Advertisement

ತಾಂತ್ರಿಕ ಕಾಲೇಜುಗಳಲ್ಲಿ ಇನ್ನೂ ಮೊಳಗದ ಕನ್ನಡ ಡಿಂಡಿಮ

06:15 AM Dec 03, 2018 | Team Udayavani |

ಬೆಂಗಳೂರು: ರಾಜ್ಯದ ಪಾಲಿಟೆಕ್ನಿಕ್‌ ಹಾಗೂ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್‌ ಕಾಲೇಜುಗಳ ಕಚೇರಿ ವ್ಯವಹಾರ ಇನ್ಮುಂದೆ ಕನ್ನಡದಲ್ಲೇ ನಡೆಯಲಿದೆ. ಆದರೆ, ಸಂಸ್ಥೆಗಳ ವೆಬ್‌ಸೈಟ್‌ ಕನ್ನಡೀಕರಣಕ್ಕೆ ನೀಡಿದ್ದ ಗಡುವು ಮೀರಿದರೂ ಕಾರ್ಯ ಮುಗಿದಿಲ್ಲ!

Advertisement

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದ್ದು, ಶುಲ್ಕ ಹಾಗೂ ಸೀಟಿನ ವಿವರ ಸಹಿತವಾಗಿ ಕಾಲೇಜಿನ ಎಲ್ಲ ಮಾಹಿತಿ ಕನ್ನಡದಲ್ಲೇ ಪಡೆಯಬಹುದು ಹಾಗೂ ಅಧಿಕಾರಿಗಳೊಂದಿಗೆ ಕನ್ನಡದ‌ಲ್ಲೇ ವ್ಯವಹರಿಸಬಹುದು. ಆದರೆ, ಗ್ರಾಮೀಣ ವಿದ್ಯಾರ್ಥಿಗಳು ಇನ್ನೂ “ಕನ್ನಡಕ್ಕಾಗಿ’ ಕಾಯಬೇಕಿದೆ.

ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಡಿ 82 ಸರ್ಕಾರಿ, 44 ಅನುದಾನಿತ ಹಾಗೂ 170 ಖಾಸಗಿ ಪಾಲಿಟೆಕ್ನಿಕ್‌ ಮತ್ತು 11 ಸರ್ಕಾರಿ, 9 ಅನುದಾನಿತ ಎಂಜಿನಿಯರಿಂಗ್‌ ಕಾಲೇಜುಗಳಿವೆ. ಇದರಲ್ಲಿ ಬಹುತೇಕ ಕಾಲೇಜು ಹಾಗೂ ಪಾಲಿಟೆಕ್ನಿಕ್‌ ಸಂಸ್ಥೆಗಳ ಅಧಿಕೃತ ವೆಬ್‌ಸೈಟ್‌ ಆಂಗ್ಲ ಭಾಷೆಯಲ್ಲೇ ಇದೆ. ಜತೆಗೆ ಕಚೇರಿಯ ವ್ಯವಹಾರಗಳು ಆಂಗ್ಲ ಭಾಷೆಯಲ್ಲೇ ನಡೆಯುತ್ತಿವೆ. ಇದಕ್ಕೆ ಕಡಿವಾಣ ಬೀಳಲಿದ್ದು, ಸಂಸ್ಥೆಯ ಸೂಚನಾ ಫ‌ಲಕ, ನೋಟಿಸ್‌, ಸಭಾ ನಡಾವಳಿ ಸೇರಿ ಕಚೇರಿಯ ನಿತ್ಯದ ವ್ಯವಹಾರಗಳು ಕನ್ನಡದಲ್ಲೇ ಇರಬೇಕೆಂದು ತಾಂತ್ರಿಕ ಶಿಕ್ಷಣ ಇಲಾಖೆ ಎಲ್ಲ ಕಾಲೇಜು ಹಾಗೂ ಪಾಲಿಟೆಕ್ನಿಕ್‌ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಕನ್ನಡದಲ್ಲಿ ವೆಬ್‌ಸೈಟ್‌: ಕಾಲೇಜು ಹಾಗೂ ಪಾಲಿಟೆಕ್ನಿಕ್‌ ಸಂಸ್ಥೆಗಳ ವೆಬ್‌ಸೈಟ್‌ ಕನ್ನಡದಲ್ಲೇ ಇರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಇಲಾಖೆಗೆ ಸೂಚಿಸಲಾಗಿದೆ. 

ಅದರಂತೆ ಇಲಾಖೆಯ ಅಧಿಕಾರಿಗಳು ಎಲ್ಲ ಸಂಸ್ಥೆಗಳ ಪ್ರಾಂಶುಪಾಲರಿಗೆ ಪತ್ರ ಬರೆದು, ಆದಷ್ಟು ಬೇಗ ಸಂಸ್ಥೆಯ ವೆಬ್‌ಸೈಟ್‌ ಕನ್ನಡಕ್ಕೆ ಬದಲಾಯಿಸಬೇಕು. ಸಂಪೂರ್ಣ ಇಂಗ್ಲಿಷ್‌ ಇದ್ದಲ್ಲಿ, ಅದನ್ನು ಬದಲಾಯಿಸಿ, ಕನ್ನಡ ಅಳವಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಕೆಲವು ಕಾಲೇಜಿನ ಪ್ರಾಂಶುಪಾಲರು ಈಗಾಗಲೇ ಇದನ್ನು ಜಾರಿಗೆ ತಂದಿದ್ದಾರೆ. ಇನ್ನು ಕೆಲವು ಕಾಲೇಜಿನ ವೆಬ್‌ಸೈಟ್‌ ಇನ್ನೂ ಇಂಗ್ಲಿಷ್‌ನಲ್ಲೇ ಇದೆ.

ವರದಿ ಸಲ್ಲಿಸಿಲ್ಲ : ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳು ತಮ್ಮ ಸಂಸ್ಥೆಯ ವೆಬ್‌ಸೈಟ್‌ ಇಂಗ್ಲಿಷ್‌ನಿಂದ ಕನ್ನಡಕ್ಕೆ ಬದಲಾಯಿಸಿರುವ ಬಗ್ಗೆ ವರದಿ ನೀಡುವಂತೆ ನ.27ರ ಗಡುವು ನೀಡಲಾಗಿತ್ತು. ಆದರೆ, ಬಹುತೇಕ ಕಾಲೇಜುಗಳು ವರದಿ ಒಪ್ಪಿಸಿಲ್ಲ. ಕೆಲವು ಕಾಲೇಜಿನವರು ವೆಬ್‌ಸೈಟ್‌ನ ಮುಖ ಪುಟವನ್ನು ಮಾತ್ರ ಕನ್ನಡದಲ್ಲಿ ಹೋಸ್ಟ್‌ ಮಾಡಿದ್ದಾರೆ. ಉಳಿದಂತೆ ವೆಬ್‌ಸೈಟ್‌ ಒಳಗಿರುವ ಎಲ್ಲ ಅಂಶವೂ ಇಂಗ್ಲಿಷ್‌ನಲ್ಲೇ ಇರುವುದು ಕಂಡುಬಂದಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

Advertisement

ಡಿ.6ಕ್ಕೆ ಪರಿಶೀಲನೆ : ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜಿನ ವೆಬ್‌ಸೈಟ್‌ ಹಾಗೂ ಕಚೇರಿ ವ್ಯವಹಾರದಲ್ಲಿ ಕನ್ನಡ ಎಷ್ಟರ ಮಟ್ಟಿಗೆ ಅನುಷ್ಠಾನವಾಗಿದೆ ಎಂಬುದರ ಪ್ರಗತಿ ಪರಿಶೀಲನೆ ಡಿ.6ರಂದು ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಹಿಂದಿನ ಆದೇಶ ಅನುಷ್ಠಾನ ಮಾಡದ ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸುವ ಸಾಧ್ಯತೆಯೂ ಇದೆ. ಕನ್ನಡ ವೆಬ್‌ಸೈಟ್‌ ಸಿದ್ಧಪಡಿಸಿ ಹೋಸ್ಟ್‌ ಮಾಡಿರುವ ಬಗ್ಗೆ ವರದಿ ಸಲ್ಲಿಸಲು ಪ್ರಾಧಿಕಾರ ಸೂಚಿಸಿತ್ತು. ಅದು ಕೂಡ ಇನ್ನೂ ಆಗಲಿಲ್ಲ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆ ಮೇರೆಗೆ ತಾಂತ್ರಿಕ ಶಿಕ್ಷಣ ಇಲಾಖಾ ವ್ಯಾಪ್ತಿಯ ಎಲ್ಲ ಎಂಜಿನಿಯರಿಂಗ್‌ ಕಾಲೇಜು ಹಾಗೂ ಪಾಲಿಟೆಕ್ನಿಕ್‌ ಸಂಸ್ಥೆಗಳ ವೆಬ್‌ಸೈಟ್‌ ಕನ್ನಡೀಕರಿಸಲು ನಿರ್ದೇಶನ ನೀಡಿದ್ದೇವೆ. ಬಹುತೇಕ ಕಾಲೇಜುಗಳಿಂದ ಈ ಸಂಬಂಧ ವರದಿಯೂ ಬಂದಿದೆ. ಡಿ.6ಕ್ಕೆ ಪರಿಶೀಲನೆ ನಡೆಯಲಿದೆ.
– ಎಚ್‌.ಯು.ತಳವಾರ, ನಿರ್ದೇಶಕ, ತಾಂತ್ರಿಕ ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next