Advertisement

ಗ್ರಾಮೀಣ ಗ್ರಂಥಾಲಯ ಅಭಿವೃದ್ಧಿಯಿಂದ ಕನ್ನಡ ಉಳಿಸಲು ಸಾಧ್ಯ

09:47 PM Dec 30, 2019 | Lakshmi GovindaRaj |

ಚನ್ನರಾಯಪಟ್ಟಣ/ಅಣತಿ: ಕನ್ನಡ ಸಾಹಿತ್ಯ ಶ್ರೀಮಂತವಾಗಲು ಹಾಗೂ ಭಾಷೆ ಉಳಿಯಬೇಕೆಂದರೆ ಗ್ರಾಮೀಣ ಭಾಗದ ಗ್ರಂಥಾಲಯಗಳ ಅಭಿವೃದ್ಧಿಯಾಗಬೇಕು ಎಂದು ಬಾಗೂರು ಹೋಬಳಿ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಯುವ ಸಾಹಿತಿ ರಾಜೇಶ್‌ ಬಿ.ಹೊನ್ನೇನಹಳ್ಳಿ ಹೇಳಿದರು.

Advertisement

ತಾಲೂಕಿನ ಬಾಗೂರು ಹೋಬಳಿ ಅಣತಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಕುವೆಂಪು ಜನ್ಮದಿನಾಚರಣೆ ಹಾಗೂ ಹೋಬಳಿಯ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷ ಭಾಷಣ ಮಾಡಿದ ಅವರು, ಗ್ರಾಮೀಣ ಭಾಗದ ಗ್ರಂಥಾಯಲಗಳು ಶಿಥಿಲಾವಸ್ಥೆಯಲ್ಲಿವೆ. ಅಗತ್ಯ ಪುಸ್ತಕಗಳ ಕೊರತೆ ಇದೆ. ಗ್ರಾಮೀಣ ಗ್ರಂಥಾಲಯಗಳಿಗೆ ಕಟ್ಟಡ, ಪುಸ್ತಕ ಹಾಗೂ ಮೂಲ ಸೌಕರ್ಯವನ್ನು ದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಬಾಗೂರು-ನವಿಲೆ ಸುರಂಗ ಪ್ರೇಕ್ಷಣೀಯ ಸ್ಥಳವಾಗಲಿ: ಬಾಗೂರು-ನವಿಲೆ ಸುರಂಗ ಮಾರ್ಗ ಏಷ್ಯಾದ ಎರಡನೇ ಅತಿದೊಡ್ಡ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡುವಲ್ಲಿ ಸರ್ಕಾರ ವಿಫ‌ಲವಾಗಿವೆ. ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾಡುವುದರಿಂದ ಬಾಗೂರು ಹೊರ ರಾಜ್ಯಕ್ಕೆ ಪರಿಚಯವಾಗುವುದಲ್ಲದೇ ಸ್ಥಳೀಯರಿಗೆ ಉದ್ಯೋಗ ನೀಡಿದಂತಾಗಲಿದೆ ಎಂದು ಹೇಳಿದರು.

ಶಾಲಾ ಕಟ್ಟಡಗಳ ದುರಸ್ತಿ ಮಾಡಿ: ಪ್ರೌಢಶಾಲೆ ಹಾಗೂ ಪ್ರಾಥಮಿಕ ಸರ್ಕಾರಿ ಶಾಲೆಗಳ ಕಟ್ಟಡ ಶಿಥಿವಾಗಿದ್ದು, ಅವುಗಳನ್ನು ಕೂಡಲೇ ದುರಸ್ತಿ ಮಾಡಬೇಕಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು. ಗ್ರಾಮದಲ್ಲಿ ಶ್ರೀಮಂತರಾಗಿರುವವರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುವುದರೊಂದಿಗೆ ಪ್ರತಿ ಶಾಲೆಗೆ ಕನಿಷ್ಠ 20 ಸಾವಿರ ರೂ. ಇಡುಗಂಟನ್ನಿಟ್ಟು ಸರ್ಕಾರಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ತಾರಿಣಿ, ಕುವೆಂಪು ಪರಿಸರವನ್ನು ಪ್ರೀತಿಸುತ್ತಿದ್ದರು. ಕುಪ್ಪಳಿಯಲ್ಲಿ ಇರುವ ಒಂದು ಮರವನ್ನು ಕಡಿಯದಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು ಎಂದರು. ಜಾತ್ಯತೀತ ಸಮಾಜಕ್ಕೆ ಶಿಕ್ಷಣ ಅಗತ್ಯವಾಗಿದೆ. ಆದರೆ ವಿದ್ಯಾವಂತರೇ ಜಾತಿ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದಾರೆಂದು ವಿಷಾದಿಸಿದರು.

Advertisement

ಸಾಹಿತಿ ಅಣತಿ ಸತ್ಯನಾರಾಯಣ ಅಣತಿ ಮಾತನಾಡಿ, ನಾವು ನಮ್ಮ ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ವಿಶ್ವಮಾನವರನ್ನಾಗಿ ಮಾಡಬೇಕು ಎಂದು ಹೇಳಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಚಾಲನೆ ನೀಡಿದರು. ಗ್ರಾಮ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು.

ಜಿಪಂ ಸದಸ್ಯೆ ಶ್ವೇತಾ, ತಾಪಂ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷ ಗಿರೀಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಎ.ಇ.ಚಂದ್ರಶೇಖರ್‌, ಕಸಾಪ ಜಿಲ್ಲಾದ್ಯಕ್ಷ ನಾ.ಮಂಜೇಗೌಡ, ತಾಲೂಕು ಘಟಕ ಅಧ್ಯಕ್ಷ ಪ್ರಕಾಶ ಜೈನ್‌, ಹೋಬಳಿ ಅಧ್ಯಕ್ಷ ದೇವರಾಜು ಮೊದಲಾದವರು ಉಪಸ್ಥಿತರಿದ್ದರು.

ಶಾಸನಗಳನ್ನು ಸಂರಕ್ಷಿಸಿ: ಬಾಗೂರು ಹೋಬಳಿಯಲ್ಲಿ 17 ಶಾಸನಗಳಿವೆ. ಅವುಗಳನ್ನು ಸಂರಕ್ಷಣೆ ಮಾಡಬೇಕಿದೆ. ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕಾಲಕ ವೇಣುಗೋಪಾಲಸ್ವಾಮಿ, ನವಿಲೆ ಲಕ್ಷ್ಮೀಕಾಂತ, ಪಾಳುಮಲ್ಲೇಶ್ವರ, ಅಮೃತಲಿಂಗೇಶ್ವರ, ಲಕ್ಷ್ಮೀ ನಾರಾಯಣ ದೇವಾಲಯಗಳು ಪಾಳು ಬಿದ್ದಿವೆ. ಈ ದೇಗುಲಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಸಮ್ಮೇಳನಾಧ್ಯಕ್ಷ ರಾಜೇಶ್‌ ಹೇಳಿದರು.

ಕಸಾಪಕ್ಕೆ ಸ್ವಂತ ಕಟ್ಟಡ ನಿರ್ಮಿಸಿ: ವಿಶ್ವ ವಿಖ್ಯಾತ ಶ್ರವಣಬೆಳಗೊಳ ಕ್ಷೇತ್ರವನ್ನು ಹೊಂದಿರುವ ಹಾಗೂ ಸರಸ್ವತಿ ಸಮ್ಮಾನ್‌ ಪುರಸ್ಕೃತ ಎಸ್‌.ಎಲ್‌.ಭೈರಪ್ಪ ಅವರ ನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದಿಂಗೂ ಸ್ವಂತ ಕಟ್ಟಡವಿಲ್ಲ. ತಾಲೂಕು ಆಡಳಿತ ಸಾಹಿತ್ಯ ಭವನ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ತಾಲೂಕಿನ ಜಾನಪದ ಕಲೆ, ಸಂಸ್ಕೃತಿ ಉಳಿಸಬೇಕು ಎಂದು ಸಮ್ಮೇಳನಾಧ್ಯಕ್ಷ ರಾಜೇಶ್‌ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next