Advertisement

ಮಂಗಳೂರು- ಮಣಿಪಾಲ ಖಾಸಗಿ ಬಸ್‌ಗಳಲ್ಲಿ ಕನ್ನಡ ಮಾಯ

10:09 AM Mar 11, 2018 | Team Udayavani |

ಮಹಾನಗರ: ರಾಜ್ಯದಲ್ಲಿ ಸಂಚರಿಸುವ ಎಲ್ಲ ಖಾಸಗಿ ಹಾಗೂ ಸರಕಾರಿ ಬಸ್‌ಗಳಲ್ಲಿ ಸಾಮಾನ್ಯವಾಗಿ ಕನ್ನಡದ ನಾಮಫಲಕಗಳು ಇರುತ್ತವೆ. ಆದರೆ, ಮಂಗಳೂರು-ಉಡುಪಿ-ಮಣಿಪಾಲ ನಡುವೆ ಸಂಚರಿಸುವ ಕೆಲವೊಂದು ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಇಂಗ್ಲಿಷ್‌ ನಾಮಫಲಕಗಳೇ ರಾರಾಜಿಸುತ್ತಿವೆ.

Advertisement

ಸಾಮಾನ್ಯವಾಗಿ ನಗರದ ಸಿಟಿ ಬಸ್‌ ಸೇರಿದಂತೆ ಸರಕಾರಿ ಬಸ್‌ಗಳಲ್ಲಿ ಆಂಗ್ಲ ಭಾಷೆಯಲ್ಲಿ ನಾಮಫಲಕ ನಮೂದಾಗಿದ್ದರೂ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಆದರೆ ಇಲ್ಲಿನ ಕೆಲವು ಖಾಸಗಿ ಬಸ್‌ಗಳು ಆಂಗ್ಲಭಾಷಾ ಮೋಹಕ್ಕೆ ತುತ್ತಾಗಿರುವುದು ಸಾರ್ವಜನಿಕರ ಅದರಲ್ಲಿಯೂ ಕನ್ನಡಾಭಿಮಾನಿಗಳ ಕೆಂಗಣ್ಣಿಗೆ ಗುರಿ ಯಾಗಿದೆ. ಪ್ರಯಾಣಿಕರೆಲ್ಲರಿಗೂ ಆಂಗ್ಲ ಭಾಷೆಯ ಬಗ್ಗೆ ಜ್ಞಾನವಿರುವುದಿಲ್ಲ. ಹಾಗಾಗಿ ಉಡುಪಿ ಅಥವಾ ಮಣಿಪಾಲಕ್ಕೆ ಹೋಗುವ ಇಂಗ್ಲಿಷ್‌ ಬಾರದ ಪ್ರಯಾಣಿಕರು ಬಸ್‌ ಹತ್ತಲು ಪರದಾಡುವ ಸ್ಥಿತಿ ಉಂಟಾಗಿದೆ.

 ಮಾರ್ಗ ಮಧ್ಯೆ ಇಳಿಸುತ್ತಾರೆ
ಮಂಗಳೂರಿನಿಂದ ಮಣಿಪಾಲಕ್ಕೆ ಸಂಚರಿಸುವ ಕೆಲವು ಖಾಸಗಿ ಬಸ್‌ಗಳಲ್ಲಿರುವ ನಾಮ ಫಲಕಗಳನ್ನು ಗಮನಿಸಿ ಬಸ್‌ ಹತ್ತಿದರೆ ಪ್ರಯಾಣಿಕರು ಗೊಂದಲಕ್ಕೀಡಾಗುತ್ತಾರೆ. ಏಕೆಂದರೆ, ಕೆಲವೊಂದು ಖಾಸಗಿ ಬಸ್‌ಗಳು ನಾವು ಟಿಕೆಟ್‌ ತೆಗದ ಸ್ಥಳಕ್ಕೆ ಕ್ರಮಿಸುವುದೇ ಇಲ್ಲ. ಮಂಗಳೂರು-ಮಣಿಪಾಲ ಖಾಸಗಿ ಬಸ್‌ನಲ್ಲಿ ಮಣಿಪಾಲಕ್ಕೆ ನಿರ್ವಾಹಕರು ಟಿಕೆಟ್‌ ಕೊಟ್ಟರೂ ಮಾರ್ಗ ಮಧ್ಯೆ ಎಂದರೆ ಉಡುಪಿಯಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಮಣಿಪಾಲಕ್ಕೆ ಬೇರೆ ಬಸ್‌ನಲ್ಲಿ ತೆರಳಿ ಎನ್ನುತ್ತಾರೆ. ಕೆಲವೊಂದು ಬಾರಿ ಬಸ್‌ ನಿರ್ವಾಹಕರೇ ಮಣಿಪಾಲಕ್ಕೆ ತೆರಳುವ ಬೇರೆ ಬಸ್‌ ಗಳನ್ನು ಸಂಪರ್ಕಿಸಿ, ಪ್ರಯಾಣಿಕರನ್ನು ಕಳುಹಿಸಿದರೆ, ಇನ್ನೂ ಕೆಲವೊಮ್ಮೆ ಪ್ರಯಾಣಿಕನೇ ಬೇರೆ ಬಸ್‌ಗಳ ಕೈ ಹಿಡಿಯಬೇಕಾಗುತ್ತದೆ.

ಮಾಲಕರಿಗೆ ಸೂಚನೆ ನೀಡಿದ್ದೇವೆ
ಕೆಲವು ತಿಂಗಳ ಹಿಂದೆ ಬಸ್‌ ನಿಲ್ದಾಣಗಳಿಗೆ ತೆರಳಿ ಕನ್ನಡ ನಾಮಫಲಕ ಹೊಂದಿರದ ಖಾಸಗಿ ಬಸ್‌ಗಳ ಕಾರ್ಯಾಚರಣೆ ನಡೆಸಿದ್ದೆವು. ಅನಂತರ ಕಟ್ಟುನಿಟ್ಟಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಮಾಲಕರಿಗೆ ಸೂಚನೆ ನೀಡಿದ್ದೇವೆ. ಬಸ್‌ ಪರವಾನಿಗೆ ನೀಡುವ ಸಮಯದಲ್ಲಿ ಯಾವ ಮಾರ್ಗಗಳನ್ನುಸೂಚಿಸಲಾಗುತ್ತದೆಯೋ ಅಲ್ಲೇ ಕಡ್ಡಾಯವಾಗಿ ತೆರಳಬೇಕು. ಇಲ್ಲವಾದರೆ ಪ್ರಯಾಣಿಕರು ಆರ್‌ಟಿಒಗೆ ದೂರು ನೀಡಬಹುದು. ಕೂಡಲೇ ಕ್ರಮಕೈಗೊಳ್ಳಲಾಗುವುದು.
– ಜಿ.ಎಸ್‌. ಹೆಗಡೆ, ಆರ್‌ಟಿಒ
ಅಧಿಕಾರಿ, ಮಂಗಳೂರು

ಕಡ್ಡಾಯವಾಗಿ ಕನ್ನಡ ಬಳಸಿ
ಖಾಸಗಿ ಬಸ್‌ಗಳ ನಾಮಫಲಕವನ್ನು ಕಡ್ಡಾಯವಾಗಿ ಕನ್ನಡದಲ್ಲೇ ಹಾಕಬೇಕು ಎಂಬುವುದಾಗಿ ಬಸ್‌ ಮಾಲಕರಿಗೆ ಸೂಚನೆ ನೀಡಲಾಗಿದೆ. ಮಂಗಳೂರಿನಿಂದ ಮಣಿಪಾಲಕ್ಕೆ ಸಂಚರಿಸುವ ಕೆಲವು ಖಾಸಗಿ ಬಸ್‌ ಗಳಲ್ಲಿ ಪ್ರಯಾಣಿಕರನ್ನು ಉಡುಪಿಯಲ್ಲಿ ಇಳಿಸಲಾಗುತ್ತದೆ ಎಂಬ ದೂರು ನನಗೂ ಬಂದಿದೆ. ಪರ್ಮಿಟ್‌ ಇದ್ದ ಮೇಲೆ ಬಸ್‌ ನಿಗದಿತ ಸ್ಥಳಕ್ಕೆ ಚಾಲನೆ ಮಾಡಲೇಬೇಕು. ಈ ತಪ್ಪು ಪುನರಾವರ್ತನೆಯಾದರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ ಟಿಒ) ದೂರು ದಾಖಲಿಸಲಿ.
– ರಾಜವರ್ಮ ಬಲ್ಲಾಳ್‌,ಕೆನರಾ
ಬಸ್‌ ಮಾಲಕರ ಸಂಘದ ಅಧ್ಯಕ್ಷ

Advertisement

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next