Advertisement
ಈ ಯಾತನೆ ಬಳ್ಳಾರಿಯ ಧಾತ್ರಿ ರಂಗಸಂಸ್ಥೆ ತಂಡದಿಂದ ಮೂಡಿ ಬಂದ ಪ್ರಸಿದ್ಧ ನಾಟಕ ಸೋರುತಿಹುದು ಸಂಬಂಧದಲ್ಲಿ ನವಿರಾಗಿ ಮೂಡಿಬಂದಿದೆ.
Related Articles
Advertisement
ಒಂದು ಹಳ್ಳಿಯಲ್ಲಿ ಏನೆಲ್ಲ ದೈನಿಕ ಚಟುವಟಿಕೆ ಕಾಣಬಹುದೋ ಅದಕ್ಕೆ ಹೊಂದುವಂತಹ ಎಲ್ಲ ಪಾತ್ರಗಳು ಬಂದು ಹೋಗುವವು. ಉತ್ತರ ಕರ್ನಾಟಕ ಶೈಲಿಯ ಗ್ರಾಮ್ಯ ಭಾಷೆಯ ಜತೆಗೆ ಹೆಣೆದ ಕತೆಯಲ್ಲಿ ಬಾಳಿನ ಸಂಧ್ಯೆಯ ಸಮಸ್ಯೆಗಳ ಅರಿವು. ಈ ಬಾಳು ಒಂದು ಹೊಲಸು ಗೂಡು. ಆದರೆ ಅದನ್ನು ಪರಾಮರ್ಶಿಸುವ ಗೊಡವೆಗೆ ಯಾರೂ ಹೋಗಲಾರರು ಎಂಬುದನ್ನು ಸರಳವಾಗಿ ತಿಳಿಸಿದ್ದಾರೆ.ಅಂಚೆ ಅಣ್ಣ ಎಲ್ಲಪ್ಪನ ಮೂಲಕ ಪಾತ್ರ ಆರಂಭವಾಗಿ ಸಾಹುಕಾರ್ ರಾಜಣ್ಣ, ಪೈಲ್ವಾನ ಸುಭಾಶಪ್ಪ, ಸಾಕವ್ವ, ನಾಗಪ್ಪ, ಚಂದ್ರಪ್ಪ, ಮೌಲಾ ಸಾಹೇಬ್, ಕಲಾವಿದ ಇನ್ನು ಅನೇಕ ಪಾತ್ರಗಳು ಒಂದು ಸಾಮಾಜಿಕ ವ್ಯವಸ್ಥೆ ಸಂಪೂರ್ಣ ಚಿತ್ರಣ ನೀಡುತ್ತವೆ. ಅಂಚೆ ಕಚೇರಿಯ ಪಿಂಚಣಿಗೆ ಕಾಯೋ ವಯೋವೃದ್ಧರ ಒಂದು ಸಮೂಹ. ತಮ್ಮ ಯೌವ್ವನದ ಅವಧಿಯಲ್ಲಿ ತಾವಿದ್ದ ಗತ್ತು ಗಾಂಭೀರ್ಯ, ಪ್ರೀತಿಯ ಗಮ್ಮತ್ತು ಎಲ್ಲವನ್ನೂ ಮೆಲುಕು ಹಾಕಿ ಪ್ರತಿ ನಿತ್ಯ ಪಿಂಚಣಿಗಾಗಿ ಕಾಯುವ ಜನ. ಈ ನಡುವೆ ಅನೇಕ ವಿಚಾರಗಳ ಬಗ್ಗೆ ನವಿರು ಹಾಸ್ಯ ಕಲಾಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವಂತೆ ಮಾಡಿದೆ. ಅಂಗವೈಕಲ್ಯವನ್ನು ಆಡಿಕೊಳ್ಳದಿರಿ. ವೃದ್ಧರು ಮನುಷ್ಯರಲ್ಲವೇ? ಈ ಜಗತ್ತೆ ಒಂದು ಹುಚ್ಚರ ಸಂತೆ ಅಂತೆಲ್ಲ ಸಂದೇಶವಿದೆ. ಕಲಾವಿದರ ನೈಜ ಬದುಕು ಮುಂತಾದ ನೆಲೆಯಲ್ಲಿ ಪಾತ್ರಗಳು ವೈಶಿಷ್ಟ್ಯ ಪೂರ್ಣವಾಗಿ ರಚನೆಯಾಗಿವೆ. ನಿರ್ದೇಶನ, ಪಾತ್ರ ವಿನ್ಯಾಸದಲ್ಲಿ ಮಹಂತೇಶ್ ರಾಮದುರ್ಗ ಅವರ ಪರಿಶ್ರಮ ಎದ್ದು ಕಾಣುತ್ತದೆ. ಆ ಪಾತ್ರಗಳಿಗೆ ಶಂಕರ್ ಶಿವಮೊಗ್ಗ ಬೆಳಕಿನ ಸಂಯೋಜನೆ ಇನ್ನಷ್ಟು ಜೀವ ತುಂಬಿದೆ. ಮಧುರ ಗಾನ ಸಿರಿಗೇರಿ ಮಂಜು ಅವರ ಸಾರಥ್ಯದಲ್ಲಿ ಮೂಡಿ ಬಂದ ಈ ನಾಟಕಕ್ಕೆ ಕಲಾವಿದರು ಮತ್ತು ಹಿನ್ನೆಲೆ ಸಂಗೀತದ ಜೀವಾಳವಿದೆ. ವಿಜಯ್ ಕುಮಾರ್ ಸಿರಿಗೇರಿ ಅವರ ಹಿನ್ನೆಲೆ ಸಂಗೀತದಲ್ಲಿ ಕೆಲ ಉತ್ತರ ಕರ್ನಾಟಕದ ಸಂಗೀತ, ಸಿನೆಮಾ ಗೀತೆ ಮತ್ತು ಆಲಾಪನೆ ಇದ್ದು ಕಲಾವಿದರ ಅಭಿನಯಕ್ಕೆ ತಕ್ಕಂತೆ ಪಾತ್ರಗಳ ಆಳ ಅರಿತು ಧ್ವನಿಗೂಡಿಸಿದ್ದಾರೆ. ಕೆಲ ಭಾಗದಲ್ಲಿ ಮಾತ್ರ ತಾಂತ್ರಿಕ ದೋಷದಿಂದಲೋ ಸರಿಯಾಗಿ ಕಲಾವಿದರು ಆಡೊ ಮಾತು ಕೇಳುತ್ತಿರಲಿಲ್ಲ. ಹಾಗಿದ್ದರೂ ಮೈಕ್ ಗೆ ಜೋತು ಬೀಳದೆ ಕಲಾವಿದರು ತಮ್ಮ ಧ್ವನಿಯ ಮೂಲಕವೇ ಪರಿಸ್ಥಿತಿ ಹತೋಟಿಗೆ ತಂದರು. ಇತ್ತೀಚೆಗೆ ಡಿಜಿಟಲ್ ಯುಗ ಬಂದಿದ್ದು ಇದನ್ನು ಚಾ ಮಾರುವವನ ಪಾತ್ರದಲ್ಲಿ ತಿಳಿಸಲಾಗಿದ್ದರೂ, ಹಣ ಮಾತ್ರ ಯಾಕೆ ಇನ್ನು ಪೋಸ್ಟ್ ಮ್ಯಾನ್ ಕೈಲಿ ಬರಬೇಕು. ಈಗ ಅಕೌಂಟ್‌ಗೆ ಪಿಂಚಣಿ ಬೀಳುವ ವ್ಯವಸ್ಥೆ ಇದೆ ಅಲ್ವಾ? ಎಂದು ಅನಿಸುವಾಗ ಇನ್ನೆರೆಡು ತಿಂಗಳಿಗೆ ನೇರ ಅಕೌಂಟ್‌ಗೆ ಹಣ ಬೀಳುತ್ತೆ ಎಂದು ಪ್ರೇಕ್ಷಕರ ಗೊಂದಲಕ್ಕೆ ಇದು ಹಳೇ ವ್ಯವಸ್ಥೆ ಎಂಬಂತೆ ತಿಳಿಸಿದ್ದಾರೆ. ಆದರೆ ಸರಕಾರದ ಗ್ಯಾರೆಂಟಿ ಯೋಜನೆಗಳು ಪ್ರಸ್ತುತದ್ದಾಗಿದ್ದು ಇಲ್ಲಿನ ಕೆಲ ಹಾಸ್ಯದಲ್ಲಿ ಶಕ್ತಿ ಯೋಜನೆ ಹಾಗೂ ಪಂಚ ಗ್ಯಾರೆಂಟಿ ಭರವಸೆಯ ನುಡಿಯ ಪರೋಕ್ಷ ಮಾರ್ಪಾಡು ಸೇರ್ಪಡೆ ಮಾಡಿದ್ದು ಕೆಲ ಗೊಂದಲಕ್ಕೆ ಕೂಡ ಕಾರಣ ಮಾಡುತ್ತದೆ. ಹಾಗಿದ್ದರೂ ಕತೆ ಮತ್ತು ಪಾತ್ರದ ಚೌಕಟ್ಟು ಮೀರದೆ ಹೇಳಬೇಕಾದದ್ದನ್ನು ಸರಳ ವಿಧಾನದಲ್ಲೇ ತಿಳಿಸಿದ್ದಾರೆ. ಪೋಸ್ಟ್ ಮ್ಯಾನ್ ಅನ್ನು ದಿನನಿತ್ಯ ಕಾಡಿ ಬೇಡಿ ತಮ್ಮ ಪಿಂಚಣಿ ಹಣ ಹೇಗಾದರೂ ಪಡೆಯಲೇಬೇಕೆಂದು ಕಾಯೋ ವೃದ್ಧರು. ಹಣ ಬರುವವರೆಗೆ ಮುಡಿ ಕಟ್ಟೊಲ್ಲ ಎಂದು ದ್ರೌಪದಿಯಂತೆ ಶಪಥ ಮಾಡಿ ಮುಡಿ ಹರಡುವ ಸೂಲಗಿತ್ತಿ ಸಾಕವ್ವ. ಕೊನೆಗೆ ಪಿಂಚಣಿ ಬರುತ್ತದಾ? ಈ ಶತಮಾನದ ಮಾದರಿ ದ್ರೌಪದಿಯ ಮುಡಿ ಕಟ್ಟುವ ಗಳಿಗೆ ಬರುತ್ತದಾ ಎಂಬ ಕುತೂಹಲ ಕೊನೇ ತನಕ ಇದ್ದು ಕೊನೆಯ ಭಾಗದಲ್ಲಿ ಒಂದೊಳ್ಳೆ ಸಾಮಾಜಿಕ ಸಂದೇಶ ನೀಡಲಾಗಿದೆ. -ರಾಧಿಕಾ ಕುಂದಾಪುರ