೇವೆ. ನನ್ನ ಜೀವ ನವೇ ಕನ್ನಡ ಭಾಷೆಯಲ್ಲಿದೆ. ಅದರ ಬಗ್ಗೆ ನನಗೆ ಬಹಳ ಹೆಮ್ಮೆಯೂ ಇದೆ.

Advertisement

ಕನ್ನಡಕ್ಕಾಗಿ ಕಂಪೆನಿ ಕಟ್ಟಿದ ಖುಷಿ
ವಸಂತ ಶೆಟ್ಟಿ, ಮೈಲ್ಯಾಂಗ್‌ ಆಡಿಯೋ ಬುಕ್‌
ಕನ್ನಡದಲ್ಲಿ ಪುಸ್ತಕ ಬಂದು 100 ವರ್ಷಗಳಾ ಯಿತು. ಆದರೆ ಡಿಜಿಟಲ್‌ ಲೋಕದಲ್ಲಿ ನಮ್ಮ ಕನ್ನಡದ ಪುಸ್ತಕಗಳಿಲ್ಲ ಎನ್ನುವ ಕೊರಗು ಕಾಡಿದ್ದಕ್ಕೆ ಮೈಲ್ಯಾಂಗ್‌ ಆಡಿಯೋ ಬುಕ್‌ ಮಾಡಿದೆವು. 15 ವರ್ಷಗಳ ಐಟಿ ಕೆಲಸ ಮಾಡಿದ್ದ ನಾನು ಮತ್ತು 25 ವರ್ಷದ ಐಟಿಯಲ್ಲಿ ಕೆಲಸ ಮಾಡಿದ್ದ ನನ್ನ ಸ್ನೇಹಿತ ಇಬ್ಬರೂ ಸೇರಿಕೊಂಡು ಆರಂಭಿಸಿದ ಉದ್ಯಮವದು. 2020ರ ಮಾರ್ಚ್‌ನಲ್ಲಿ ಆರಂಭವಾ ಯಿತು ನಮ್ಮ ಪ್ರಯಾಣ. ಮೊದಲಿಗೆ 100 ಇ-ಬುಕ್‌ ಮತ್ತು 4 ಆಡಿಯೋ ಬುಕ್‌ನೊಂದಿಗೆ ಆರಂಭವಾದ ನಮ್ಮ ಉದ್ಯಮದಲ್ಲಿ ಈಗ 1100ಕ್ಕೂ ಅಧಿಕ ಇ-ಬುಕ್‌, 150ಕ್ಕೂ ಹೆಚ್ಚು ಆಡಿಯೋ ಬುಕ್‌ ಇವೆ. ನಮ್ಮ ಆ್ಯಂಡ್ರಾಯ್ಡ ಆ್ಯಪ್‌ನ° ಲಕ್ಷಕ್ಕೂ ಅಧಿಕ ಮಂದಿ ಬಳಸುತ್ತಿದ್ದಾರೆ. ಐಟಿ ಉದ್ಯಮದಲ್ಲಿ ದೊಡ್ಡ ಸಂಬಳವಿದೆ ನಿಜ. ಆದರೆ ಇಲ್ಲಿ, ಕನ್ನಡದಲ್ಲಿ ಕೆಲಸ ಮಾಡುವಾಗ ಸಿಗುವ ಆತ್ಮತೃಪ್ತಿಯೇ ಬೇರೆ. ಇ ಬುಕ್‌ಗಳನ್ನು ಓದುವವರಲ್ಲಿ ಶೇ. 80 ಮಂದಿ 18-40 ವರ್ಷದವರು ಎನ್ನುವ ಖುಷಿ ನಮಗಿದೆ. ಕರ್ನಾಟಕದ 6 ಕೋಟಿ ಜನರ ಜತೆ ಬೇರೆ ರಾಜ್ಯ, ವಿದೇಶದಲ್ಲಿ ಇರುವ ಕನ್ನಡಿಗರನ್ನೂ ತಲುಪುವ ಅವಕಾಶ ನಮಗಿದೆ. ನಮಗಿಲ್ಲಿ ಅವಕಾಶದ ಕೊರತೆ ಖಂಡಿತವಾಗಿಯೂ ಇಲ್ಲ.

ಕನ್ನಡ ಸಾಕುತ್ತೆ ಎನ್ನೋದಕ್ಕೆ ನಾನೇ ನಿದರ್ಶನ
ಅಲೋಕ್‌ (ಆಲ್‌ ಒಕೆ), ಸಂಗೀತ ನಿರ್ದೇಶಕ, ಗಾಯಕ
ಕನ್ನಡದಲ್ಲಿ ಸ್ವತಂತ್ರವಾಗಿ ಆಲ್ಬಂ ಸಾಂಗ್‌ ಮಾಡುವ ಪರಿಚಯ ಮಾಡಿಕೊಟ್ಟವರು ನಾವು. ಕನ್ನಡದ ಕೊಟ್ಟ ಖುಷಿ ಬೇರೆ ಯಾವುದೂ ಕೊಟ್ಟಿಲ್ಲ. ಈಗಾಗಲೇ 50ರಷ್ಟು ಹಾಡು ಬರೆದಿದ್ದೇನೆ. ಅದರಲ್ಲಿ ಹಲವು ಸೂಪರ್‌ ಹಿಟ್‌ ಆಗಿವೆ. ಬರೀ ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯಗಳ ಜನರೂ ಕನ್ನಡದ ಹಾಡುಗಳನ್ನ ಇಷ್ಟ ಪಟ್ಟು ಕೇಳ್ಳೋದಕ್ಕೆ ಆರಂಭಿಸಿದ್ದಾರೆ. ಕನ್ನಡವಿಲ್ಲವೆಂದರೆ ಕೆಲಸವಿಲ್ಲ ಎನ್ನುವ ಮಾತು ಶುದ್ಧ ಸುಳ್ಳು. ಕನ್ನಡ ನಮ್ಮನ್ನು ಸಾಕುತ್ತದೆ ಎನ್ನುವುದಕ್ಕೆ ನಾನೇ ನಿದರ್ಶನ. ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡದಲ್ಲೇ ಬದುಕು ಕಟ್ಟಿಕೊಳ್ಳಬಹುದು ಎನ್ನುವುದನ್ನು ನನ್ನಂತ ಅದೆಷ್ಟೋ ಜನ ಮಾಡಿ ತೋರಿಸಿದ್ದಾರೆ. ಕನ್ನಡದವರು ಬೇರೆ ಭಾಷೆಯ ಭ್ರಮೆಯಿಂದ ಮೊದಲು ಹೊರಗೆ ಬರಬೇಕು. ಅವರು ಕನ್ನಡ ವನ್ನ ಪ್ರೀತಿಸಿ, ಅವರ ಒಬ್ಬ ಸ್ನೇಹಿತನಿಗೆ ನಮ್ಮ ಕನ್ನಡದ ಹಾಡುಗಳನ್ನ ಕೇಳಿಸಿದರೂ ಸಾಕು. ಅದೊಂದು ರೀತಿ ವೈರಲ್‌ ಫೀವರ್‌ ರೀತಿ ಹಬ್ಬುತ್ತಾ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ಕನ್ನಡ ಹಾಡುಗಳನ್ನ ಕನ್ನಡಿಗರಷ್ಟೇ ಅಲ್ಲದೆ ಬೇರೆಯವರೂ ಇಷ್ಟ ಪಟ್ಟು ಕೇಳ್ಳೋದಕ್ಕೆ ಶುರು ಮಾಡಿಕೊಂಡಿದ್ದಾರೆ. ಅದು ನಮ್ಮ ಕನ್ನಡದ ತಾಕತ್ತು.

Advertisement

Udayavani is now on Telegram. Click here to join our channel and stay updated with the latest news.

Next