Advertisement

ಕನ್ನಡ ಜಾರಿ ಅಲಕ್ಷ್ಯಕ್ಕೆ ಹಕ್ಕುಚ್ಯುತಿ ಶಿಕ್ಷೆ ಶಿಫಾರಸು

11:27 AM Aug 09, 2017 | |

ಬೆಂಗಳೂರು: ರಾಜ್ಯದ ಪ್ರಮುಖ ಇಲಾಖೆಗಳಾದ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿ ಕನ್ನಡ ಅನುಷ್ಠಾನ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ, ಕನ್ನಡ ಅನುಷ್ಠಾನಕ್ಕೆ ಸಂಭ‌ಧಿಸಿದಂತೆ ಶಾಸನಬದ್ಧ ಆದೇಶಗಳನ್ನು ಪಾಲಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಮಂಗಳವಾರ ಖನಿಜ ಭವನದಲ್ಲಿರುವ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿಕಾಸಸೌಧದಲ್ಲಿ ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಸಮ್ಮುಖದಲ್ಲಿ ಪ್ರತ್ಯೇಕವಾಗಿ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದ ಅವರು, ವೆಬ್‌ಸೈಟ್‌ನಲ್ಲಿ ಕನ್ನಡ ಬಳಕೆ, ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ವೆಬ್‌ಸೈಟ್‌ನಲ್ಲಿಲ್ಲ ಕನ್ನಡ:
ಲೋಕೋಪಯೋಗಿ ಇಲಾಖೆಯಲ್ಲಿ ಕನ್ನಡ ಅನುಷ್ಠಾನ ಕುರಿತು ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷರು, ಇಲಾಖೆಯ ವೆಬ್‌ ಸೈಟ್‌ಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಇರುವುದು ಕಡ್ಡಾಯ ಎಂದಿದ್ದರೂ ಸಂಪೂರ್ಣ ಆಂಗ್ಲಮಯವಾಗಿ ಕನ್ನಡದ ಗಂಧವೇ ಇಲ್ಲ ಎಂಬಂತಾಗಿದೆ.  ಕನ್ನಡ ತಂತ್ರಾಂಶದ ಬಳಕೆ ಬಗ್ಗೆ 2006 ಮತ್ತು 2008ರಲ್ಲಿ ಪ್ರತ್ಯೇಕ ಆದೇಶಗ ಹೊರಡಿಸಿದ್ದರೂ ಕಿಂಚಿತ್ತೂ ಪಾಲಿಸಿಲ್ಲ. ಶಾಸನಬದ್ಧ ಆದೇಶಗಳ ನಿರ್ಲಕ್ಷ್ಯ ಹಕ್ಕುಚ್ಯುತಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ, ವೆಬ್‌ಸೈಟ್‌ನಲ್ಲಿ ಕನ್ನಡ ಆದ್ಯತಾ ಭಾಷೆಯಾಗಿದ್ದು, ಇಂಗ್ಲಿಷ್‌ ಆಯ್ಕೆ ಭಾಷೆಯಾಗಿರಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ದರ ಪಟ್ಟಿಗಳು ಆಂಗ್ಲ ಭಾಷೆಯಲ್ಲಿರುತ್ತವೆ. ಕನ್ನಡ ಪತ್ರಿಕೆಗಳಿಗೂ ಆಂಗ್ಲ ಭಾಷೆಯಲ್ಲಿ ಜಾಹಿರಾತು ನೀಡಲಾಗುತ್ತಿದೆ. ಇದರಿಂದ ಕರ್ನಾಟಕದ ಗುತ್ತಿಗೆದಾರರಿಗೆ ತೊಂದರೆಯಾಗುತ್ತದೆ. ಆದ್ದರಿಂದ ದರಪಟ್ಟಿ ಮತ್ತು ಕನ್ನಡ ಪತ್ರಿಕೆಗಳ ಜಾಹಿರಾತು ಕನ್ನಡದಲ್ಲೇ  ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕ್ಷಮೆ ಯಾಚಿಸಿದ ಎಸಿಎಸ್‌: ವೆಬ್‌ ಸೈಟ್‌ ಆಂಗ್ಲಮಯವಾಗಿರುವ ಬಗ್ಗೆ ಕ್ಷಮೆಯಾಚಿಸಿದ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಈ ಕುರಿತು 15 ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ, ಇಲಾಖೆಯಲ್ಲಿ ಕನ್ನಡ ಬಳಕೆ ಬಗ್ಗೆ ಒಂದು ತಿಂಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಪ್ರತಿ ತಿಂಗಳು ನಡೆಯುವ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಕನ್ನಡ ಅನುಷ್ಠಾನದ ಕುರಿತೂ ಚರ್ಚಿಸಲಾಗುವುದು ಎಂದು ಹೇಳಿದರು.

Advertisement

ಕನ್ನಡ ತಂತ್ರಾಂಶ ಅಳವಡಿಕೆಗೆ
ಸೂಚನೆ ಇದಕ್ಕೂ ಮುನ್ನ ಖನಿಜ ಭವನದಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಕನ್ನಡ ಅನುಷ್ಠಾನ ಕುರಿತಂತೆ ಪರಿಶೀಲನೆ ನಡೆಸಿದ ಕನ್ನಡ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಇಲಾಖೆಯಲ್ಲಿ ಕನ್ನಡ ತಂತ್ರಾಂಶ ಅಳವಡಿಸಿಕೊಳ್ಳದೇ ಇರುವ ಬಗ್ಗೆ ಇಲಾಖೆ ನಿರ್ದೇಶಕಿ ಎನ್‌.ಮಂಜುಳಾ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಐದು ವರ್ಷಗಳಿಂದ ಇಲಾಖೆ ಕನ್ನಡ ತಂತ್ರಾಂಶ ಅಳವಡಿಸಿಕೊಂಡಿಲ್ಲ. ತಂತ್ರಾಂಶ ಗುತ್ತಿಗೆಯನ್ನು ಕನ್ನಡೇತರರಿಗೆ ನೀಡಿದೆ. ಇಲಾಖೆ ಜಾಹಿರಾತುಗಳಲ್ಲೂ ಕನ್ನಡಕ್ಕೆ ಮಾನ್ಯತೆ ಇಲ್ಲ ಎಂದು ಕಿಡಿ ಕಾರಿದ ಅವರು, ಬಸ್‌ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಕಡೆ ಕನ್ನಡ ಜಾಹಿರಾತುಗಳಿಗೆ ಮಾನ್ಯತೆ ನೀಡುವಂತೆ ಸೂಚಿಸಿದರು.

2 ವರ್ಷದಿಂದ ಅಪ್‌ಡೇಟ್‌ ಆಗಿಲ್ಲ ವೆಬ್‌ಸೈಟ್‌
ಕರ್ನಾಟಕ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಬೇಕಾದ ಪ್ರವಾಸೋದ್ಯಮ ಇಲಾಖೆಯಲ್ಲಿ ಕನ್ನಡದ ಗಂಧವೇ ಇಲ್ಲ ಎಂಬ ಕೂಗು ಒಂದೆಡೆಯಾದರೆ, ಕಳೆದ ಎರಡು ವರ್ಷದಿಂದ ವೆಬ್‌ಸೈಟ್‌ ಅಪ್‌ಡೇಟ್‌ ಕೂಡ ಆಗಿಲ್ಲ! ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಕನ್ನಡ ಅನುಷ್ಠಾನ ಕುರಿತು ಪರಿಶೀಲನೆ ಸಂದರ್ಭದಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಈ ಬಗ್ಗೆ ಪ್ರಶ್ನಿಸಿದಾಗ ವೆಬ್‌ಸೈಟ್‌ನ ಕೋಡಿಂಗ್‌ ಅದನ್ನು ಸಿದ್ಧಪಡಿಸಿದ ಸಂಸ್ಥೆಗಾಗಲಿ, ಇಲಾಖೆ ಅಧಿಕಾರಿಗಳಿಗಾಗಲಿ ಗೊತ್ತಿಲ್ಲ ಎಂಬ ಮಾಹಿತಿ
ಅಧಿಕಾರಿಗಳಿಂದ ಬಂತು. ಈ ಕುರಿತಂತೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಇಲಾಖೆಯ ಕಾರ್ಯವೈಖರಿ ಬಗ್ಗೆ ನಾಚಿಕೆ ಪಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next