ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಗಳಿಗೆ ಮುಂದಾಗಿರುವ ರಾಜ್ಯ ಸರ್ಕಾರ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ವೀಕೆಂಡ್ ಲಾಕ್‌ಡೌನ್‌ಗೂ ಮುಂದಾಗಿದೆ. ಈಗಾಗಲೇ ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ, ವಿವಿಧ ಉದ್ಯಮಗಳು – ಕೈಗಾರಿಕೆಗಳ ದೈನಂದಿನ ಚಟುವಟಿಕೆಗಳಿಗೂ ಹತ್ತಾರು ನಿಯಮಗಳನ್ನು ಜಾರಿ ಮಾಡಿದೆ. ಇನ್ನು ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸೂಚಿಸಿರುವುದರಿಂದ, ಸಿನಿಮಾಗಳ ಪ್ರದರ್ಶನಕ್ಕೆ ಸಂಪೂರ್ಣವಾಗಿ ತೆರೆಬಿದ್ದಿದೆ. ಆದರೆ ಸಿನಿಮಾಗಳ ಚಿತ್ರೀಕರಣಕ್ಕೆ ಸಂಬಂಧಿಸಿದ ಗೊಂದಲ ಚಿತ್ರರಂಗದಲ್ಲಿ ಇನ್ನೂ ಮುಂದುವರೆದಿದೆ.
ಈಗಾಗಲೇ ವಾರದಲ್ಲಿ ಐದು ದಿನ ನೈಟ್ ಕರ್ಫ್ಯೂ, ಮತ್ತೆರಡು ದಿನ ವೀಕೆಂಡ್ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಿರುವಾಗ, ವೀಕೆಂಡ್‌ನ ಎರಡು ದಿನಗಳನ್ನು (ಶನಿವಾರ, ಭಾನುವಾರ) ಹೊರತುಪಡಿಸಿ, ಉಳಿದ ಐದು ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರದವರೆಗೆ) ಸಿನಿಮಾಗಳ ಶೂಟಿಂಗ್ ನಡೆಸಬಹುದಾ ಅಥವಾ ಇಲ್ಲವಾ ಎಂಬ ಗೊಂದಲ ಅನೇಕ ನಿರ್ಮಾಪಕ, ನಿರ್ದೇಶಕರಲ್ಲಿದೆ.
ಏ. 20ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್ ನಿಯಂತ್ರಣ ಮಾರ್ಗಸೂಚಿಯಲ್ಲಿ ನಿರ್ಮಾಣ ಕಾರ್ಯ, ಕೈಗಾರಿಕೆ, ಹೋಟೆಲ್ಸ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಸರಕು ಸಾಗಾಣಿಕೆ, ಅಗತ್ಯ ಸೇವೆಗಳು ಹೀಗೆ ಬೇರೆ ಬೇರೆ ಉದ್ಯಮಗಳು, ಕೈಗಾರಿಗೆಗಳು, ಸೇವಾ ವಲಯಗಳ ಪ್ರಸ್ತಾಪವಿದ್ದರೂ, ಚಿತ್ರೋದ್ಯಮದ ದೈನಂದಿನ ಚಟುವಟಿಕೆ ನಡೆಸುವ ಬಗ್ಗೆ ಎಲ್ಲೂ ಸ್ಪಷ್ಟವಾದ ಉಲ್ಲೇಖವಿಲ್ಲ. ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳನ್ನು ಸಂಪೂ ರ್ಣವಾಗಿ ಮುಚ್ಚುವಂತೆ ಸೂಚಿಸಲಾಗಿದ್ದರೂ, ಸಿನಿಮಾಗಳ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು,
ಶೂಟಿಂಗ್, ಡಬ್ಬಿಂಗ್, ರೀ-ರೆಕಾರ್ಡಿಂಗ್ ಇನ್ನಿತರ ಸ್ಟುಡಿಯೋ ಕೆಲಸಗಳನ್ನು ಮುಂದುವರೆಸುವ ಹಾಗೂ ಸ್ಥಗಿ ತ ಗೊ ಳಿ ಸು ವ ಬಗ್ಗೆ ಮಾರ್ಗಸೂಚಿಯಲ್ಲಿ ಎಲ್ಲೂ ಸ್ಪಷ್ಟವಾದ ಉಲ್ಲೇಖ ಅಥವಾ ಆದೇಶ ಇಲ್ಲ. ಹೀಗಿರುವಾಗ, ಈಗಾಗಲೆ ಅರ್ಧಕ್ಕೆ ನಿಂತಿರುವ ತಮ್ಮ ಸಿನಿಮಾಗಳ ಶೂಟಿಂಗ್ ಮುಂದುವರೆಸಬಹುದಾ ಅಥವಾ ಇಲ್ಲವಾ ಎಂಬ ಗೊಂದಲ ಸಹಜವಾಗಿಯೇ ಅನೇಕರನ್ನು ಕಾಡುತ್ತಿದೆ.
ಈ ಬಗ್ಗೆ ಮಾತನಾಡುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜೈರಾಜ್, “ಹೊಸದಾಗಿ ಸರ್ಕಾರ ಬಿಡುಗಡೆ ಮಾಡಿರುವ ಗೈಡ್‌ಲೈನ್ಸ್‌ನಲ್ಲಿ ಸಿನಿಮಾ ಶೂಟಿಂಗ್ ಮತ್ತಿತರ ಚಟುವಟಿಕೆಗಳು ನಡೆಸುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಆದ್ರೆ, ಈ ಹಿಂದೆ ಸರ್ಕಾರ ಬಿಡುಗಡೆ ಮಾಡಿರುವ ಎಸ್‌ಒಪಿ ನಿಯಮಗಳೇ ಸದ್ಯಕ್ಕೆ ಮುಂದುವರೆಯುವುದರಿಂದ, ಸ್ಟುಡಿಯೋಗಳು ಸೇರಿದಂತೆ ಖಾಸಗಿ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಮಾಡಲು ಯಾವುದೇ ಅಡ್ಡಿಯಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೂಟಿಂಗ್ ಮಾಡಲು ಅವಕಾಶ ಇರುವುದಿಲ್ಲ’ ಎನ್ನುತ್ತಾರೆ.
ಇನ್ನು ಸಿನಿಮಾಗಳ ಶೂಟಿಂಗ್ ನಡೆಸುವ ಬಗ್ಗೆ ಮಾತನಾಡಿರುವ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, “ಚಿತ್ರರಂಗ ಕೂಡ ಒಂದು ಉದ್ಯಮವಾಗಿದೆ. ಸರ್ಕಾರ ಉದ್ಯಮಗಳಿಗೆ, ಕೈಗಾರಿಕೆಗಳಿಗೆ ಮಾರ್ಗಸೂಚಿಯಲ್ಲಿ ಒಂದಷ್ಟು ನಿಯಮಗಳನ್ನು ಹಾಕಿ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಕೊಟ್ಟಿದೆ. ಹೀಗಾಗಿ ಸರ್ಕಾರದ ಮಾರ್ಗಸೂಚಿ ಯಲ್ಲಿರುವಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಈಗಾಗಲೇ ಅರ್ಧಕ್ಕೆ ನಿಂತಿರುವ ಸಿನಿಮಾಗಳ ಶೂಟಿಂಗ್ ಪೂರ್ಣಗೊಳಿಸಲು ಯಾವುದೇ ಅಡ್ಡಿಯಿಲ್ಲ’ ಎನ್ನುತ್ತಾರೆ.
ಇದು ಒಂದೆಡೆಯಾದರೆ, ಸಿನಿಮಾಗಳ ಶೂಟಿಂಗ್ ನಡೆಸಲು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಕೆಲವು ವಾಸ್ತವ ಸಮಸ್ಯೆಗಳು ಎದುರಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಸ್ಟುಡಿಯೋಗಳಲ್ಲಿ ಒಳಾಂಗಣ ಚಿತ್ರೀಕರಣ ಹೊರತುಪಡಿಸಿ ಹೊರಾಂಗಣ ಚಿತ್ರೀಕರಣ ನಡೆಸಲು ಆಗುತ್ತಿಲ್ಲ. ರಾಜ್ಯದ ಬೇರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ವಾರ್ತಾ ಇಲಾಖೆಯಿಂದಲೇ ಅನುಮತಿ ಸಿಗುತ್ತಿಲ್ಲ. ಹೊರಗೆ ಹೋಗಿ ಶೂಟಿಂಗ್ ಮಾಡಲು ಅಲ್ಲಿನ ಸ್ಥಳೀಯರಿಂದಲೂ ವಿರೋಧ ವ್ಯಕ್ತವಾಗುತ್ತದೆ. ಕೇವಲ ವಾರದಲ್ಲಿ ಐದು ದಿನ ಮಾತ್ರ ಹಗಲು ವೇಳೆ ಚಿತ್ರೀಕರಣಕ್ಕೆ ಅವಕಾಶವಿರುವುದರಿಂದ, ಯುನಿಟ್, ಕಲಾವಿದರು – ತಂತ್ರಜ್ಞರನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿ ಶೂಟಿಂಗ್ ಮಾಡುವುದು ಕಷ್ಟಸಾಧ್ಯ. ಹೀಗಿರುವಾಗ ಹೊರಾಂಗಣ ಶೂಟಿಂಗ್ ನಡೆಸುವುದಾದರೂ ಹೇಗೆ? ಎನ್ನುವುದು ಅನೇಕರ ಪ್ರಶ್ನೆ.