ಕಾಸರಗೋಡು: ಕಳೆದ ಜನವರಿ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಕನ್ನಡ ವಿಭಾಗದಲ್ಲಿ ಬರೆದ ಉದ್ಯೋಗಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೀಟ್ ಫಾರೆಸ್ಟ್ ಆಫೀಸರ್‌ಗಳ ನೇಮಕಾತಿ ಸಂದಿಗ್ಧದಲ್ಲಿದೆ.
ಪಿಎಸ್‌ಸಿ ಫಲಿತಾಂಶವನ್ನು ಪ್ರಕಟಿಸದಿರುವುದೇ ನೇಮಕಾತಿ ವಿಳಂಬಕ್ಕೆ ಕಾರಣವೆಂದು ಜಿಲ್ಲೆಯ ಅರಣ್ಯ ಇಲಾಖೆ ತಿಳಿಸಿದೆ. ಫಲಿತಾಂಶ ಪ್ರಕಟಗೊಂಡ ಕೂಡಲೇ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಕ್ರಮಗಳು ಆರಂಭಗೊಳ್ಳಲಿವೆ. ಜಿಲ್ಲೆಯ ಮಲೆನಾಡು ಪ್ರದೇಶಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಡುಪ್ರಾಣಿಗಳ ಉಪಟಳ ತೀವ್ರವಾಗಿರುವಾಗ ಪಿಎಸ್‌ಸಿ ಈ ವಿಳಂಬ ನೀತಿ ಅನುಸರಿಸುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಒಟ್ಟು 45 ಹುದ್ದೆಗಳು ಫಾರೆಸ್ಟ್ ವಿಭಾಗದಲ್ಲಿ ಖಾಲಿಯಿವೆ. ಕನ್ನಡ ಪರೀಕ್ಷೆ ನಡೆಸಲು ವಿಳಂಬವಾಗಿದ್ದು, ಆದ್ದರಿಂದಲೇ ಫಲಿತಾಂಶವೂ ವಿಳಂಬವಾಗುತ್ತಿದೆ ಎನ್ನಲಾಗಿದೆ. ಕೇರಳದ ಇತರ ಜಿಲ್ಲೆಗಳಲ್ಲಿ ನೇಮಕಾತಿ ಶಿಫಾರಸು ಪೂರ್ತಿಯಾಗಿದ್ದರೂ ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಪಿಎಸ್‌ಸಿ ರ್‍ಯಾಂಕ್ ಪಟ್ಟಿ ಕೂಡ ಇನ್ನೂ ಪ್ರಕಟಗೊಂಡಿಲ್ಲ.