Advertisement

ಅನ್ಯ ಭಾಷೆ ವಿಡಿಯೋಗಳಲ್ಲಿ ಕನ್ನಡ ಪ್ರಯೋಗ

12:06 PM Oct 29, 2018 | |

ಬೆಂಗಳೂರು: ಅತಿ ಹೆಚ್ಚು ಜನ ಬಳಸುವ ಯೂಟ್ಯೂಬ್‌ನಲ್ಲಿ ಬರುವ ವಿವಿಧ ಭಾಷೆಯ ಯಾವುದೇ ಪ್ರಕಾರದ ವಿಡಿಯೋ ತುಣುಕುಗಳು ನಿಮಗೆ ಕನ್ನಡದಲ್ಲೇ ಲಭ್ಯವಾದರೆ ಹೇಗಿರುತ್ತದೆ? ಇಂತಹದ್ದೊಂದು ವಿನೂತನ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಎಲೆಕ್ಟ್ರಾನಿಕ್‌ ಇಂಜಿನಿಯರಿಂಗ್‌ ವಿಭಾಗ ಮುಂದಾಗಿದೆ. ಪ್ರಸ್ತುತ ಇಂಗ್ಲಿಷ್‌ನಲ್ಲಿ ಮಾತ್ರ ಇರುವ ಈ ಸೌಲಭ್ಯವನ್ನು ಕನ್ನಡಕ್ಕೂ ತರಲು ಚಿಂತನೆ ನಡೆದಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ. 

Advertisement

ವಿಶ್ವದ ಬೇರೆ ಬೇರೆ ಭಾಷೆಯಲ್ಲಿ ಮಾಹಿತಿ ಆಧಾರಿತ ಸಾವಿರಾರು ವಿಡಿಯೋ ತುಣುಕುಗಳು ನಿತ್ಯ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗುತ್ತವೆ. ಆದರೆ, ಬಹುತೇಕರಿಗೆ ಅದು ಅರ್ಥವಾಗುವುದೇ ಇಲ್ಲ. ಇಂಗ್ಲಿಷ್‌ ಬಲ್ಲವರಿಗೆ ಅದನ್ನು ಅಕ್ಷರ ರೂಪದಲ್ಲಿ ತರ್ಜುಮೆ ಮಾಡಿಕೊಂಡು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ ಸೇರಿದಂತೆ ಇತರೆ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಕಂಡುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಅನೇಕರು ಆ ಮಾಹಿತಿಯಿಂದ ವಂಚಿತರಾಗುತ್ತಾರೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಪ್ರಯೋಗ ಮಾಡಲು ಐಐಎಸ್ಸಿ ಉದ್ದೇಶಿಸಿದೆ.

ಹಾಗೊಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ, ಹೀಗೆ ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋ ತುಣುಕನ್ನು ಪ್ರಾದೇಶಿಕ ಭಾಷೆಯಲ್ಲಿ ತರ್ಜುಮೆ ಮಾಡಿ, ಅಕ್ಷರ ರೂಪದಲ್ಲಿ ಬಿತ್ತರಿಸುವ ಮೊದಲ ಭಾಷೆ ಎಂಬ ಹೆಗ್ಗಳಿಕೆ ಕನ್ನಡದ್ದಾಗಲಿದೆ. ಪ್ರಸ್ತುತ ಇದು ಪ್ರಾಥಮಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಎಲೆಕ್ಟ್ರಿಕ್‌ ಇಂಜಿನಿಯರಿಂಗ್‌ ವಿಭಾಗದ ಪ್ರೊ.ಎ.ಜಿ.ರಾಮಕೃಷ್ಣನ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಪ್ರಸ್ತುತ ನಮ್ಮ ಬಳಿ ಕನ್ನಡ ಮಾತನಾಡಿದರೆ, ಅದು ತಕ್ಷಣ ಅಕ್ಷರ ರೂಪದಲ್ಲಿ ಟೈಪ್‌ ಆಗುವಂತಹ ಸಾಫ್ಟ್ವೇರ್‌ ಲಭ್ಯವಿದೆ. ಇದೇ ಮಾದರಿಯನ್ನು ಯೂಟ್ಯೂಬ್‌ನಲ್ಲಿ ಅಳವಡಿಸಲು ಸಾಧ್ಯವಿದೆ. ಅದನ್ನು “ಎನೇಬಲ್‌’ ಮಾಡಿದರೆ ಸಾಕು, ಅನ್ಯಭಾಷೆಯಲ್ಲಿ ವಿಡಿಯೋ ತುಣುಕು ವೀಕ್ಷಿಸುತ್ತಿರುವ ವ್ಯಕ್ತಿಗೆ ಅಟೋಮೆಟಿಕ್‌ ಆಗಿ ಪರದೆಯಲ್ಲಿ ಕನ್ನಡದಲ್ಲಿ ಇಡೀ ದೃಶ್ಯಾವಳಿಯ ಸಾರ ಬರುತ್ತದೆ. ಇದರ ಮುಖ್ಯ ಉದ್ದೇಶ ಆರೋಗ್ಯ, ಕೃಷಿ, ಅಧ್ಯಾತ್ಮ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಜಾಗತಿಕವಾಗಿ ಸಾಕಷ್ಟು ಆವಿಷ್ಕಾರಗಳನ್ನು ಕನ್ನಡಿಗರಿಗೆ ಕನ್ನಡದಲ್ಲೇ ದೊರೆಯುವಂತೆ ಮಾಡುವುದಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಇದು ಹೆಚ್ಚು ಅನುಕೂಲ ಆಗಲಿದೆ ಎಂದೂ ಅವರು ಹೇಳಿದರು. 

ಇದಲ್ಲದೆ, ಈಗಾಗಲೇ ಆಪ್ಟಿಕಲ್‌ ಕ್ಯಾರೆಕ್ಟರ್‌ ರಿಕಗ್ನಿಷನ್‌ (ಒಸಿಆರ್‌) ಸಾಫ್ಟ್ವೇರ್‌ ಅಭಿವೃದ್ಧಿಪಡಿಸಿದೆ. ಇದು ಪುಸ್ತಕವನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದು “ಲಿಪಿಜ್ಞಾನ’ಕ್ಕೆ ಹಾಕಿದರೆ, ಅಕ್ಷರ ರೂಪದಲ್ಲಿ ಬರುತ್ತದೆ. ಅದನ್ನು “ಮಧುರ ವಾಚಕ’ದ ಸಹಾಯದಿಂದ ಕೇಳಬಹುದು. ಇದರಿಂದ ಅಂಧ ಮಕ್ಕಳು ಕೂಡ ಸುಲಭವಾಗಿ ಕಲಿಯಬಹುದು. ರಾಜ್ಯದ 35 ಬ್ರೈಲ್‌ ಶಾಲೆಗಳಲ್ಲಿ ಇದರ ಉಪಯೋಗ ಆಗುತ್ತಿದೆ.

Advertisement

ಕನ್ನಡದತ್ತ ಮುಖ ಮಾಡಿದ ಐಫೋನ್‌, ಗೂಗಲ್‌, ವಾಟ್ಸ್‌ಆ್ಯಪ್‌: ಸ್ಮಾರ್ಟ್‌ಫೋನ್‌ನಲ್ಲಿ ಕನ್ನಡ ಕೀ ಬೋರ್ಡ್‌ ಬಳಕೆಗೆ ಅವಕಾಶ ಇದೆ. ಆದರೆ, ಐ-ಫೋನ್‌ನಲ್ಲಿ ಇದರ ಲಭ್ಯತೆ ಇರಲಿಲ್ಲ. ಹೆಚ್ಚು ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಈಗ ಆ್ಯಪಲ್‌ ಐಫೋನ್‌ನಲ್ಲೂ ಕನ್ನಡ ಕೀ-ಬೋಡ್‌ ಪರಿಚಯಿಸಲಾಗಿದೆ. ಇದಲ್ಲದೆ, ಗೂಗಲ್‌ ನಕ್ಷೆ ಕೂಡ ಸಂಪೂರ್ಣ ಕನ್ನಡದಲ್ಲಿ ಬರುತ್ತಿದೆ.

ಇದೆಲ್ಲಕ್ಕೂ ಮುಖ್ಯ ಕಾರಣ ಕನ್ನಡಿಗರು ಅತಿ ಹೆಚ್ಚು ಅಂತರ್ಜಾಲ ಬಳಕೆ ಮಾಡುತ್ತಿರುವುದು ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಗೂಗಲ್‌ ಮತ್ತು ಕೆಪಿಎಂಜಿ ಈಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಹೊಸದಾಗಿ ಹತ್ತು ಜನ ಇಂಟರ್‌ನೆಟ್‌ ಬಳಕೆದಾರರು ಬಂದರೆ, ಅದರಲ್ಲಿ 8ರಿಂದ 9 ಜನ ದೇಶದ ಪ್ರಾದೇಶಿಕ ಭಾಷೆಯವರಾಗಿರುತ್ತಾರೆ. ಅದರಲ್ಲೂ ಕನ್ನಡಿಗರು ಮೊದಲ ಮೂರು ಸ್ಥಾನದಲ್ಲಿದ್ದಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next