Advertisement

ಕನ್ನಡ ಸಿನಿಮಾ ಪರಂಪರೆ ದಾಖಲಾಗಲಿ

10:35 AM Nov 07, 2017 | Team Udayavani |

ಬೆಂಗಳೂರು: ಇಂದಿನ ದಿನಮಾನದಲ್ಲಿ ಸಿನಿಮಾಗಳ ದಾಖಲಾತಿ ಪ್ರಕ್ರಿಯೆ ಅತಿ ಮುಖ್ಯವಾಗಿದ್ದು, ಈ ಕಾರ್ಯ ತುರ್ತಾಗಿ ನಡೆಯಬೇಕಿದೆ. ಇದು ಸಿನಿಮಾ ಜಗತ್ತಿನ ಪ್ರತಿಯೊಬ್ಬರ ಕರ್ತವ್ಯ ಎಂದು ಫಿಲ್ಮ್ ಹೆರಿಟೇಜ್‌ ಫೌಂಡೇಷನ್‌ನ ಸಂಸ್ಥಾಪಕ ನಿರ್ದೇಶಕ ಶಿವೇಂದ್ರಸಿಂಗ್‌ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೋಮವಾರ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಯೋಜಿಸಿದ್ದ “ಕನ್ನಡ ಚಲನಚಿತ್ರ ಪರಂಪರೆಯ ಸಂರಕ್ಷಣೆ ಮತ್ತು ಸಂಗ್ರಹ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಚಲನಚಿತ್ರಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಯ ದಾಖಲೆಗಳು. ಈ ನಿಟ್ಟಿನಲ್ಲಿ ಸಿನಿಮಾಗಳ ದಾಖಲಾತಿ ಅಗತ್ಯವಿದೆ. ಒಂದು ಸಿನಿಮಾದ ಮೂಲ ಪ್ರತಿ ಕಳೆದು ಹೋದರೆ ಅಥವಾ ಅದು ನಾಶವಾದರೆ ತಾಯಿಯನ್ನೇ ಕಳೆದುಕೊಂಡಷ್ಟೇ ದುಃಖವಾಗುತ್ತದೆ. ಹಾಗಾಗಿ ಹಳೆಯ ದಾಖಲೆಗಳು ಸಿನಿಮಾ ಪರಂಪರೆಯ ಆಸ್ತಿ. ಅವುಗಳನ್ನು ಉಳಿಸಿಕೊಳ್ಳುವ ಕೆಲಸವಾಗಬೇಕಿದೆ ಎಂದರು.

ಒಂದು ಸಿನಿಮಾದ ಮೂಲ ಪ್ರತಿಯನ್ನು ಕಾಪಾಡಿಕೊಳ್ಳಬೇಕಾಗಿರುವುದು ಕೇವಲ ಆ ಚಿತ್ರತಂಡದ ಕೆಲಸವಾಗಿರದೆ, ಚಿತ್ರರಂಗದ ಜವಾಬ್ದಾರಿಯೂ ಹೌದು. ನಮ್ಮ ಚಲನಚಿತ್ರ ಪರಂಪರೆ ಕಾಣೆಯಾಗಲು ಬಿಡಬಾರದು. ಈಗಿನ ಕಾಲಮಾನಕ್ಕೆ ಮುಂದಿನ ಪೀಳಿಗೆಗಾಗಿ ಆ ದಾಖಲೆಗಳನ್ನು ಸಂಗ್ರಹಿಸುವುದು ಸೂಕ್ತ. ಭಾರತದಲ್ಲಿ 1700ಕ್ಕೂ ಅಧಿಕ ಮೂಕಿ ಚಿತ್ರಗಳು ತಯಾರಾಗಿವೆ ಎಂಬುದಕ್ಕೆ ದಾಖಲೆ ಇದೆ.

ಆದರೆ ಅದರಲ್ಲಿ ಉಳಿದಿದ್ದು ಕೇವಲ 6 ಪ್ರಿಂಟ್‌ಗಳು ಮಾತ್ರ. ಶೇ.99 ಚಿತ್ರಗಳು ಕಳೆದಿವೆ. ಮದ್ರಾಸ್‌ನಲ್ಲಿ 124 ಮೂಕಿ ಚಿತ್ರಗಳು ತಯಾರಾಗಿವೆ. 38 ಸಾಕ್ಷ್ಯಚಿತ್ರಗಳನ್ನು ಮಾಡಲಾಗಿದ್ದು, ಅದರಲ್ಲಿ ಉಳಿದಿರುವುದು ಕೇವಲ ಒಂದೇ ಒಂದು. ಅದು “ಮಾರ್ತಾಂಡ ವರ್ಮಾ’ ಎಂದು ಮಾಹಿತಿ ನೀಡಿದರು.

Advertisement

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರ ಸಿಂಗ್‌ಬಾಬು ಮಾತನಾಡಿ, ನಮ್ಮ ಬ್ಯಾನರ್‌ನಲ್ಲಿ ಈ ಹಿಂದೆ ನನ್ನ ತಂದೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ, ನಿರ್ದೇಶನ ಮಾಡಿದ್ದಾರೆ. ಈಗ ಒಂದು ಸಿನಿಮಾ ಕೂಡ ಉಳಿದಿಲ್ಲ. ಆದ್ದರಿಂದ ಮುಂದಿನ ಪೀಳಿಗೆ ಅಂತಲಾದರೂ ಚಿತ್ರಗಳನ್ನು ಸಂಗ್ರಹಿಸಿಡುವ ಕೆಲಸವಾಗಬೇಕಿದೆ.

ಚಿತ್ರಗಳು ಕೇವಲ ಮನರಂಜನೆಗಷ್ಟೇ ಅಲ್ಲದೆ, ಅವುಗಳ ಅಧ್ಯಯನಕ್ಕೂ ಮುಂದಾಗುವ ಅಗತ್ಯವಿದೆ ಎಂದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಚಿತ್ರಗಳನ್ನು ಸಂರಕ್ಷಿಸುವುದು ಚಿತ್ರರಂಗದ ಕೆಲಸ. ಕಳೆದುಹೋದ ಚಿತ್ರಗಳು ಮತ್ತೆ ಸಿಗುವುದಿಲ್ಲ. ಸದ್ಯಕ್ಕೆ ನಮ್ಮ ಕೈಗೆ ಸಿಗುವ ಚಿತ್ರಗಳನ್ನಾದರೂ ಈಗ ಕಾಪಾಡಿಕೊಳ್ಳುವ ಅಗತ್ಯವಿದೆ.

ಈ ಕಾರಣಕ್ಕೆ, ಎಲ್ಲಾ ಚಿತ್ರಗಳನ್ನೂ ಸಂಗ್ರಹಿಸಿಡಲು ಸಾಧ್ಯವಿಲ್ಲ. ಯಾಕೆಂದರೆ, ತಿಂಗಳಿಗೆ ಏನಿಲ್ಲವೆಂದರೂ, 30 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತವೆ. ಆದ್ದರಿಂದ ಒಂದು ಸಮಿತಿ ರಚಿಸಿ, ಕೆಲ ಮಾನದಂಡ ಇಟ್ಟುಕೊಂಡು, ಅಂತಹ ಅರ್ಹತೆ ಇರುವ ಚಿತ್ರಗಳನ್ನು ಸಂಗ್ರಹಿಸಬೇಕಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, “ಒಂದು ಚಿತ್ರ ಸೋತಿತು ಎಂಬ ಕಾರಣಕ್ಕೆ ಆ ನಿರ್ಮಾಪಕರು ತಮ್ಮ ಚಿತ್ರದ ಬಗೆಗಿನ ಕಾಳಜಿಯನ್ನು ಕಳೆದುಕೊಳ್ಳುತ್ತಾರೆ. ಈಗಂತೂ ಎಲ್ಲವೂ ವ್ಯಾವಹಾರಿಕವಾಗಿದೆ. ನಾನು ಸಿನಿಮಾ ಉಳಿಸುವ ಉದ್ದೇಶದಿಂದ ನನ್ನ ನಿರ್ದೇಶನದ ಎಲ್ಲ ಚಿತ್ರಗಳನ್ನು ಶಿವೇಂದ್ರಸಿಂಗ್‌ ಅವರ ಫಿಲ್ಮ್ ಹೆರಿಟೇಜ್‌ ಫೌಂಡೇಷನ್‌ನಲ್ಲಿ ಇಡುವ ನಿರ್ಧಾರ ಮಾಡಿದ್ದೇನೆ.

ಅದಕ್ಕೆ ಸಂಬಂಧಿಸಿದ ನಿರ್ಮಾಪಕರ ಜತೆಯಲ್ಲೂ ಚರ್ಚೆ ಮಾಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಚಲನಚಿತ್ರ ಇತಿಹಾಸಕಾರ ತೌಡುರು ಭಾಸ್ಕರನ್‌, ವಿದ್ಯಾಶಂಕರ್‌, ಆರ್‌.ಕೆ. ಶಿವರಾಮ್, ಗಂಗಾಧರ್‌ ಮೊದಲಿಯಾರ್‌ ಸೇರಿದಂತೆ ಚಿತ್ರೋದ್ಯಮದ ಇತರೆ ಗಣ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next