Advertisement

ತಮಿಳರಂತೆ ಒಗ್ಗಟ್ಟು ಪ್ರದರ್ಶಿಸಲು ಕನ್ನಡಿಗರು ವಿಫ‌ಲ

12:49 PM Feb 18, 2017 | |

ಕೆ.ಆರ್‌.ನಗರ: ತಮಿಳು ಭಾಷಿಕರ ರೀತಿ ಒಗ್ಗಟ್ಟನ್ನು ಪ್ರದರ್ಶಿಸಲು ಕನ್ನಡಿಗರಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದರೂ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ನಾವು ವಿಫ‌ಲರಾಗಿದ್ದೇವೆಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌ ಹೇಳಿದರು.

Advertisement

ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶುಕ್ರವಾರ ಆಯೋಜಿಸಿದ್ದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಇತರ ಭಾಷೆಗಳ ಬಗ್ಗೆ ದ್ವೇಷ ಬೇಡ. ಮಾತೃ ಭಾಷೆಯನ್ನು ಉಳಿಸಿ, ಬೆಳೆಸುವ ಪ್ರವೃತ್ತಿಯನ್ನು ಪ್ರತಿ ಕನ್ನಡಿಗ ರೂಢಿಸಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಕೇವಲ ಕಾವ್ಯವಾಗಿ ಉಳಿಯದೆ ಮನುಷ್ಯನಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಸಾಹಿತ್ಯದ ಮೌಲ್ಯಗಳನ್ನು ಎತ್ತಿ ಹಿಡಿದು ಜೀವನ ನಡೆಸಬೇಕೆಂದು ಸಲಹೆ ನೀಡಿದರು. ಇಂಗ್ಲಿಷ್‌ ಭಾಷೆಯನ್ನು ವ್ಯಾವಹಾರಿಕವಾಗಿ ಮಾತ್ರ ಬಳಸಲು ಕಲಿತು, ಮಾತೃ ಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.

ಕಾವೇರಿ ನೀರಿನ ವಿವಾದ ಸೇರಿದಂತೆ ನೆಲ, ಜಲ ಮತ್ತು ಭಾಷೆಯ ಬಗೆಗಿನ ಸಮಸ್ಯೆಗಳು ಎದುರಾದಾಗ ನಮಗೆ ಅನ್ಯಾಯವಾಗಿದೆ. ಈ ಕಾರಣದಿಂದ ಕನ್ನಡ ಅಳಿಯುವ ಅಂಚಿಗೆ ಬಂದು ನಿಂತಿದೆ. ರಾಜ್ಯ ಏಕೀಕರಣಗೊಂಡು 60 ವರ್ಷಗಳೇ ಕಳೆದರೂ ಗಡಿ ಸಮಸ್ಯೆಗಳು ಬಗೆಹರಿದಿಲ್ಲ. ಆದ್ದರಿಂದ ಕನ್ನಡಿಗರು ಎಚ್ಚೆತ್ತು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದರು.

ರಾಜಕೀಯ ಗೋಷ್ಠಿ ನಡೆಸಿ: ಮಾಜಿ ಸಂಸದ ಎಚ್‌.ವಿಶ್ವನಾಥ್‌ ಮಾತನಾಡಿ, ಜನತಂತ್ರ ವ್ಯವಸ್ಥೆಯ ಭಾರತದಲ್ಲಿ ಎಲ್ಲವೂ ರಾಜಕೀಯವೇ ಆಗಿದೆ. ಆದ್ದರಿಂದ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕೀಯ ಗೋಷ್ಠಿಗಳನ್ನು ಕನಿಷ್ಠ ಎರಡು ಗಂಟೆ ಕಾಲ ನಡೆಸಬೇಕು. ಈ ಮೂಲಕ ಜನರಿಗೆ ಚುನಾಯಿತ ಜನಪ್ರತಿನಿಧಿಗಳು ಮತ್ತು ಸರ್ಕಾರದ ಬಗ್ಗೆ ಸಮಗ್ರ ಮಾಹಿತಿ ಸಿಗುವಂತೆ ಮಾಡಬೇಕು. ಯಾವುದೇ ಕಾರಣಕ್ಕೂ ರಾಜಕಾರಣವನ್ನು ಹೀನಾಯ ರೀತಿಯಲ್ಲಿ ಕಾಣಬಾರದು ಎಂದರು.

Advertisement

ಆರು ಕೋಟಿ ಕನ್ನಡಿಗರ ಮೇಲ್ಮನೆ ಆಗಿರುವ ವಿಧಾನಸೌಧ ಪ್ರಸ್ತುತ ಶಾಪಿಂಗ್‌ ಮಾಲ್‌ ಆಗಿ ಪರಿವರ್ತನೆಯಾಗಿದೆ. ಅಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಸೂತ್ರಗಳನ್ನು ಹುಡುಕುವ ಬದಲು ವ್ಯಾಪಾರ ಕೇಂದ್ರವಾಗಿದೆ. ಅದಕ್ಕಾಗಿ ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ಎಲ್ಲಾ ರೀತಿಯ ವಿಚಾರ ಗೋಷ್ಠಿಗಳಲ್ಲೂ ರಾಜಕೀಯ ಗೋಷ್ಠಿಗಳನ್ನು 
ನಡೆಸಿ ಸರ್ಕಾರದ ಘನತೆಯನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.

ಸಾಹಿತ್ಯದಲ್ಲಿ ರಾಜಕಾರಣ ಬೇಡ: ಸಮ್ಮೇಳನಾಧ್ಯಕ್ಷ ಕೆ.ಅನಂತರಾಮು ಮಾತನಾಡಿ, ರಾಜಕಾರಣದಲ್ಲಿ ಸಾಹಿತ್ಯ ಇರಬಹುದು. ಇದರಿಂದ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಸಾಹಿತ್ಯದಲ್ಲಿ ರಾಜಕಾರಣ ಬಂದರೆ ತೊಂದರೆಯಾಗುತ್ತದೆ. ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ ಎಂದರು.

ಪ್ರಾದೇಶಿಕ ಭಾಷೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ಆಯಾ ಭಾಷೆಯಲ್ಲಿಯೇ ಶಿಕ್ಷಣ ನೀಡುವಂತೆ ಕಾನೂನು ಜಾರಿಗೆ ತರಬೇಕು. ಶಾಲೆಗಳಲ್ಲಿ ನೀತಿ ಪಾಠವನ್ನು ಮಕ್ಕಳಿಗೆ ಬೋಧಿಸಬೇಕು. ಆಗ ಮಾತ್ರ ಮಾನವೀಯ ಮೌಲ್ಯ ಉಳಿಯಲು ಸಾಧ್ಯ ಎಂದರು.

ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ತಾಪಂ ಅಧ್ಯಕ್ಷ ಎಚ್‌.ಟಿ.ಮಂಜುನಾಥ್‌, ಉಪಾಧ್ಯಕ್ಷೆ ನೀಲಮಣಿ, ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್‌, ಸದಸ್ಯರಾದ ಎನ್‌.ಶಿವಕುಮಾರ್‌ ಗೀತಾ ಮಹೇಶ್‌, ಪರಿಷತ್‌ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ,  ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್‌, ಮಡ್ಡೀಕರೆ ಗೋಪಾಲ್‌, ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್‌.ಯದು ಗಿರೀಶ್‌, ನವನಗರ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ಬಸಂತ್‌, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್‌.ಚನ್ನಬಸಪ್ಪ,  ಸಮ್ಮೇಳನಾಧ್ಯಕ್ಷ ಸ.ಚ.ಮಹದೇವನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next