Advertisement

ಸ್ಥಳೀಯರನ್ನು ಕಡೆಗಣಿಸಿ ಎಂ.ಆರ್.ಪಿ.ಎಲ್. ನೇಮಕಾತಿ ಪ್ರಕಟನೆ: ನಾಗಾಭರಣ ಕಿಡಿ

09:56 AM Oct 25, 2019 | Hari Prasad |

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಖ್ಯಾತ ಚಲನಚಿತ್ರ ನಿರ್ದೇಶಕ, ನಟ ಮತ್ತು ರಂಗಕರ್ಮಿ ಟಿ.ಎಸ್. ನಾಗಾಭರಣ ಅವರು ಕನ್ನಡಿಗರ ಪರ ಧ್ವನಿ ಎತ್ತುವ ಕೆಲಸವನ್ನು ತನ್ನ ಅಧಿಕಾರಾವಧಿಯ ಪ್ರಾರಂಭದಲ್ಲೇ ಮಾಡಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರ ಸ್ವಾಮ್ಯದ ಉದ್ದಿಮೆ ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಸಂಸ್ಥೆಯಲ್ಲಿ (MRPL) ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಕಂಪೆನಿ ಹೊರಡಿಸಿರುವ ನೇಮಕಾತಿ ಪ್ರಕಟಣೆ ಇದೀಗ ನಾಗಾಭರಣ ಅವರ ಕೆಂಗಣ್ಣಿಗೆ ಕಾರಣವಾಗಿದೆ.

ಇದಕ್ಕೆ ಕಾರಣ, ಸ್ಥಳೀಯ ನೆಲ, ಜಲವನ್ನು ಬಳಸಿಕೊಂಡು ಈ ಭಾಗದಲ್ಲಿದ್ದ ನಿವಾಸಿಗಳನ್ನು ಒಕ್ಕಲೆಬ್ಬಿಸಿ ಕಾರ್ಯಾರಂಭ ಮಾಡಿದ ಎಂ.ಆರ್.ಪಿ.ಎಲ್. ಇದೀಗ ತನ್ನ ನೇಮಕಾತಿ ಪ್ರಕಟಣೆಯಲ್ಲಿ ಸ್ಥಳೀಯ ಕನ್ನಡಿಗರಿಗೆ (ದಕ್ಷಿಣ ಕನ್ನಡದ ಅರ್ಹ ಅಭ್ಯರ್ಥಿಗಳಿಗೆ) ಯಾವುದೇ ರೀತಿಯ ಆದ್ಯತೆಯನ್ನು ನೀಡದಿರುವ ಕುರಿತು ಪ್ರಾಧಿಕಾರದ ಅಧ್ಯಕ್ಷರ ನೆಲೆಯಲ್ಲಿ ನಾಗಾಭರಣ ಅವರು ಇದೀಗ ಧ್ವನಿ ಎತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಎಂ.ಆರ್.ಪಿ.ಎಲ್.ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಂ. ವೆಂಕಟೇಶ್ ಅವರಿಗೆ ಪತ್ರವೊಂದನ್ನು ಬರೆದಿರುವ ನಾಗಾಭರಣ ಅವರು ಈ ನೇಮಕಾತಿ ಪ್ರಕಟಣೆಯನ್ನು ತಕ್ಷಣವೇ ತಡೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ. ಮಾತ್ರವಲ್ಲದೇ ಸ್ಥಳೀಯ ಕನ್ನಡಿಗ ಅಭ್ಯರ್ಥಿಗಳಿಗೆ ಆದ್ಯತೆ ನೀಡುವಂತೆ ಈ ನೇಮಕಾತಿ ಪ್ರಕಟನೆಯನ್ನು ತಿದ್ದುಪಡಿ ಮಾಡಿ ಪುನರ್ ಪ್ರಕಟಿಸುವಂತೆ ನಾಗಾಭರಣ ಅವರು ಎಂ.ಆರ್.ಪಿ.ಎಲ್. ವ್ಯವಸ್ಥಾಪಕ ನಿರ್ದೇಶಕರಿಗೆ ತಾಕೀತು ಮಾಡಿದ್ದಾರೆ. ಹಾಗೂ ಈ ವಿಚಾರದಲ್ಲಿ ಸಂಸ್ಥೆಯು ಕೈಗೊಂಡಿರುವ ಕ್ರಮಗಳ ಕುರಿತಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಒಂದನ್ನು ನೀಡುವಂತೆಯೂ ಸಹ ನಾಗಾಭರಣ ಅವರು ಕಂಪೆನಿಗೆ ಮನವಿ ಮಾಡಿಕೊಂಡಿದ್ದಾರೆ.

ಟಿ.ಎಸ್. ನಾಗಾಭರಣ ಅವರು ಎಂ.ಆರ್.ಪಿ.ಎಲ್.ನ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಪತ್ರದ ಪ್ರತಿ ಇಲ್ಲಿದೆ:


Advertisement

ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಲವಾರು ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿದ್ದು ಆಯಾಯ ಭಾಗದ ಜನರು ಈ ಉದ್ದಿಮೆಗಳಿಗಾಗಿ ತಮ್ಮ ಸ್ವಂತ ಜಮೀನನ್ನು ಬಿಡಿಗಾಸು ಪರಿಹಾರಕ್ಕೆ ಬಿಟ್ಟುಕೊಟ್ಟಿದ್ದಾರೆ.

ಪ್ರಾರಂಭದಲ್ಲಿ ತಮ್ಮ ಉದ್ದಿಮೆಯನ್ನು ನೆಲೆಗೊಳಿಸಲು ಸ್ಥಳೀಯರಿಗೆ ನಾನಾ ರೀತಿಯ ಭರವಸೆಗಳನ್ನು ನೀಡುವ ಈ ಕಂಪೆನಿಗಳು ಬಳಿಕ ತಮ್ಮ ಮರ್ಜಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾ ಹೋಗುತ್ತವೆ. ಇವನ್ನೆಲ್ಲಾ ಪ್ರಶ್ನಿಸಬೇಕಾದ ಜನಪ್ರತಿನಿಧಿಗಳೂ ಸಹ ಮೌನಕ್ಕೆ ಶರಣಾಗಿರುವುದು ಆಶ್ಚರ್ಯವೇ ಸರಿ. ಆದರೆ ಇಂತಹ ವಿಚಾರದಲ್ಲಿ ಕನ್ನಡಿಗರ ಹಕ್ಕನ್ನು ಪ್ರಾಧಿಕಾರದ ಮೂಲಕವೇ ಪ್ರಶ್ನಿಸ ಹೊರಟಿರುವ ನೂತನ ಅಧ್ಯಕ್ಷರ ಈ ಕ್ರಮ ಸ್ವಾಗತಾರ್ಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next