ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಸಮಸ್ಯೆಯನ್ನೇ ವಿಷಯವಾಗಿಟ್ಟುಕೊಂಡು ನಿರ್ಮಾಣವಾಗಿರುವ “ಗಡಿನಾಡು’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾದ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಗಡಿನಾಡು’ ಬಗ್ಗೆ ಒಂದಷ್ಟು ಮಾತನಾಡಿತು.
“ಹೆಸರೇ ಹೇಳುವಂತೆ, “ಗಡಿನಾಡು’ ಚಿತ್ರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಸಂಬಂಧ ಯಾವಾಗಲೂ ಸಂಘರ್ಷಕ್ಕೆ ಕಾರಣವಾಗಿರುವ ಬೆಳಗಾವಿ ಪರಿಸರದಲ್ಲಿ ನಡೆಯುವ ಕಥೆ. ಚಿತ್ರದ ಬಹುತೇಕ ಚಿತ್ರೀಕರಣವನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗಗಳಾದ ಅಥಣಿ, ಗೋಕಾಕ್, ಬೆಳಗಾವಿ ಸುತ್ತಮುತ್ತದಲ್ಲೆ ನಡೆಸಲಾಗಿದೆ. ಗಡಿ ಸಮಸ್ಯೆ ಜೊತೆ ಒಂದು ನವಿರಾದ ಪ್ರೇಮಕಥೆ ಕೂಡ ಇದ್ದು, ಅಂತಿಮವಾಗಿ ಒಂದೊಳ್ಳೆಯ ಸಂದೇಶ ಕೂಡ ಚಿತ್ರದಲ್ಲಿದೆ’ ಎಂದು ಚಿತ್ರದ ಕಥಾ ಹಂದರವನ್ನು ತೆರೆದಿಟ್ಟಿತು ಚಿತ್ರತಂಡ.
“ಈಗಾಗಲೇ ಬಿಡುಗಡೆಯಾಗಿರುವ “ಗಡಿನಾಡು’ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು.
ನಾಗ್ ಹುಣಸೋಡ್ ನಿರ್ದೇಶನದಲ್ಲಿ ಮೂಡಿಬಂದಿರುವ “ಗಡಿನಾಡು’ ಚಿತ್ರಕ್ಕೆ ಬೆಳಗಾವಿ ಮೂಲದ ವಸಂತ್ ಮುರಾರಿ ದಳವಾಯಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಪ್ರಭು ಸೂರ್ಯ, ಸಂಚಿತಾ ಪಡುಕೋಣೆ, ಹಿರಿಯ ನಟ ಚರಣ್ ರಾಜ್, ಶೋಭ ರಾಜ್, ದೀಪಕ್ ಶೆಟ್ಟಿ, ರಘು ರಾಜ್, ರಘು ಸೀರುಂಡೆ, ಮಮತಾ, ಪುಷ್ಪಾ ಮೊದಲಾದ ಕಲಾವಿದರು “ಗಡಿನಾಡು’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಲ್ವಿನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ, ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಒಂದು ಗೀತೆಯನ್ನು ರಘು ದೀಕ್ಷಿತ್ ಹಾಡಿದ್ದಾರೆ. ಚಿತ್ರದ ಹಾಡುಗಳಿಗೆ ಧನಂಜಯ್, ಹರಿಕೃಷ್ಣ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರದಲ್ಲಿ ಐದು ಭರ್ಜರಿ ಸಾಹಸ ಸನ್ನಿವೇಶಗಳಿದ್ದು, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ, ವೆಂಕಿ ಸಂಕಲನವಿದೆ.
ಒಟ್ಟಾರೆ ರಾಜ್ಯದಲ್ಲಿ ಆಗಾಗ್ಗೆ ಸೌಂಡ್ ಮಾಡುವ “ಗಡಿನಾಡು’ ವಿಷಯ, ಗಾಂಧಿನಗರದ ಗಲ್ಲಾ ಪೆಟ್ಟಿಗೆಯಲ್ಲಿ ಎಷ್ಟರ ಮಟ್ಟಿಗೆ ಸೌಂಡ್ ಮಾಡಲಿದೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.