Advertisement

ಸರ್ಕಾರಿ ಶಾಲೆಯಲ್ಲಿ ಕನ್ನಡದ ಕೋಟ್ಯಧಿಪತಿ

03:57 PM Dec 27, 2019 | Suhan S |

ಕೊಪ್ಪಳ: ಹಿಂದುಳಿದ ತಾಲೂಕಿನಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕತೆ ಉತ್ತೇಜಿಸಲು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಇಲ್ಲೊಂದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ “ಕನ್ನಡದ ಕೋಟ್ಯಾಧಿಪತಿ’ ಮಾದರಿಯ ವಿನೂತನ ಕಾರ್ಯಕ್ರಮ ನಡೆಸಿ ಶಾಲಾ ಮಕ್ಕಳಿಗೆ ಆಸಕ್ತಿ ಮೂಡಿಸುವ ಕೆಲಸ ನಡೆದಿದೆ.

Advertisement

ಹೌದು.. ಶೈಕ್ಷಣಿಕವಾಗಿ ಹಿಂದುಳಿದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್‌ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಇಂತಹದ್ದೊಂದು ಪ್ರಯೋಗ ನಡೆಸಲಾಗಿದೆ. ಮಕ್ಕಳು ಆಸಕ್ತಿಯಿಂದ ಹಾಟ್‌ ಸೀಟ್‌ನಲ್ಲಿ ಕುಳಿತು ಪ್ರಶ್ನೆಗಳಿಗೆ ಕ್ಷಣಾರ್ಧದಲ್ಲಿ ಉತ್ತರ ನೀಡಿ ಬಹುಮಾನ ಪಡೆಯುತ್ತಿದ್ದಾರೆ. ಹಿರೇವಡ್ರಕಲ್‌ ಶಾಲೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು, ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುವ ಅವಶ್ಯಕತೆಯಿದೆ. ಸರ್ಕಾರದ ವಿವಿಧ ಯೋಜನೆ ಜೊತೆ ಶಿಕ್ಷಕರ ವಿನೂತನ ಕಾರ್ಯಕ್ರಮಗಳು ಮಕ್ಕಳನ್ನು ಆಕರ್ಷಣೆ ಮಾಡುತ್ತಿವೆ. ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಂಡ ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮ ಮಾದರಿಯಲ್ಲೇ ಈ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯುತ್ತಿದೆ. ಇದರಲ್ಲಿ ಹಾಟ್‌ ಸೀಟ್‌ಗೆ ಕೂರಲು ರಾಜ್ಯದ ನಾನಾ ಭಾಗಗಳಿಂದ ಸ್ಪರ್ಧೆ ನಡೆಯುತ್ತದೆ. ಕೊನೆಗೆ ಆಯ್ಕೆಯಾಗುವ ಸ್ಪರ್ಧಿ ಪ್ರಶ್ನೆಗಳಿಗೆ ಉತ್ತರ ನೀಡುವುದರೊಂದಿಗೆ ಬಹುಮಾನ ಗೆಲ್ಲುತ್ತಾರೆ. ಈ ಕಾರ್ಯಕ್ರಮ ವೀಕ್ಷಿಸಿದ ಶಿಕ್ಷಕ ವೀರೇಶ ಕುರಿ ಅವರು ಶಾಲೆ ಮಕ್ಕಳೊಟ್ಟಿಗೆ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಶಾಲೆಯಲ್ಲಿ 393 ದಾಖಲಾತಿಯಿದೆ.

11 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಇವರಲ್ಲಿ ಐವರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯ ದಾಖಲಾತಿ ಪ್ರಮಾಣ ಹೆಚ್ಚಳ ಮಾಡಲು, ಮಕ್ಕಳಿಗೆ ಪ್ರತಿ ಸ್ಪರ್ಧಾತ್ಮಕತೆಯ ಮನೋಭಾವ ಮೂಡಿಸಲು ಪ್ರತಿ ಶನಿವಾರ ಮೊದಲ ಅವಧಿ ಮುಗಿದ ಬಳಿಕ ಕೋಟ್ಯಾಧಿಪತಿ ಹೆಸರಿನಡಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಹಾಟ್‌ಸೀಟ್‌ ಬೇಕೆಂದರೆ

ಗೈರಾಗುವಂತಿಲ್ಲ: ಪ್ರಸ್ತುತ 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಂದೆ 6 ಹಾಗೂ 8ನೇ ತರಗತಿ ಮಕ್ಕಳನ್ನು ಪಾಲ್ಗೊಳ್ಳುವಂತೆ ಮಾಡುವ ಯೋಜನೆ ರೂಪಿಸಿದ್ದಾರೆ. ಶಾಲಾ ಹಾಟ್‌ ಸೀಟ್‌ಗೆ ಮಕ್ಕಳು ಆಯ್ಕೆಯಾಗಬೇಕೆಂದರೆ ವಾರದ 6 ದಿನ ಶಾಲೆಗೆ ಸತತವಾಗಿ ಹಾಜರಾಗಿರಬೇಕು. ಹೋಮ್‌ ವರ್ಕ್‌ ಮಾಡಿರಬೇಕು. ಕಾರ್ಯ ಚಟುವಟಿಕೆಯಲ್ಲಿ  ಪಾಲ್ಗೊಂಡು ಆಸಕ್ತಿ ವಹಿಸಬೇಕು. ಅಂತಹ ವಿದ್ಯಾರ್ಥಿಗಳಿಗೆ ಶುಕ್ರವಾರ ಕಿರುಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಹಾಟ್‌ ಸೀಟ್‌ನಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗುತ್ತದೆ.

ವಿದ್ಯಾರ್ಥಿಗೆ ಇಲ್ಲೊಂದು ಲೈಫಲೈನ್‌ ಇದೆ: ಹಾಟ್‌ ಸೀಟ್‌ಗೆ ಆಯ್ಕೆಯಾಗುವ ವಿದ್ಯಾರ್ಥಿಗೆ ಆರು ವಿಷಯದ ಕುರಿತು ವಿವಿಧ ಹಂತದಲ್ಲಿ ಶಿಕ್ಷಕರೇ 10 ಪ್ರಶ್ನೆಗಳನ್ನು ಕೇಳುತ್ತಾರೆ. ವಿದ್ಯಾರ್ಥಿಯು 10 ಪ್ರಶ್ನೆಗಳಿಗೆ ತಕ್ಕಂತೆ ಉತ್ತರ ನೀಡಬೇಕು. ಆತನು ಏಷ್ಟು ಪ್ರಶ್ನೆಗಳಿಗೆ ಸರಿ ಉತ್ತರ ನೀಡುತ್ತಾನೋ ಅದರ ಮೇಲೆ ಮಗುವಿಗೆ ಬಹುಮಾನ ನೀಡಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಒಂದು ಲೈಫ್‌ಲೈನ್‌ ಸಹಿತ ನೀಡಲಾಗಿದೆ. ವಿದ್ಯಾರ್ಥಿಗೆ ಉತ್ತರ ಗೊತ್ತಿಲ್ಲದಿದ್ದರೆ ಸ್ಥಳದಲ್ಲೇ ಸಹ ಸ್ನೇಹಿತರಲ್ಲಿ ಒಬ್ಬರನ್ನು ಕೇಳಿ ಉತ್ತರ ನೀಡಲು ಅವಕಾಶ ಕಲ್ಪಿಸಲಾಗಿದೆ.

Advertisement

ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಇಂತಹ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇಂತಹ ವಿನೂತನ ಕಾರ್ಯಕ್ರಮಗಳು ಇತರೆ ಸರ್ಕಾರಿ ಶಾಲೆಗಳಲ್ಲಿಯೂ ಹಮ್ಮಿಕೊಳ್ಳುವ ಅವಶ್ಯಕತೆಯಿದೆ.

ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು, ಮಕ್ಕಳಲ್ಲಿ ಸ್ಪರ್ಧಾತ್ಮಕತೆ ಮನೋಭಾವ ಬೆಳೆಸಲು ಕನ್ನಡದ ಕೋಟ್ಯಾಧಿ ಪತಿ ಸ್ಪರ್ಧೆ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೆಚ್ಚಿನ ಉತ್ತರ ನೀಡುವ ವಿದ್ಯಾರ್ಥಿಗೆ ಕಿರು ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದ್ದೇವೆ. ವೀರೇಶ ಕುರಿ, ಹಿರೇವಡ್ರಕಲ್‌ ಶಾಲೆ ಶಿಕ್ಷಕ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next