Advertisement

ರಂಗದಲ್ಲಿ ಬೆಳೆದ ಮರಗಿಡಬಳ್ಳಿ

11:27 AM Oct 17, 2019 | mahesh |

ಕೆಲವೊಮ್ಮೆ ಅನ್ನಿಸುವುದುಂಟು, ಗತಿಸಿದ ಬಳಿಕವೂ ಲೋಕ ಅಂಥವರ ಕುರಿತು ಏನೆನ್ನುತ್ತದೆ ಎಂದು ಅರಿತುಕೊಳ್ಳುವ ಸಾಧ್ಯತೆ ಇರುತ್ತಿದ್ದರೆ ಹೇಗೆ ಎಂದು. ಹಾಗೆ ಅರಿತ ಮೇಲೆ ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಸಾಧಿಸುವುದು ಸಾಧ್ಯವಾದರೆ ಹೇಗೆ ಎಂದು. ಅದು ಸಾಧ್ಯವಾಗದ್ದಕ್ಕೇ ಇರಬೇಕು; ಭೂತ, ಪ್ರೇತಗಳ ಕಲ್ಪನೆ ಸೃಷ್ಟಿಯಾದದ್ದು.

Advertisement

ಖ್ಯಾತ ಕತೆಗಾರ್ತಿ ವೈದೇಹಿ ಅವರ ಎರಡು ಕತೆಗಳನ್ನಿಟ್ಟುಕೊಂಡು (ಮರಗಿಡಬಳ್ಳಿ ಹಾಗೂ ಯಾರಿದ್ದಾರೆ ಎಲ್ಲಿ?) ಶಶಿರಾಜ್‌ ರಾವ್‌ ಕಾವೂರು ಅವರು “ಮರ ಗಿಡ ಬಳ್ಳಿ” ಎಂಬ ಹೆಸರಿನಲ್ಲಿ ಹೆಣೆದಿರುವ ನಾಟಕ ಅಂತಹ ಒಂದು ಕಥಾವಸ್ತುವನ್ನು ಒಳಗೊಂಡಿದೆ. ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನ ಸಭಾಂಗಣದಲ್ಲಿ ವೇದಿಕೆಯೇರಿದ ಮರ ಗಿಡ ಬಳ್ಳಿಯು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ನೂತನ ಕೊಡುಗೆ.

ಕಥಾವಸ್ತು: ಪಾರ್ಶ್ವವಾಯು ನಿಮಿತ್ತವಾಗಿ ಮರಣದ ಅಂಚಿಗೆ ಸಂದ ಮಂದಕ್ಕನನ್ನು ಅವರ ಮಕ್ಕಳು ಹೇಗೆ ನೋಡಿಕೊಳ್ಳುತ್ತಾರೆ ಎಂಬುದು ಒಂದೆಡೆಯಾದರೆ ಇನ್ನೊಂದೆಡೆ ಹಿಂದುಮುಂದಿಲ್ಲದ ಮುದುಕ ರಾಮಣ್ಣಯ್ಯ ತನ್ನ ಆರೈಕೆ ಮಾಡುವ ಗೀತಾಳಿಗೆ ಬರುವ ವಿವಾಹಾಲೋಚನೆಗಳನ್ನೆಲ್ಲ ತಪ್ಪಿಸುತ್ತಾನೆ. ವಿವಾಹದ ವಯಸ್ಸು ಮೀರಿದರೂ ಗೀತಾಳಿಗೆ ಬರುವ ನೆಂಟಸ್ತಿಕೆಗಳನ್ನೆಲ್ಲ ಚಾಣಾಕ್ಷತನದಿಂದ ತಪ್ಪಿಸುತ್ತಾ ಮೇಲ್ನೋಟಕ್ಕೆ ಆತನೇ ನೆಂಟಸ್ತಿಕೆಗಳನ್ನು ತರುತ್ತಾನೆ ಎಂಬ ಭ್ರಮೆ ಹುಟ್ಟಿಸುತ್ತಾ ರಾಮಣ್ಣಯ್ಯ ಸ್ವಾರ್ಥಿಯಾಗುತ್ತಾನೆ.

ಮಂದಕ್ಕ ಪಾರ್ಶ್ವವಾಯುವಿಗೆ ತುತ್ತಾದ ಪ್ರಾರಂಭಿಕ ದಿನಗಳಲ್ಲಿ ಆಕೆಯ ಬಗ್ಗೆ ಮಗ ಶ್ರೀಧರ ಹಾಗೂ ಸೊಸೆ ವಿಶಾಲ ವಹಿಸುವ ಕಾಳಜಿ ಅಪರಿಮಿತ. ಮಗಳು ಶಾರದ ಬಂದಾಗಲೂ ಅಷ್ಟೆ; ಅಮ್ಮನಿಗಾಗಿ ಕಣ್ಣೀರು ಹರಿಸುತ್ತಲೇ ಆಕೆ ಪ್ರವೇಶಿಸುತ್ತಾಳೆ. ಅಮೆರಿಕದಿಂದ ಕೊನೆಯ ಮಗನೂ ಬರುತ್ತಾನೆ. ಪ್ರತಿರೂಪಿ ಮಂದಕ್ಕ ತನ್ನ ಮಕ್ಕಳು ತನಗಾಗಿ ವಹಿಸುವ ಕಾಳಜಿಯಿಂದ ಪುಳಕಿತಳಾಗುತ್ತಾಳೆ. ಆದರೆ ಕೆಲವೇ ದಿನ. ಎಲ್ಲರಿಗೂ ಆಕೆಯ ಆರೈಕೆ ಮಾಡುವುದರಲ್ಲಿದ್ದ ಆಸಕ್ತಿ ಕಮರುತ್ತದೆ. ಎಲ್ಲ ಮಕ್ಕಳ ನಿಜ ಬಣ್ಣ ಬಯಲಾಗುತ್ತದೆ. ಶ್ರೀಧರ ಅಮ್ಮನನ್ನು ಹೋಂ ನರ್ಸಿಗೊಪ್ಪಿಸಿ, ವರ್ಗಾವಣೆ ಪಡೆದು ಮುಂಬಯಿಗೆ ಹೋಗಲುದ್ಯುಕ್ತನಾಗುತ್ತಾನೆ. ಅಂತೆಯೇ ಇತರ ಮಕ್ಕಳು ಕೂಡ. ತಾನು ನಂಬಿದ ತನ್ನ ಪ್ರೀತಿಪಾತ್ರ ಮಕ್ಕಳ ಬಾಯಲ್ಲಿ ತನ್ನ ಬಗೆಗಿನ ಎಂಥೆಂಥ ಸಾಹಿತ್ಯೋಪೇತ ಮಾತುಗಳು! ತನ್ನ ಮಕ್ಕಳ, ಸೊಸೆಯ ದ್ವಿಮುಖಗಳು ಮಂದಕ್ಕಳನ್ನು ವಿವಶಳನ್ನಾಗಿಸುತ್ತದೆ. ಪ್ರತಿರೂಪೀ ಮಂದಕ್ಕನ ಮೂಲಕ್ಕೆ ನಾಟುವ ಬಾಣಗಳವು.

ರಂಗ ತಂತ್ರ: ಒಳಕೋಣೆಯಲ್ಲಿ ಗಾಳಿ ಬೆಳಕು ಸಾಕಾಗದೆಂದು ಮಂದಕ್ಕನನ್ನು ಮಂಚಸಮೇತ ತಂದು ದಿವಾನಖಾನೆಯಲ್ಲಿ ಮಲಗಿಸುವುದು ನಾಟಕೀಯ ತಂತ್ರಗಾರಿಕೆ. ಇದು ಏಕಾಂಕ ನಾಟಕವಾಗಿದ್ದು ರಂಗಕ್ರಿಯೆ ನಡೆಯುವುದು ದಿವಾನಖಾನೆಯಲ್ಲಿಯೆ. ಮಂದಕ್ಕನ ಪ್ರತಿರೂಪ ವೇದಿಕೆಗೆ ಬರುವಾಗ ರೋಗಿಷ್ಠ ಮಂದಕ್ಕನ ಮೂಲರೂಪ ಮಲಗಿಯೇ ಇರಬೇಕಾಗುತ್ತದೆ. (ವೇದಿಕೆಯಲ್ಲಿ ಸ್ಥಳಾಭಾವ ಇದ್ದುದರಿಂದಲೋ ಏನೋ, ಪ್ರತಿರೂಪೀ ಮಂದಕ್ಕ ನೇಪಥ್ಯದಿಂದ ವೇದಿಕೆಗೆ ಬರುತ್ತಾಳೆ. ಅದು ಮೊದಮೊದಲು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿತ್ತು ಕೂಡ.)

Advertisement

ಸಂಗೀತ ನಾಟಕದ ಗತಿಗೆ ಪೂರಕವಾಗಿತ್ತು (ಗಣೇಶ್‌ ಕೊಡಕ್ಕಲ್‌). ಸಾವಿರ ವರ್ಷದ ಮರಗಳಿಗೆ ಸಾಯಲು ಸಾಕು ಒಂದೇ ಗಳಿಗೆ ಎಂಬ ಹಾಡಿನ ಸಾಲು(ರ: ಶಶಿರಾಜ್‌ ರಾವ್‌ ಕಾವೂರು) ಇಡೀ ನಾಟಕದ ಅಂತಃಸತ್ವದಂತಿದೆ. ಕೊನೆಯ ದೃಶ್ಯಕ್ಕಿಂತ ಮೊದಲನೆಯ ದೃಶ್ಯದಲ್ಲಿ ನಾಟಕ ಮುಗಿದಂತೆ ಭಾಸವಾಗುವ ತಂತ್ರಗಾರಿಕೆ ಬಳಸಿದ್ದೊಂದು ವಿಪರ್ಯಾಸವಾಯಿತು. ಬೆಳಕು ಅಲ್ಲಲ್ಲಿ ಕಣ್ಣುಮುಚ್ಚಾಲೆಯಾಡುತ್ತಿತ್ತು. ನಾಟಕದಲ್ಲಿ ಒಂದು ಮಂದಗತಿಯಿದೆ. ಆ ಮಂದಗತಿಯೇ ನಾಟಕವನ್ನು ಪ್ರೇಕ್ಷಕರ ಆಳಕ್ಕೆ ಇಳಿಸುವುದಕ್ಕೆ ಪೂರಕ. ನಾಟಕದಲ್ಲಿ ಕ್ಷಿಪ್ರ ಸಂಘರ್ಷಗಳಿಲ್ಲ; ಆದರೆ ಸಂಘರ್ಷವೇ ಎಲ್ಲ. ಹೊಸ ದೃಷ್ಟಿಕೋನಗಳನ್ನು ಅಳವಡಿಸಿಕೊಂಡು ರಾಮ್‌ ಶೆಟ್ಟಿ ಹಾರಾಡಿಯವರು ನಾಟಕವನ್ನು ನಿರ್ದೇಶಿಸಿದ್ದಾರೆ.

ಅಭಿನಯ: ಮರುಪ್ರದರ್ಶನದಲ್ಲಿ ಸರಿಪಡಿಸಿಕೊಳ್ಳಬಹುದಾದ ಸಣ್ಣಪುಟ್ಟ ದೋಷಗಳ ಹೊರತಾಗಿ ಇದೊಂದು ಯಶಸ್ವೀ ನಾಟಕ. ಅಭಿನಯಕ್ಕೆ ಸಂಬಂಧ ಪಟ್ಟಹಾಗೆ ಮುಖ್ಯವಾಗಿ ಪ್ರತಿರೂಪಿ ಮಂದಕ್ಕನಾದ‌ ಮಂಜುಳಾ ಜನಾರ್ದನ್‌, ಸ್ವಾರ್ಥಿ ರಾಮಣ್ಣಯ್ಯನಾದ ಲಕ್ಷ್ಮಣ್‌ ಕುಮಾರ್‌ ಮಲ್ಲೂರ್‌ ಅವಿಸ್ಮರಣೀಯರು. ಆರ್‌. ನರಸಿಂಹ ಮೂರ್ತಿ, ಪೂರ್ಣೇಶ ಆಚಾರ್ಯ, ಕೃತಿಕಾ ಎನ್‌., ಮಧುರ ಆರ್‌.ಜೆ., ಹಾಗೂ ಸ್ಮಿತಾ ಶೆಣೈಯವರ ಅಭಿನಯ ನಾಟಕವನ್ನು ಎತ್ತಿಹಿಡಿದಿತ್ತು. ವಿನಾಯಕ ಆಚಾರ್ಯ ಮಾತ್ರ ಇನ್ನಷ್ಟು ಪಳಗಬೇಕು.

ಫ‌ಲಶ್ರುತಿ: ಮುದುಕಿಯನ್ನು ನೋಡಿಕೊಳ್ಳದ ಮಕ್ಕಳೂ ಯುವತಿಯ ಮದುವೆ ಆಕೆಯನ್ನು ತಪ್ಪಿಸಿ ತನ್ನ ಬಳಿಯೇ ಇರುವಂತೆ ಮಾಡುವ ಸ್ವಾರ್ಥಿ ಮುದುಕನೂ ಇಲ್ಲಿನ ಮರಗಿಡ ಬಳ್ಳಿಗಳು. ಸ್ವಾರ್ಥಕ್ಕೆ ವಯಸ್ಸಿನ ಮಿತಿಯಿಲ್ಲವೆಂಬುದು ನಾಟಕದ ನಿಜವಾದ ಸಂದೇಶವೇ ಹೊರತು ವಯಸ್ಸಾದವರನ್ನು ಮಕ್ಕಳು ನೋಡಿಕೊಳ್ಳುವುದಿಲ್ಲ ಎಂಬುದನ್ನು ಹೇಳುವುದಷ್ಟೇ ನಾಟಕದ ಉದ್ದೇಶವಲ್ಲ. ಎಲ್ಲ ವಿಭಾಗಗಳು ಪರಸ್ಪರ ಪೂರಕವಾಗಿದ್ದುದರಿಂದಲೇ ಮರಗಿಡಬಳ್ಳಿ ಮರುಪ್ರದರ್ಶನಕ್ಕೆ ಸಿದ್ಧವಾಗಿ ನಿಂತಿದೆ.

ನಾ. ದಾಮೋದರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next