ಮುಂಬಯಿ: ಬದುಕಿನುದ್ದಕ್ಕೂ ಅನೇಕ ಕಷ್ಟಗಳನ್ನು ಅನು ಭವಿಸಿಕೊಂಡು ಬಂದಿದ್ದರೂ ಎದೆಗುಂದದೆ ಸ್ವಪರಿಶ್ರಮದಿಂದ ಮುಂದೆ ಬಂದವನು ನಾನು. ನನ್ನ ಅಧ್ಯಾಪನ ವೃತ್ತಿ ನನ್ನನ್ನು ಬೆಳೆಸಿತು. ಓದಿಗೆ ಹೆಚ್ಚು ಪ್ರಾಶಸ್ತÂ ನೀಡುತ್ತಿದ್ದು ಇಂದಿಗೂ ಓದದೆ ಮಲಗುವ ಅಭ್ಯಾಸ ನನಗಿಲ್ಲ. ವ್ಯಾಪಕವಾದ ಓದು ಅಧ್ಯಯನದಿಂದ ಇಂದು ನಾನೇನು ಸಾಧನೆ ಮಾಡಿದ್ದೇನೆಯೋ ಅದು ಸಾಧ್ಯವಾಯಿತು. ನಮ್ಮ ದೇಶದಲ್ಲಿದ್ದುಕೊಂಡೇ ದೇಶ ದ್ರೋಹವೆಸಗುವವರ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು ನಾನೆಂದೆಂದಿಗೂ ಭಾರತೀಯ ಎನ್ನುವ ಹೆಮ್ಮೆ ನನಗಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ| ದೊಡ್ಡರಂಗೇ ಗೌಡ ಅವರು ಹೇಳಿದರು.
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಕಲಿನಾ ಕ್ಯಾಂಪಸ್ಸಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದ್ದ ಕುವೆಂಪು ದತ್ತಿ ಉಪನ್ಯಾಸ, ಕೃತಿಗಳ ಬಿಡುಗಡೆ, ಅಭಿನಂದನ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸೋತು ಗೆದ್ದವನು
ಜೀವನದ ಸಂಘರ್ಷದಲ್ಲಿ ಸೋತು ಗೆದ್ದವನು ನಾನು. ಸಮುದ್ರದ ಅಲೆಗಳಂತೆ ಬಂದ ತೊಡರುಗಳೆಲ್ಲವನ್ನು ಎದುರಿಸಿ ಕಷ್ಟಗಳನ್ನು ಎದೆಯೊಡ್ಡಿ ಸ್ವೀಕರಿಸಿದೆ. ಆ ಸಮಯದಲ್ಲಿ ಕೈ ಹಿಡಿದು ನಡೆಸಿದ್ದು ಸಾಹಿತ್ಯದ ಆಸಕ್ತಿ. ಸಾಹಿತ್ಯ ಸಖ್ಯ ಹೊಸ ಹುರುಪನ್ನು ನೀಡುತ್ತದೆ. ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗದ ಈ ಕಾರ್ಯಕ್ರಮ ನನ್ನ ಪಾಲಿಗೆ ಅತ್ಯಂತ ಖುಷಿಯನ್ನು ನೀಡಿದೆ. ಮುಂಬಯಿ ತುಳು-ಕನ್ನಡಿಗರ ಭಾಷಾಭಿಮಾನವನ್ನು ಕಂಡು ನಿಜಕ್ಕೂ ಬೆರಗಾಗಿದ್ದೇನೆ ಎಂದು ಅವರು ಹೇಳಿದರು.
ಅಭಿನಂದನ ಭಾಷಣವನ್ನು ಮಾಡಿದ ವೈ. ವಿ. ಗುಂಡೂರಾವ್ ಅವರು ಡಾ| ದೊಡ್ಡರಂಗೇ ಗೌಡ ಅವರು ರಾತ್ರಿ ದುಡಿದು ಹಗಲು ಕಲಿತು ಪದವಿ ಪಡೆದವರು. ಇಂದು ಅವರು ಏರಿದ ಎತ್ತರ ಸ್ವ ಪರಿಶ್ರಮದಿಂದ. ಅದು ಸಾಹಿತ್ಯ ಕ್ಷೇತ್ರವಾಗಿರಬಹುದು, ಚಲನಚಿತ್ರ ರಂಗವಾಗಿರಬಹುದು ಅಥವಾ ರಾಜಕೀಯ ಆಗಿರಬಹುದು. ಅಲ್ಲೆಲ್ಲ ಅವರು ತಮ್ಮತನವನ್ನು ಉಳಿಸಿಕೊಂಡು ಬಂದಿದ್ದಾರೆ. ಸಹಕಾರ, ಸಕಾರಾತ್ಮಕ ನಡೆ ನುಡಿ ರಂಗೇಗೌಡರದ್ದು. ಹೇಗಾದರೂ ಮಾಡಿ ಮನುಷ್ಯನಾಗಬೇಕಾದರೆ ನವಚೈತನ್ಯ ನೀಡಬಲ್ಲ ಸಾಹಿತ್ಯ ಸಹವಾಸ ಮಾಡಬೇಕು ಎನ್ನುವುದಕ್ಕೆ ರಂಗೇಗೌಡರು ಉತ್ತಮ ಉದಾ ಹರಣೆ. ಅಹಂ ಇಲ್ಲದ ಅವರ ವ್ಯಕ್ತಿತ್ವ ಇಂದಿನ ಹೊಸ ಯುಗದ ಸಾಹಿತಿಗಳಿಗೆ ದಿಕ್ಸೂಚಿಯನ್ನು ತೋರಿಸಬಲ್ಲದು. ಅಧ್ಯಯನ, ಅಧ್ಯಾಪನದಲ್ಲಿ ತೊಡಗಿಸಿಕೊಂಡು, ಸಾಹಿತ್ಯಕವಾಗಿ ಬೆಳೆದು, ರಾಜಕೀಯ ಕ್ಷೇತ್ರದಲ್ಲಿಯೂ ಮಿಂಚಿದ್ದು ಅವರ ಕಠಿನ ಪರಿಶ್ರಮದಿಂದ. ತಮ್ಮ ಸರಳವಾದ ಸ್ವಭಾವದಿಂದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನೆಮಾ ಹಾಡುಗಳನ್ನು ರಚಿಸಿದ ಅವರ ಸಾಧನೆ ಗಣನೀಯ ವಾದುದು ಎಂದು ನುಡಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಡಾ| ಜಿ. ಎನ್. ಉಪಾಧ್ಯ ಅವರು ಮಾತನಾಡಿ, ಡಾ| ದೊಡ್ಡರಂಗೇ ಗೌಡ ಅವರು ನಮ್ಮ ವಿಭಾಗಕ್ಕೆ ಆಗಮಿಸಿರುವುದು ನಮಗೆ ಅತ್ಯಂತ ಆನಂದವನ್ನು ನೀಡಿದೆ. ಕುವೆಂಪು ದತ್ತಿ ಉಪನ್ಯಾಸ ಮಾಲಿಕೆಯ ಉದ್ಘಾಟನೆ ಹಾಗೂ ಪ್ರಥಮ ಉಪನ್ಯಾಸ ಇಂತಹ ಮೇರು ಸಾಹಿತಿಗಳಿಂದ ನೆರವೇರಿದ್ದು ಖುಷಿಯ ವಿಷಯ. ಇದರ ಸಾರಥ್ಯವನ್ನು ವಹಿಸಿದ ಕವಿ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ ಅವರಿಗೆ ವಂದನೆಗಳು ಸಲ್ಲುತ್ತವೆ. ವಿಭಾಗದಲ್ಲಿ ಇದುವರೆಗೆ 9 ದತ್ತಿನಿಧಿ ಸ್ಥಾಪನೆಯಾಗಿದ್ದು ಇಂದು ದೊಡ್ಡರಂಗೇಗೌಡ ಅವರು ಹತ್ತನೇ ದತ್ತಿಯಾಗಿ ಅವರ ಶ್ರೀಮತಿ ಡಾ| ರಾಜೇಶ್ವರಿ ಗೌಡ ಅವರ ಹೆಸರಲ್ಲಿ ಸ್ಥಾಪಿಸಲು ಮುಂದಾಗಿದ್ದಾರೆ ಎನ್ನುವುದು ಅಭಿಮಾನದ ವಿಷಯ ಎಂದು ನುಡಿದರು.
ವೇದಿಕೆಯಲ್ಲಿ ಮುಂಬುಯ ಖ್ಯಾತ ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿ, ಖ್ಯಾತ ನ್ಯಾಯವಾದಿ ಕಡಂದಲೆ ಪ್ರಕಾಶ್ ಎಲ್. ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರಾಗಿರುವ ಶ್ಯಾಮ್ ಎನ್. ಶೆಟ್ಟಿ, ಬೆಂಗಳೂರಿನ ಕವಿ ಶಾಂತಾರಾಮ ವಿ. ಶೆಟ್ಟಿ, ಕವಿ, ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ, ಬೆಂಗಳೂರಿನ ಟೋಟಲ್ ಕನ್ನಡದ ವಿ. ಲಕ್ಷಿ¾àಕಾಂತ್ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಸಹಪ್ರಾಧ್ಯಾಪಕ ರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಸಂಶೋಧನ ಸಹಾಯಕರಾದ ವೈ. ವಿ. ಮಧುಸೂದನ್ ರಾವ್ ಅವರು ವಂದಿಸಿದರು. ವಿಭಾಗದ ಸಂಶೋಧನ ವಿದ್ಯಾರ್ಥಿಗಳಾದ ಶಿವರಾಜ್ ಎಂ. ಜಿ., ಸುರೇಖಾ ದೇವಾಡಿಗ, ಸುರೇಖಾ ರಾವ್, ಕುಮುದಾ ಆಳ್ವ, ಅನಿತಾ ಶೆಟ್ಟಿ, ಉದಯ ಶೆಟ್ಟಿ, ಸೋಮಶೇಖರ ಮಸಳಿ, ದಿನಕರ ನಂದಿ ಮೊದಲಾದ ವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.