Advertisement

ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ: ಸರಕಾರ ಸಮರ್ಥನೆ

01:10 AM Nov 16, 2021 | Team Udayavani |

ಬೆಂಗಳೂರು: “ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯೊಳಿಸಿರುವುದನ್ನು ಬಲವಾಗಿ ಸಮರ್ಥಿಸಿ ಕೊಂಡಿರುವ ಸರಕಾರ, ಇದು ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವೂ ಆಗಿಲ್ಲ, ಭಾಷೆಯ ಹೇರಿಕೆಯೂ ಅಲ್ಲ ಎಂದು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

Advertisement

ಪದವಿ ತರಗತಿಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್‌ ಸಹಿತ ಹಲವು ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸರಕಾರ ಸೋಮವಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿತು.

ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ, ಸರಕಾರದ ಕ್ರಮ ಹೊರ ರಾಜ್ಯದವರಿಗೆ ಅಥವಾ ಕನ್ನಡ ಬಾರದವರ ಮೇಲೆ ಕನ್ನಡವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಅಲ್ಲ. ಇದು ಭಾಷೆಯನ್ನು ಪ್ರೋತ್ಸಾಹಿಸುವ ಕ್ರಮವಾಗಿದೆ. ಕನ್ನಡೇತರರನ್ನು ರಾಜ್ಯ ಸರಕಾರ ಮುಕ್ತವಾಗಿ ಗೌರವಿಸುತ್ತದೆ. ಇದೊಂದು ರಾಜ್ಯ ಸರ್ಕಾರದ ನೀತಿ ನಿರ್ಣಯ ವಿಚಾರ. ರಾತೋ-ರಾತ್ರಿ ಇದನ್ನು ಜಾರಿಗೆ ತಂದಿದ್ದಲ್ಲ. ಸ್ಥಳೀಯ ಭಾಷೆಗೆ ಆದ್ಯತೆ ಸಿಗಬೇಕು ಎಂದು 1981ರಲ್ಲಿ ವಿ.ಕೃ. ಗೋಕಾಕ್‌ ನೀಡಿದ ವರದಿಯ ಫ‌ಲಪ್ರದವಾಗಿದೆ ಎಂದರು.

‌ದವಿ ತರಗತಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಿರುವ ಸರಕಾರದ ನಿರ್ಣಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿಲ್ಲ. ಕರ್ನಾಟಕದಲ್ಲಿ ಪದವಿ ಕೋರ್ಸ್‌ ಕಲಿಯುವ ವಿದ್ಯಾರ್ಥಿಗಳಿಗೆ ಕನಿಷ್ಠ ಪ್ರಾಥಮಿಕ ವ್ಯಾವಹಾರಿಕ ಹಂತದ ಕನ್ನಡ ಕಲಿಸಲಾಗುತ್ತದೆ. ಮುಖ್ಯವಾಗಿ, ಕನ್ನಡ ಕಲಿಕೆ ಪ್ರಶ್ನಿಸಿ ಯಾವುದೇ ವಿದ್ಯಾರ್ಥಿ ಅಥವಾ ಶಿಕ್ಷಣ ಸಂಸ್ಥೆ ಅರ್ಜಿ ಸಲ್ಲಿಸಿಲ್ಲ. ಯಾವುದೇ ವಿದ್ಯಾರ್ಥಿಗೆ ಸಮಸ್ಯೆಯಾಗುತ್ತಿದ್ದರೆ ಅವರು ಬಂದು ಪ್ರಶ್ನಿಸಬೇಕಿತ್ತು. ಆದರೆ, ಇಲ್ಲಿ ಭಾಷೆ ಕಲಿಕೆಯನ್ನು ಪ್ರಶ್ನಿಸಿರುವುದು ವಿದ್ಯಾರ್ಥಿಗಳಲ್ಲ. ಮೂರನೇ ವ್ಯಕ್ತಿಗಳು. ಅವರ ವೈಯಕ್ತಿಕ ಹಿತಾಸಕ್ತಿಗೆ ಈ ಅರ್ಜಿ ಸಲ್ಲಿಸಿದ್ದಾರೆ. ಇತರೆ ಭಾಷಾ ಶಿಕ್ಷಕರ ಹುದ್ದೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದರು.

ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ: ವಿಚಾರಣೆ ಮುಂದಕ್ಕೆ

Advertisement

ಸಂವಿಧಾನ ವಿರೋಧಿ ಕ್ರಮ
ಅರ್ಜಿದಾರರ ಪರ ವಾದ ಮಂಡಿಸಿದ ಎಸ್‌.ಎಸ್‌ ನಾಗಾನಂದ, ಸರಕಾರದ ಈ ಕ್ರಮ ಮೂಲಭೂತ ಹಕ್ಕುಗಳನ್ನು ಕಸಿಯುವಂತಹ ಮತ್ತು ಸಂವಿಧಾನ ವಿರೋಧಿಯಾಗಿದೆ. ಆದ್ದರಿಂದ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಕೇಂದ್ರದ ನಿಲುವು ಕೇಳಿದ ಹೈಕೋರ್ಟ್‌
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಭಾಷೆಗೆ ಪ್ರೋತ್ಸಾಹ ನೀಡುವ ನೆಪದಲ್ಲಿ ಕಡ್ಡಾಯ ಗೊಳಿಸುವುದು ಎಷ್ಟು ಸರಿ. ಕಡ್ಡಾಯ ಗೊಳಿಸುವುದು ಹೊರತುಪಡಿಸಿ ಕನ್ನಡ ಭಾಷೆಯನ್ನು ಪ್ರೋತ್ಸಾಹಿಸುವ ಬೇರೆ ವಿಧಾನಗಳಲ್ಲಿವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಅದೇ ರೀತಿ ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿರುವ ಕರ್ನಾಟಕದ ಸರಕಾರದ ಆದೇಶದ ಬಗ್ಗೆ ನಿಲುವು ಸ್ಪಷ್ಟಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next