Advertisement

ಕನ್ನಡ ಚಿತ್ರರಂಗ ಅಧೋಗತಿಗೆ ಇಳಿದಿದೆ; ತರಬೇತಿ ಶಿಬಿರದಲ್ಲಿ ಕಾಸರವಳ್ಳಿ

02:23 PM Jun 08, 2022 | Team Udayavani |

ಬೆಂಗಳೂರು: ಮಾನವೀಯ ಸಂಬಂಧ, ಪ್ರಚಲಿತ ಸಮಸ್ಯೆಗಳು ಹಾಗೂ ಸಮಾಜ ತೆಗೆದುಕೊಳ್ಳಬೇಕಿರುವ ತಿರುವುಗಳ ಪ್ರಯೋಗ ಮಾಡದೆ ಕೇವಲ ಕ್ರೌರ್ಯ ಮತ್ತು ಹಿಂಸೆ ಯನ್ನೇ ವಿಜೃಂಭಿಸುತ್ತಿರುವ ಕನ್ನಡ ಚಿತ್ರರಂಗ 40 ವರ್ಷಗಳಲ್ಲಿಯೇ ಅತ್ಯಂತ ಅಧೋಗತಿಗೆ ಇಳಿದಿದೆ ಎಂದು ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಆತಂಕ ವ್ಯಕ್ತಪಡಿಸಿದರು.

Advertisement

ಹಂಪಿ ಕನ್ನಡ ವಿಶ್ವವಿದ್ಯಾಲಯ, ಬೆಂ.ನಗರ ವಿವಿ, ಡಾ. ರಾಜಕುಮಾರ್‌ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಗೊಟ್ಟಿಗೆರೆಯಲ್ಲಿರುವ ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ (ರಾಗಿ ಕಣ)ದಲ್ಲಿ ಹಮ್ಮಿಕೊಂಡಿದ್ದ “ಸಿನಿಮಾ ಅಧ್ಯಯನ ತರಬೇತಿ ಶಿಬಿರ’ ಉದ್ಘಾಟಿಸಿ ಮಾತನಾಡಿದ ಅವರು, 40 ವರ್ಷಗಳ ಹಿಂದೆ ಸಂಸ್ಕಾರ, ಚೋಮನ ದುಡಿ, ಕಾಡು, ಘಟಶ್ರಾದ್ಧ, ಗ್ರಹಣದಂತಹ ಸಿನಿಮಾಗಳು ಬಂದವು. ಇಂತಹ ಪ್ರಯೋಗವನ್ನು ಇಂದಿನ ಕನ್ನಡ ಸಿನಿಮಾ ಮಾಡುತ್ತಿಲ್ಲ ಎಂದು ಇತ್ತೀಚೆಗೆ ಬಂಗಾಳಿ ಸಿನಿಮಾ ವಿಶ್ಲೇಷಕರೊಬ್ಬರು ಹೇಳುತ್ತಿದ್ದರು.

ಇಂದು ಕನ್ನಡ ಚಿತ್ರರಂಗ ದೇಶದಲ್ಲಿ ಹಾಗೂ ಭಾರತೀಯ ಚಿತ್ರರಂಗ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದೆ. ಸಾವಿರಾರು ಕೋಟಿ ರೂ. ಹಣ ಸಂಪಾದನೆ ಮಾಡಿತು ಎಂಬ ಕಾರಣಕ್ಕೆ ಹೆಸರು ಮಾಡಿದೆ. ಕಲಾ ಮಾಧ್ಯಮಕ್ಕಿಂತ ವ್ಯವಹಾರ ಮಾಧ್ಯಮವೇ ಹೆಚ್ಚಾಗಿದೆ. ಸಿನಿಮಾದ ನಿಜವಾದ ರೂಪುರೇಷೆ, ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥ ಮಾಡಿಕೊಳ್ಳುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಬೆಂ.ಉತ್ತರ ವಿವಿ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಮಾತನಾಡಿ, ಯುವಕರು ಪ್ರತಿ ಕ್ಷೇತ್ರದಲ್ಲಿಯೂ “ಟಚ್‌ ಆ್ಯಂಡ್‌ ಗೋ’ ಮನಸ್ಥಿತಿ ಹೊಂದಿದ್ದಾರೆ. ಯಾವುದರಲ್ಲಿಯೂ ಆಳ ಅಧ್ಯಯನ ಮಾಡಲು ಮುಂದಾಗುತ್ತಿಲ್ಲ. ಆದ್ದರಿಂದ ಶಿಬಿರಾರ್ಥಿಗಳು ಇಲ್ಲಿಗೆ ಬಂದಿರುವ ಉದ್ದೇಶವನ್ನು ಗಂಭೀರವಾಗಿ ಪರಿಗಣಿಸಿ ಸಂಪೂರ್ಣವಾಗಿ ತೊಡಗಿಸಿಕೊಳ್ಳು ವಂತೆ ಸಲಹೆ ನೀಡಿದರು.

ಬೆಂ.ನಗರ ವಿವಿ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಮಾತನಾಡಿ, ಸಿನಿಮಾಗಳಲ್ಲಿ ಅತ್ಮಸತ್ವ, ಮೌಲ್ಯಗಳು ಮತ್ತು ಸಂದೇಶಗಳು ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ಸಿನಿಮಾಗಳಲ್ಲಿ ಅಂತಹ ಮೌಲ್ಯಯುತ ಸಿನಿಮಾಗಳು ಬರುತ್ತಿಲ್ಲ. ಆದ್ದರಿಂದ ಸಿನಿಮಾ ತರಬೇತಿ ಪಡೆಯುತ್ತಿರುವವರು ಈ ವಿಷಯಗಳತ್ತ ಗಂಭೀರ ಚಿಂತನೆ ಮಾಡುವಂತೆ ತಿಳಿಸಿದರು.

Advertisement

ಹಂಪಿ ಕನ್ನಡ ವಿವಿ ಕುಲಪತಿ ಡಾ. ಸ.ಚಿ.ರಮೇಶ್‌, ಡಾ. ರಾಜಕುಮಾರ್‌ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಕೆ.ಸಿ. ಶಿವಾರೆಡ್ಡಿ, ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಎಂ.ಸಿ. ನರೇಂದ್ರ, ಕಮ್ಮಟದ ನಿರ್ದೇಶಕ ಗೋಪಿ ಪೀಣ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next