Advertisement

ಉಪ್ಪಳ,ಕೈಕಂಬ,ಬಾಯಾರು,ಮುಳಿಗದ್ದೆ ರಸ್ತೆ ನಾಮಫಲಕದಲ್ಲಿ ಕನ್ನಡ ಯಾಕಿಲ್ಲ

02:15 PM Mar 11, 2018 | |

ಕುಂಬಳೆ : ಉಪ್ಪಳ ಕೈಕಂಬದಿಂದ ಬಾಯಾರು ಮುಳಿಗದ್ದೆ ತನಕದ ಸುಮಾರು 15 ಕಿ.ಮೀ.ಲೋಕೋಪಯೋಗಿ ರಸ್ತೆಯನ್ನು ಕೋಟಿಗಟ್ಟಲೆ ನಿಧಿ ವ್ಯಯಿಸಿ ಅಭಿವೃದ್ಧಿಪಡಿಸಲಾಗಿದೆ.ಮಂಜೇಶ್ವರ ಶಾಸಕರ ವಿಶೇಷ ಆಸಕ್ತಿಯಿಂದ ರಸ್ತೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲಾಗಿದೆ ಎಂಬುದಾಗಿ ಫಲಕಗಳನ್ನು ಕಾಣಬಹುದು.ಆದರೆ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯ ಸ್ಥಿತಿ ಹದಗೆಟ್ಟಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿದೆ.ರಸ್ತೆಯನ್ನು ಅಗಲಗೊಳಿಸದೆ ಹಿಂದೆ ಇದ್ದ ರಸ್ತೆಯನ್ನೇ  ಡಾಮರೀಕರಣದ ಮೂಲಕ ಅಭಿವೃದ್ಧಿಪಡಿಸಲಾಗಿದೆ.ಆದರೆ ತಿರುವುಗಳನ್ನು ಸರಿಪಡಿಸದೆ ಕಾಮಗಾರಿ ನಡೆಸಲಾಗಿದೆ.ತಿರುವುಗಳನ್ನು ಸರಿಪಡಿಸಿ ದ್ದಲ್ಲಿ ರಸ್ತೆಯ ಉದ್ದ ಒಂದೆರಡು ಕಿ.ಮೀ.ಕುಂಟಿತವಾಗುತ್ತಿತ್ತು. ನೀರು ಹೋಗದಲ್ಲಿ ಕೂಡಾ ರಸ್ತೆ ಪಕ್ಕದಲ್ಲಿ ವೃಥಾ ಆಳವಾದ ಚರಂಡಿ ನಿರ್ಮಿಸಲಾಗಿದೆ.ಇದರಿಂದ ಅಪಘಾತಕ್ಕೆ ಅವಕಾಶವಾಗುತ್ತಿದೆ.

Advertisement

ರಸ್ತೆ ಕಾಮಗಾರಿಯ ಬಳಿಕ ರಸ್ತೆ ಪಕ್ಕದಲ್ಲಿ ಅನಗತ್ಯ ಅನೇಕ ಕಬ್ಬಿಣದ ಬೇಲಿ ಮತ್ತು ಕಂಬಗಳನ್ನು ನಾಟಲಾಗಿದೆ.ಇದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ.ಬೇಕು ಬೇಡದಿದ್ದಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿದೆ.ರಸ್ತೆ ಪಕ್ಕದಲ್ಲಿ ಪಾತಾಳದಿಂದ ಅನಗತ್ಯ ಕಾಂಕ್ರಿಟ್‌ ತಡೆಗೋಡೆ ನಿರ್ಮಿಸಿ ನಿಧಿ ದುರ್ಬಳಕೆ ಮಾಡಲಾಗಿದೆ.

ಕಾಮಗಾರಿ ಆರಂಭಕ್ಕೆ ಮುನ್ನ ಎಸ್ಟಿಮೇಟ್‌ ಬದಲಾಯಿಸಿ ಸಮಸ್ಯೆಯನ್ನು ಪರಿಹರಿಸಲು ಪೈವಳಿಕೆಯಲ್ಲಿ ಸರ್ವ ಪಕ್ಷನಾಯಕರನ್ನೊಳಗೊಂಡ ಕ್ರಿಯಾ ಸಮಿತಿಯನ್ನು ರಚಿಸಿ ಸಂಭಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಶಾಸಕರನ್ನು ಆಮಂತ್ರಿಸಿ ಸಭೆಯನ್ನು ಜರುಗಿಸಿ ಸಾರ್ವಜನಿಕರ ಅಹವಾಲನ್ನು ಮಂಡಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸಾರ್ವಜನಿಕರ ಪ್ರತಿಭಟನೆಗೆ ಮನ್ನಣೆ ನೀಡದೆ ಕಾಮಗಾರಿ ನಿರಾತಂಕವಾಗಿ ನಡೆದೇ ಹೋಗಿದೆ.ಪ್ರತಿಭಟನೆಯ ಕಾವು ತಣ್ಣಗಾಗಿದೆ.ಕ್ರಿಯಾ ಸಮಿತಿಯ ಮನವಿಗೆ ಕಿಮ್ಮತ್ತಿನ ಬೆಲೆ ಇಲ್ಲದಾಗಿದೆ.ಆನ್ಯ ರಾಜ್ಯದ ಗುತ್ತಿಗೆದಾರರ ನಿಲುವೇ ಅಂತಿಮವಾಗಿದೆ.ಕೋಟಿಗಟ್ಟಲೆ ನಿಧಿ ಬಳಕೆಯಾಗಿದೆ.

ಕಾಮಗಾರಿಯ ಬಳಿಕ ರಸ್ತೆಯುದ್ದಕ್ಕೂ ಸ್ಥಳನಾಮದ ಮತ್ತು ಅಪಘಾತದ ಸೂಚನೆಗಳನ್ನು ಬರೆದು ಫಲಕಗಳನ್ನು ಅಲ್ಲಲ್ಲಿ ನಾಟಲಾಗಿದೆ .ಇದರಲ್ಲಿ ಮಲೆಯಾಳ ಮತ್ತು ಆಂಗ್ಲ ಭಾಷೆಗಳಲ್ಲಿ ಮಾತ್ರ ಬರೆಯಲಾಗಿದೆ.ಕೆಲವು ಕಚೇರಿಗಳಿಗೆ ತೆರಳುವ ದಾರಿ ಸೂಚಿಸಲಾಗಿದೆ.ಆದರೆ ಒಂದೇ ಒಂದು ಫಲಕದಲ್ಲೂ ಕನ್ನಡ ಶಬ್ಧಗಳನ್ನು ಬರೆಯದೆ ಕನ್ನಡವನ್ನು ಮತ್ತು ಕನ್ನಡಿಗರನ್ನು ಅಪಮಾನಿಸಲಾಗಿದೆ.ರಸ್ತೆಯುದ್ದಕ್ಕೂ ಪಕ್ಕದಲ್ಲಿ ಕನ್ನಡ ಮಾಧ್ಯಮ ವಿದ್ಯಾಲಯಗಳು, ಬ್ಯಾಂಕ್‌ ,ಸಹಕಾರಿ ಸಂಘಗಳು,ಸರಕಾರಿ,ಅರೆಸರಕಾರಿ ಕಚೇರಿಗಳಿಗೆ ಕನ್ನಡಿಗರು ತೆರಳುವ ಅಚ್ಛಾ ಕನ್ನಡ ಪ್ರದೇಶದಲ್ಲೇ ಈ ರಸ್ತೆ
ಹಾದು ಹೋಗುತ್ತಿದೆ. ಕರ್ನಾಟಕಕ್ಕೆ ಸಂಪರ್ಕ ಹೊಂದುವ ರಸ್ತೆಯಾಗಿದ್ದರೂ ಕನ್ನಡ ಮಾತ್ರ ಮಾಯವಾಗಿದೆ. ಮಲೆಯಾಳ ಮತ್ತು ಇಂಗ್ಲಿಷ್ ಮಾತ್ರ ರಾರಾಜಿಸುತ್ತಿದೆ. ಆದರೆ ಯಾವುದೇ ಕನ್ನಡ ಸಂಘಟನೆಗಳು ಈ ತನಕ ಇದರತ್ತ ಗಮನ ಹರಿಸಿಲ್ಲವೆಂಬ ಆರೋಪ ಸಾರ್ವಜನಿಕರದು.

ಇದೀಗ ಮಂಗಳೂರು ಸತ್ಯಮೇವ ಜಯತೇ ಚಾರಿಟೆಬಲ್‌ ಟ್ರಸ್ಟ್‌ ಸಂಘಟನೆಯ ಮಂಜೇಶ್ವರ ಘಟಕದ ಅಧ್ಯಕ್ಷ ಅಶ್ವತ್ಥ ಪೂಜಾರಿ  ಲಾಲ್‌ಬಾಗ್‌ ರವರು ಸಚಿವರಿಗೆ ಮನವಿ ಸಲ್ಲಿಸಿರುವರು.ನಾಮ ಫಲಕದಲ್ಲಿ ಕನ್ನಡ ಬರೆಯಬೇಕೆಂಬ ಮನವಿಗೆ ಸ್ಪಂದಿಸಿ ಶಾಸಕರು ಸಮಸ್ಯೆಗೆ ಪರಿಹಾರ ಕಾಣುವರೆಂಬ ವಿಶ್ವಾಸ ಕನ್ನಡಿಗರದು.ಇಲ್ಲದಿದ್ದಲ್ಲಿ ಕನ್ನಡಿಗರು ಇನ್ನಾದರೂ ಇದರ ವಿರುದ್ಧ ಪ್ರತಿಭಟಿಸಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next