Advertisement

ಸುವರ್ಣ ಸೌಧದಲ್ಲಿ ಕನ್ನಡ ಡಿಂಡಿಮ

09:32 PM Oct 29, 2021 | Team Udayavani |

ಬೆಳಗಾವಿ: ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ, ವಿವಿಧ ಸಂಘಟನೆಗಳ ಪ್ರತಿಭಟನೆ ಮಾತ್ರ ಕೇಳುತ್ತಿದ್ದ ಸುವರ್ಣ ವಿಧಾನಸೌಧದ ಆವರಣದಲ್ಲಿ ಗುರುವಾರ ಕನ್ನಡದ ಕಂಪು ಮಾರ್ದನಿಸಿತು. ಸಾವಿರಾರು ಕನ್ನಡ ಅಭಿಮಾನಿಗಳು ಒಂದೇ ಸ್ವರದಲ್ಲಿ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪು ಪಸರಿಸಿದರು. ಸಾವಿರಾರು ಕಂಠದಲ್ಲಿ ಮೊಳಗಿದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಬಾರಿಸು ಕನ್ನಡ ಡಿಂಡಿಮವ ಗಾಯನ ಅಲೆ ಅಲೆಯಾಗಿ ತೇಲಿದವು. ಈ ವಿಶಿಷ್ಟ ಕಾರ್ಯಕ್ರಮ ಗಡಿ ಭಾಗದಲ್ಲಿ ಕನ್ನಡದ ಬೇರುಗಳು ಮತ್ತಷ್ಟು ಗಟ್ಟಿಗೊಳ್ಳುವಂತೆ ಮಾಡಿತು.

Advertisement

ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುವ ಲಕ್ಷ ಕಂಠ ಕನ್ನಡ ಗೀತಗಾಯನ ಕಾರ್ಯಕ್ರಮದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಲಕ್ಷ ಕಂಠ ಗೀತಗಾಯನ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು, ಅಧಿಕಾರಿಗಳು ಗಾಯನವನ್ನು ಪ್ರಸ್ತುತಪಡಿಸಿದರು.

ರಾಷ್ಟ್ರಕವಿ ಕುವೆಂಪು ವಿರಚಿತ ಬಾರಿಸು ಕನ್ನಡ ಡಿಂಡಿಮವ, ನಿಸಾರ್‌ ಅಹಮದ್‌ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಸಾವಿರಾರು ವಿದ್ಯಾರ್ಥಿಗಳು ಸುಮಧುರವಾಗಿ ಹಾಡುವ ಮೂಲಕ ಕನ್ನಡ ನಾಡು-ನುಡಿಯ ಪ್ರೇಮವನ್ನು ಅನಾವರಣಗೊಳಿಸಿದರು.

ಸಂಗೀತ ಶಿಕ್ಷಕರಾದ ವಿನಾಯಕ ಮೋರೆ ನೇತೃತ್ವದಲ್ಲಿ ಬೆಳಗಾವಿಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗೀತಗಾಯನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ ಎಲ್ಲರ ಗಮನಸೆಳೆದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸುವರ್ಣ ಸೌಧದಲ್ಲಿ ಕನ್ನಡ ಡಿಂಡಿಮ

ಆಡಳಿತ, ಪತ್ರವ್ಯವಹಾರ ಸೇರಿದಂತೆ ಪ್ರತಿ ಸಂದರ್ಭದಲ್ಲೂ ಕನ್ನಡವನ್ನೇ ಬಳಸುವುದರ ಜೊತೆಗೆ ಕನ್ನಡ ನಾಡಿನಲ್ಲಿ ವಾಸಿಸುವ ಕನ್ನಡೇತರ ಭಾಷಿಕರಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸುವುದಾಗಿ ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಬೆಳಗಾವಿ ಸಂಸದರಾದ ಮಂಗಲಾ ಅಂಗಡಿ ಅವರು, ಕನ್ನಡದ ಶ್ರೇಷ್ಠತೆಯನ್ನು ಸಾರುವುದು ಈ ಅಭಿಯಾನದ ವಿಶೇಷತೆಯಾಗಿದೆ. ಕನ್ನಡ ಗೀತಗಾಯನ ಅದ್ಭುತ ಕಾರ್ಯಕ್ರಮವಾಗಿದ್ದು, ಮಕ್ಕಳು ಸೇರಿದಂತೆ ಎಲ್ಲರೂ ಕನ್ನಡ ಪ್ರೇಮ ಮೆರೆಯಲು ಈ ಅಭಿಯಾನ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

Advertisement

ಈ ವಿನೂತನ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಬಿ.ಪುಂಡಲೀಕ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಗೀತ ಗಾಯನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next