ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಮರೆಯಾದ ಹಿಂದಿ ಹೇರಿಕೆ ಸದ್ದಿಲ್ಲದೆ ಬಿಎಂಟಿಸಿಯಲ್ಲಿ ನುಸುಳುತ್ತಿದೆ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಧೋರಣೆ ವಿರುದ್ಧ ನಡೆಸಿದ “ನಮ್ಮ ಬಿಎಂಟಿಸಿ ಹಿಂದಿ ಬೇಡ’ (#NammaBMTCHindiBeda) ಅಭಿಯಾನ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಟ್ರೆಂಡ್ ಆಗಿದೆ.
ಚತುರ ಸಾರಿಗೆ ಯೋಜನೆ ಅಡಿ ಬಸ್ ಆಗಮನ-ನಿರ್ಗಮನದ ಬಗ್ಗೆ ನಿಖರ ಮಾಹಿತಿ ನೀಡುವ ಪ್ಯಾಸೆಂಜರ್ ಇನ್‌ಫಾರ್ಮೇಷನ್ ಸಿಸ್ಟಂ (ಪಿಐಎಸ್)ಗೆ ಸಂಬಂಧಿಸಿದ ಟೆಂಡರ್‌ನಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾಹಿತಿ ಪ್ರದರ್ಶನಕ್ಕೆ ಟೆಂಡರ್ ಕರೆದಿದೆ. ಟೆಂಡರ್‌ನಲ್ಲಿ ಹಿಂದಿ ನುಸುಳಿದ್ದನ್ನು ಖಂಡಿಸಿ ಶುಕ್ರವಾರ ಸಂಜೆ 6 ಗಂಟೆಯಿಂದ ಕನ್ನಡಪರ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳು ಅಭಿಯಾನ ಆರಂಭಿಸಿದ್ದರು.
ಅಭಿಯಾನ ಶುರುವಾದ ಕೆಲವೇ ಹೊತ್ತಿನಲ್ಲಿ ಹತ್ತುಸಾವಿರಕ್ಕೂ ಅಧಿಕ ಜನ ಟ್ವೀಟ್ ಮಾಡಿ ಬೆಂಬಲಿಸಿದ್ದಾರೆ. 7 ಗಂಟೆಯಿಂದಲೇ ಸತತವಾಗಿ ಈ ಅಭಿಯಾನ ಟ್ರೆಂಡ್ ಆಗಿದ್ದು ಕಂಡುಬಂತು. ಅಲ್ಲದೆ, ಬಿಎಂಟಿಸಿ ನಿಲುವು ಆಕ್ಷೇಪಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪಿಐಎಸ್‌ಗೆ ಸಂಬಂಧಿಸಿದಂತೆ ಕರೆದ ಟೆಂಡರ್‌ನಲ್ಲಿ ಕನ್ನಡ, ಇಂಗ್ಲಿಷ್ ಜತೆಗೆ ಹಿಂದಿ ಒಂದು ಆಯ್ಕೆ ಅಷ್ಟೇ. ಒಂದು ವೇಳೆ ಮುಂದಿನ ದಿನಗಳಲ್ಲಿ ಕೇಂದ್ರವು ಹಿಂದಿ ಕಡ್ಡಾಯ ಎಂದು ಆದೇಶ ಹೊರಡಿಸಿದರೆ, ಆಗ ಇಡೀ ಪಿಐಎಸ್ ವ್ಯವಸ್ಥೆಯನ್ನು ಪುನರ್ ರೂಪಿಸಬೇಕಾಗುತ್ತದೆ. ಹಾಗಾಗಿ, ಇದು ಮುಂಜಾಗ್ರತಾ ಕ್ರಮ ಎಂದು ಬಿಎಂಟಿಸಿ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ!
ದ್ವಿಭಾಷ ನೀತಿ ಇರಲಿ: ಎಸ್‌ಜಿಎಸ್: ಬಿಎಂಟಿಸಿ ಯಾವುದೇ ಕಾರಣಕ್ಕೂ ಹಿಂದಿಯಲ್ಲಿ ಮಾಹಿತಿ ಪ್ರದರ್ಶಿಸಬಾರದು. ಬಿಎಂಟಿಸಿ ರಾಜ್ಯ ಸರ್ಕಾರದ ಸಂಸ್ಥೆ. ಹೀಗಾಗಿ ಈ ಸಂಸ್ಥೆಯ ಆಡಳಿತದಲ್ಲಿ ದ್ವಿಭಾಷ ನೀತಿ ಅನುಸರಿಬೇಕೇ ಹೊರತು ತ್ರಿಭಾಷಾ ನೀತಿ ಅಲ್ಲ. ಅಧಿಕಾರಿಗಳು ಏತಕ್ಕಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಇವೆಲ್ಲ ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಈ ಹಿಂದೆ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಿಂದಿ ಹೇರಿಕೆಗೆ ಪ್ರಯತ್ನ ನಡೆದಿತ್ತು. ಇದರ ವಿರುದ್ಧ ತೀವ್ರ ಹೋರಾಟ ಸಹ ನಡೆದಿತ್ತು. ಬಿಎಂಟಿಸಿಯಲ್ಲಿ ಇಷ್ಟು ದಿನ ಇಲ್ಲದ ಹಿಂದೆ ಪ್ರೇಮ ಈಗೇಕೆ ಬಂದಿತೋ ಗೊತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.