Advertisement

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

01:20 PM May 03, 2024 | Team Udayavani |

“ನಮ್‌ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗುತ್ತಿದೆ’ – ಸಿನಿಮಾ ಮಂದಿಗೆ ತುಂಬಾ ಖುಷಿಕೊಟ್ಟ ವಾಕ್ಯವಿದು. ಅದೇ ಕಾರಣದಿಂದ ಒಂದೆರಡು ವರ್ಷಗಳ ಹಿಂದೆ ಹೊಸದಾಗಿ ಚಿತ್ರರಂಗಕ್ಕೆ ಬಂದ ತಂಡಗಳು ಕೂಡಾ ಇದೇ ವಾಕ್ಯವನ್ನು ಮಾಧ್ಯಮ ಮುಂದೆ ಹೇಳಿ “ಖುಷಿ’ಪಡುತ್ತಿದ್ದವು. ಅದಕ್ಕೆ ಕಾರಣ ಕನ್ನಡದಲ್ಲಿ ತಯಾರಾಗಿ, ಇಲ್ಲಿ ಹಿಟ್‌ ಆಗಿ ಮುಂದೆ ಬೇರೆ ಬೇರೆ ಭಾಷೆಗೆ ಹೋಗಿ ಯಶಸ್ಸು ಕಂಡ ಒಂದೆರಡು ಸಿನಿಮಾಗಳು. ಇದು ಸಿನಿಮಾ ಮಂದಿಯ ಜೋಶ್‌ ಹೆಚ್ಚಿಸಿದ್ದು ಸುಳ್ಳಲ್ಲ. ಅದೇ ಕಾರಣದಿಂದ ಸ್ಟಾರ್‌ಗಳ ಜೊತೆಗೆ ಒಂದಷ್ಟು ಹೊಸಬರು ಕೂಡಾ ಪ್ಯಾನ್‌ ಇಂಡಿಯಾ ಕ್ರೇಜ್‌ಗೆ ಬಿದ್ದಿದ್ದು, ಬಳಿಕ “ಒದ್ದಾಡಿ’ ಸುಸ್ತಾಗಿದ್ದೂ ನಡೆದು ಹೋಯಿತು. ಅದೇ ಕಾರಣದಿಂದ ಈಗ ಪ್ಯಾನ್‌ ಇಂಡಿಯಾ ಕ್ರೇಜ್‌ ಸ್ಯಾಂಡಲ್‌ವುಡ್‌ನ‌ಲ್ಲಿ ಸ್ವಲ್ಪ ಮಟ್ಟಿಗೆ ತಗ್ಗಿದೆ.

Advertisement

ಕ್ರೇಜ್‌ ತಗ್ಗಲು ಕಾರಣವೇನು ಎಂದು ನೀವು ಕೇಳಬಹುದು. ಒಂದು ಸಿನಿಮಾವನ್ನು ತಮ್ಮ ಸ್ವಂತಃ ರಾಜ್ಯದಲ್ಲಿ ವಿತರಕರನ್ನು ಹಿಡಿದು, ಥಿಯೇಟರ್‌ ಹೊಂದಿಸಿ ಸಿನಿಮಾ ರಿಲೀಸ್‌ ಮಾಡು ವುದು ಇವತ್ತು ಕಷ್ಟದ ಕೆಲಸ. ಹೀಗಿರುವಾಗ ಐದೈದು ರಾಜ್ಯಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಎಷ್ಟು ಶ್ರಮ, ಹಣ, ಸಂಪರ್ಕ ಬೇಕು ನೀವೇ ಲೆಕ್ಕ ಹಾಕಿ. ಇದೇ ಕಾರಣದಿಂದ ಹೊಸಬರು ಹಾಗೂ ಮೀಡಿಯಂ ಬಜೆಟ್‌ನ ಸಿನಿಮಾಗಳು ಈ ಕನಸಿನಿಂದ ಈಗ ದೂರವೇ ಉಳಿಯುತ್ತಿವೆ.

ಗುಣಮಟ್ಟ ಮುಖ್ಯ

ಇಂಡಿಯಾ ಸಿನಿಮಾ ಮಾಡುತ್ತೇವೆ ಎಂದು ಹೇಳಿಕೊಳ್ಳುವುದು ಸುಲಭ. ಆದರೆ, ಅದರ ಹಿಂದಿನ ಶ್ರಮ, ಸಿನಿಮಾವನ್ನು ಕಟ್ಟಿಕೊಡಲು ಬೇಕಾದ ಪೂರ್ವತಯಾರಿ ಇದೆಯೆಲ್ಲಾ ಅದು ಸುಲಭವದ ಮಾತಲ್ಲ. ಒಂದು ಪ್ಯಾನ್‌ ಇಂಡಿಯಾ ಸಿನಿಮಾ ಕಟ್ಟಿಕೊಡುವಾಗ ಸಿನಿಮಾದ ಗುಣಮಟ್ಟ ಹಾಗೂ ನೀವು ಹೇಳಹೊರಟಿರುವ ಕಥೆ ತುಂಬಾ ದೊಡ್ಡ ಪಾತ್ರವಹಿಸುತ್ತದೆ. ಏಕೆಂದರೆ ನೀವು ಕೇವಲ ಯಾವುದೋ

ಒಂದು ಪ್ರಾದೇಶಿಕ ವರ್ಗದ ಜನರನ್ನು ಗಮನದಲ್ಲಿಟ್ಟು ಸಿನಿಮಾ ಮಾಡುತ್ತಿಲ್ಲ, ಬದಲಾಗಿ ಇಡೀ ದೇಶದ ಜನರು ಆ ಸಿನಿಮಾದ ಮೇಲೆ ನಿರೀಕ್ಷೆ ಇಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ಪ್ಯಾನ್‌ ಇಂಡಿಯಾ ಕ್ರೇಜ್‌ಗೆ ಬಿದ್ದು ಸಿನಿಮಾ ಮಾಡುವವರು ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ.

Advertisement

ವರ್ಷಗಳ ಹಿಂದೆ ಕೆಲವು ಸಿನಿಮಾಗಳು ಪ್ಯಾನ್‌ ಇಂಡಿಯಾ ಎಂದು ಬಿಡುಗಡೆಯಾದವು. ಆದರೆ, ಆ ನಂತರ ಆ ಸಿನಿಮಾಗಳ ಫ‌ಲಿತಾಂಶ ಏನಾಯಿತು, ಅಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ತೆರೆಕಂಡಿತು ಎಂಬ ಬಗ್ಗೆ ಆ ಸಿನಿಮಾಗಳ ನಿರ್ಮಾಪಕರನ್ನು ಕೇಳಿದರೆ ಅವರಿಂದ ಬಂದಿದ್ದು ನಿರಾಶದಾಯಕ ಉತ್ತರ.

ಭ್ರಮೆ ಬೇಡ…

ಎಲ್ಲವನ್ನು ದೊಡ್ಡದಾಗಿ, ಅದ್ಧೂರಿಯಾಗಿ, ಪರಭಾಷಾ ಕಲಾವಿದರನ್ನು ಹಾಕಿ ಸಿನಿಮಾ ಮಾಡಿದರೆ ಅದು ಪ್ಯಾನ್‌ ಇಂಡಿಯಾ ಆಗುತ್ತದೆ ಎಂಬ ಭ್ರಮೆಯಿಂದ ಮೊದಲು ನಮ್ಮ ಸಿನಿಮಾ ಮಂದಿ ಹೊರಬರಬೇಕಿದೆ. ಪ್ಯಾನ್‌ ಇಂಡಿಯಾ ಸಿನಿಮಾದ ಗೆಲುವು ನಿಂತಿರೋದು ಸಿನಿಮಾದ ಮೇಕಿಂಗ್‌ಗಿಂತ ಹೆಚ್ಚಾಗಿ ಕಂಟೆಂಟ್‌ ಮೇಲೆ. ಅದಕ್ಕೆ ಸ್ಪಷ್ಟ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿರೋದು “ಕಾಂತಾರ’. ಹಾಗೆ ನೋಡಿದರೆ “ಕಾಂತಾರ’ ಕೇವಲ ಕನ್ನಡಕ್ಕಾಗಿ ಮಾಡಿದ ಚಿತ್ರ. ಆದರೆ, ಬಿಡುಗಡೆಯಾದ ನಂತರ ಆ ಚಿತ್ರ ವಿಶ್ವಮಟ್ಟದಲ್ಲಿ ಸದ್ದು ಮಾಡಿತು. ಹಾಗಂತ ಬೇರೆ ತಂಡಗಳು ಈಗ ಮತ್ತೆ ಅದೇ ತರಹದ ಕಂಟೆಂಟ್‌ ಮಾಡುತ್ತೇನೆ ಎಂದು ಹೊರಟರೆ ಕೈ ಸುಟ್ಟುಕೊಳ್ಳಬೇಕಾದಿತು.

ಸೌತ್‌ ಇಂಡಿಯಾ ರಿಲೀಸ್‌

ಪ್ಯಾನ್‌ ಇಂಡಿಯಾ ರಿಲೀಸ್‌ ಎಂದಾಗ ಅಲ್ಲಿ ಬಾಲಿವುಡ್‌ ಕೂಡಾ ಸೇರಿಕೊಳ್ಳುತ್ತದೆ. ಬಾಲಿವುಡ್‌ಗೆ ಹೋಗಿ, ಅಲ್ಲಿ ನಿಮ್ಮ ಸಿನಿಮಾವನ್ನು ಪ್ರಮೋಶನ್‌ ಮಾಡಿ ರಿಲೀಸ್‌ ಮಾಡುವುದು ಸುಲಭದ ಮಾತಲ್ಲ ಮತ್ತು ಅದಕ್ಕೊಂದು ಸೂಕ್ತ ವೇದಿಕೆ ಬೇಕಾಗುತ್ತದೆ. ಇದೇ ಕಾರಣದಿಂದ ಪ್ಯಾನ್‌ ಇಂಡಿಯಾ ಬದಲು ಸೌತ್‌ ಇಂಡಿಯಾ ರಿಲೀಸ್‌ನತ್ತ ಗಮನಹರಿಸುತ್ತಿದ್ದಾರೆ.

“ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ರಕ್ಷಿತ್‌ ಹೇಳಿದಂತೆ, “ಪ್ಯಾನ್‌ ಇಂಡಿಯಾ ರಿಲೀಸ್‌ ಸುಲಭವಲ್ಲ. ಬಾಲಿವುಡ್‌ ಎಂಬುದು ಸಾಗರ. ಅಲ್ಲಿ ಸಿನಿಮಾ ಪ್ರಮೋಶನ್‌ ಮಾಡಲು ಬಜೆಟ್‌ ಕೂಡಾ ದೊಡ್ಡದಾಗಿರಬೇಕು’ ಎಂದಿದ್ದರು. ಅದು ಸತ್ಯ ಕೂಡಾ. ಆದರೆ, ಒಮ್ಮೆ ನೀವು ಪ್ಯಾನ್‌ ಇಂಡಿಯಾದಲ್ಲಿ ಗೆದ್ದರೆ ಮುಂದಿನ ನಿಮ್ಮ ಹಾದಿ ಸುಗಮವಾಗಿರುತ್ತದೆ.

ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next