Advertisement
ಭಾಷೆ ಎಂದರೆ ಏನು ಎನ್ನುವ ಪ್ರಶ್ನೆಗೆ, “ಭಾಷೆ ಎಂದರೆ ಮಾನವ ಸಂವಹನದ ಒಂದು ಪ್ರಮುಖ ವಿಧಾನ’ ಎಂದು ಉತ್ತರಿಸಬಹುದು. ಇದು ರಚನಾತ್ಮಕ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ ಮತ್ತು ಮಾತು, ಬರವಣಿಗೆ ಇಲ್ಲವೇ ಸಂಕೇತಗಳ ಮೂಲಕ ತಿಳಿಸಲ್ಪಡುತ್ತದೆ ಎನ್ನಬಹುದು. ಇದಲ್ಲದೇ ಭಾಷೆ ಎಂದರೆ ಸಾಂಪ್ರದಾಯಿಕವಾಗಿ ಮಾತನಾಡುವ, ಲಿಖಿತ ಚಿಹ್ನೆಗಳ ವ್ಯವಸ್ಥೆ ಇದರ ಮೂಲಕ ನಾವೆಲ್ಲ ಒಂದು ಸಾಮಾಜಿಕ ಗುಂಪಿನ ಸದಸ್ಯರಾಗಿ ಮತ್ತು ಅದರ ಸಂಸ್ಕೃತಿಯಲ್ಲಿ ಭಾಗವಹಿಸಿ ಭಾಷೆಯನ್ನು ವ್ಯಕ್ತಪಡಿಸುತ್ತೇವೆ ಎನ್ನಬಹುದು.
Related Articles
Advertisement
ಇನ್ನು ಕನ್ನಡನಾಡಿನಿಂದ ದೂರವಿರುವ ಬಹುತೇಕ ಅನಿವಾಸಿ ಕನ್ನಡಿಗರ ಅಂತರಾಳವನ್ನು ಅರಿತಾಗ, “ಎಲ್ಲಿದ್ದರು ಎಂತಿದ್ದರು ಕನ್ನಡಿಗರು ನಾವು, ದೇಶ ದೇಶಗಳ ಗಡಿಗಳ ದಾಟುತ ನೆಲೆಸಿದರೂ ನಾವು, ಭುವನತ್ರಯವೇ ಸ್ವದೇಶವೆನ್ನುತ ಬದುಕಿದರೂ ನಾವು, ಅಂತರಾಳದ ಒಂಟಿತನದೊಳಗೆ ಕಾಡುತ್ತಿದೆ ಕನ್ನಡ ನಾಡು’ ಎನ್ನುವ ಕವಿಮಾತು, ಅವರ ಮನದಾಳದ ಮಾತಾಗಿರುವುದು ತಿಳಿದುಬರುತ್ತದೆ. ದೂರ ತೀರದ, ನೋಡಿ ಅರಿಯದ-ಶೋಧಿಸದ ಜಗತ್ತಿಗೆ ಬಂದು ನೆಲೆಸುವ ಪ್ರತೀ ಕನ್ನಡಿಗನ ಮನಸ್ಸಿನಲ್ಲಿ ಸುಪ್ತ ಬೀಜದಂತೆ ಜತೆಯಾಗುವ ಕನ್ನಡ ಭಾಷೆ, ಹೊಸ ಜಗತ್ತಿನಲ್ಲಿ ಮೊಳಕೆಯೊಡೆಯಲು ಅಂತರಾಳದ ಒಂಟಿತನದಲ್ಲಿ ಕಾಡುವ ಕನ್ನಡನಾಡೇ ಕಾರಣವಾಗುತ್ತದೆ. ಹೀಗೆ ಮೊಳಕೆಯೊಡೆದು, ಬೇರುಬಿಟ್ಟು, ಹಂತ-ಹಂತವಾಗಿ ಮರವಾಗಿ ಬೆಳೆದು, ಸುಂದರ ಹೂವುಗಳಿಂದ ಅಲಂಕೃತಗೊಳ್ಳುವ ಕನ್ನಡದ ವೃಕ್ಷ, ಹಲವಾರು ಕನ್ನಡದ ಮನಸ್ಸುಗಳಿಗೆ ನೆರಳು ನೀಡುವ ನೆಲೆಯಾಗುತ್ತದೆ, ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.
ಅಂತರಾಳದ ಒಂಟಿತನದಲ್ಲಿ ಕಾಡುವ ಕನ್ನಡನಾಡು, ಅಮೆರಿಕದಲ್ಲಿ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ಪ್ರಯತ್ನದಲ್ಲಿ ನನ್ನನ್ನು ಕಾಡಿದ್ದು ಹೇಗೆ ಎಂದು ಪ್ರಶ್ನಿಸಿಕೊಂಡಾಗ ಸಿಗುವ ಮೊದಲ ಉತ್ತರ, ಕನ್ನಡ ಸಾಹಿತ್ಯದ ಓದು ಮತ್ತು ಕನ್ನಡದ ಬರವಣಿಗೆ. ಮಾತೃಭಾಷೆ ಮೂಡಿಸುವ ಆತ್ಮವಿಶ್ವಾಸದಲ್ಲಿ ಅದೆಂಥ ಶಕ್ತಿಯಿದೆ ಎನ್ನುವುದನ್ನು ಕನ್ನಡ ಸಾಹಿತ್ಯದ ಓದು ಮತ್ತುಬರವಣಿಗೆಯಿಂದ ನಾನು ಕಂಡುಕೊಂಡಿದ್ದೇನೆ. ಈ ಶಕ್ತಿಯೇ ನ್ಯೂಜೆರ್ಸಿಯ ನಮ್ಮ ಮನೆಯಲ್ಲಿ ಕನ್ನಡ ಸಾಹಿತ್ಯದ ಎರಡು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳ ಸಂಗ್ರಹಣೆಯ ಪ್ರೇರಣೆಯಾಗಿದೆ ಎನ್ನಬಹುದು. ಮನಸ್ಸಿನಲ್ಲಿ ಮೊಳಕೆಯೊಡೆದ ಭಾಷೆಯ ಬೀಜವನ್ನು ನಮ್ಮ ನಿರಂತರ ಪ್ರಯತ್ನಗಳಿಂದಲೇ ಸುಂದರ ವೃಕ್ಷವಾಗಿಸಬಹುದು ಎನ್ನುವ ಅನುಭವವೂ ನನ್ನದಾಗಿದೆ. ಈ ಪ್ರಯತ್ನಗಳಲ್ಲಿ ಕನ್ನಡ ಪುಸ್ತಕಗಳ ಓದನ್ನು ಪ್ರೋತ್ಸಾಹಿಸಬೇಕೆಂದು ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವುದು, ರಸಪ್ರಶ್ನೆಗಳ ವಿಜೇತರಿಗೆ ಬಹುಮಾನವಾಗಿ ಕನ್ನಡ ಪುಸ್ತಕಗಳನ್ನು ಕೊಡುವುದು ಮತ್ತು ಸ್ಥಳೀಯ ಕನ್ನಡ ಸಂಘಗಳು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕ ಪ್ರದರ್ಶನ-ಮಳಿಗೆ, ನಮ್ಮ ಮನೆಯಲ್ಲಿ ನಡೆಸುವ “ಸಾಹಿತ್ಯ ಸುಧೆ’ ಸಂವಾದಗಳು ಮತ್ತು ಈ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಮನೆಯಲ್ಲಿ ನಡೆದ ಕನ್ನಡ ಪುಸ್ತಕ ಪ್ರಾಧಿಕಾರ ಏರ್ಪಡಿಸುವ “ನಿಮ್ಮ ಮನೆಗೆ ನಮ್ಮ ಪುಸ್ತಕ’ದ ಬೆಳ್ಳಿಹಬ್ಬ, ಕನ್ನಡ ಸಾಹಿತ್ಯದ ಹಿರಿಮೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪರಿಕಲ್ಪನೆ ಮತ್ತು ಪ್ರದರ್ಶನ…ಹೀಗೆ ಹಲವಾರು ಕನ್ನಡಪರ ಚಟುವಟಿಕೆಗಳು ಭಾಷೆಯನ್ನು ಪರದೇಶದಲ್ಲಿಯೂ ಬೆಳೆಸುವಲ್ಲಿ ನೆರವಾಗುತ್ತವೆ ಎನ್ನುವ ನಂಬಿಕೆ ನನ್ನದಾಗಿದೆ. ಕನ್ನಡ ಪುಸ್ತಕ ಓದಿಗೆ ಹೆಚ್ಚಿನ ಮಹತ್ವ ನೀಡುವ ಅಮೆರಿಕದ ಗ್ರಂಥಾಲಯಗಳಲ್ಲಿ ಕನ್ನಡಿಗರ ಓದಿಗಾಗಿ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಒದಗಿಸಿಬೇಕೆಂಬ ಸಂಕಲ್ಪದಿಂದ ನಮ್ಮ ಕನ್ನಡ ಪುಸ್ತಕ ಸಂಗ್ರಹಣೆಯ ಒಂದು ಭಾಗವನ್ನು ಇಲ್ಲಿನ ಗ್ರಂಥಾಲಯಗಳಿಗೆ ದೇಣಿಗೆಯಾಗಿ ಕೊಟ್ಟಿರುವುದು ನಮ್ಮ ಹೊಸ ಪ್ರಯತ್ನವಾಗಿದೆ.
ಈ ಎಲ್ಲ ಪ್ರಯತ್ನಗಳು ವಿದೇಶಿ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎನ್ನಬಹುದು. ನಮ್ಮ ಮಗನೂ ಕನ್ನಡ ಓದುವಲ್ಲಿ, ಬರೆಯುವಲ್ಲಿ, ಕರ್ನಾಟಕದ ಬಗ್ಗೆ ತಿಳಿದುಕೊಳ್ಳುವಲ್ಲಿ ಒಬ್ಬನಾಗಿ, ಇಲ್ಲಿನ ಅನೇಕ ಅನಿವಾಸಿ ಕನ್ನಡಿಗರ ಮಕ್ಕಳೊಂದಿಗೆ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ಪ್ರಯತ್ನದಲ್ಲಿರುವುದು ಸಂತೋಷವನ್ನು ನೀಡುತ್ತದೆ. ನಮ್ಮ ಭಾಷಾಭಿಮಾನ ದಿಂದ ಬೆಳೆಯುತ್ತಿರುವ ಕನ್ನಡದ ವೃಕ್ಷ ಸುಂದರವಾದ ಹೂವುಗಳಿಂದ ಅಲಂಕೃತ ಕೊಳ್ಳುವುದಲ್ಲದೇ, ಫಲಿಸಿ ಅದೆಷ್ಟೋ ಬೀಜಗಳನ್ನು ನೀಡುತ್ತದೆ ಎಂಬ ಸಮಾಧಾನವನ್ನು ಮೂಡಿಸುತ್ತದೆ. “ಬೀಜದಿಂದ ಬೀಜಕ್ಕೆ: ಈ ನಡುವೆ ಎಷ್ಟೊಂದು ಮರ, ಎಷ್ಟು ಎಲೆ, ಎಷ್ಟು ಹೂ, ಎಷ್ಟು ಹಣ್ಣು, ಈ ಒಂದು ಬೀಜ ಕಡೆಗೂ ಮತ್ತೆ ಬೀಜವಾಗುವುದಕ್ಕೆ’ ಎನ್ನುವ ಕವಿಮಾತು ಹೊರನಾಡಿನಲ್ಲಿ ಕನ್ನಡವನ್ನು ಉಳಿಸಿ-ಬೆಳೆಸುವಲ್ಲಿನ ನಮ್ಮ ಪ್ರಯತ್ನಕ್ಕೆ ಅರ್ಥ ನೀಡುತ್ತದೆ.
ಹೀಗೆ ಕನ್ನಡವನ್ನು ಉಳಿಸಿ, ಬೆಳೆಸುವ ಸಂಕಲ್ಪ ತೊಟ್ಟಿರುವ ಅದೆಷ್ಟೋ ಕನ್ನಡಿಗರನ್ನು ನಾವು ಇಲ್ಲಿ ಕಾಣುತ್ತೇವೆ. ಅಮೆರಿಕದ ಪ್ರತೀ ರಾಜ್ಯದಲ್ಲೂ ಕನ್ನಡ ಸಂಘಗಳಿವೆ. ಕನ್ನಡ ಸಾಹಿತ್ಯವನ್ನೇ ಪ್ರೋತ್ಸಾಹಿಸುವ ಪ್ರತ್ಯೇಕ ಕೂಟಗಳಿವೆ. ಕನ್ನಡ ಕೂಟಗಳು ಹಮ್ಮಿಕೊಳ್ಳುವ ಕನ್ನಡಪರ ಕಾರ್ಯಕ್ರಮಗಳು, ವಿಶ್ವಕನ್ನಡ ಸಮ್ಮೇಳನಗಳು, ಸಾಹಿತ್ಯೋತ್ಸವಗಳು ಹಲವಾರು ವರ್ಷಗಳಿಂದ ಕನ್ನಡದ ಹಿರಿಮೆಯನ್ನು ಇಲ್ಲಿ ಪರಿಚಯಿಸುತ್ತಿವೆ ಮತ್ತು ಕನ್ನಡದ ಕಂಪನ್ನು ಪಸರಿಸುತ್ತಿವೆ. ಇದೆಲ್ಲನ್ನು ತಿಳಿದಾಗ, “ಓ ಎಳೆಯಿರೋ ಕನ್ನಡದ ತೇರ, ನೀವು ನಿಂತಿರುವಂಥ ನೆಲೆಗಳಿಂದ. ನಾವೆಲ್ಲರೂ ಒಂದು: ತೇರೆಳೆವ ಜನರು. ಆ ಊರೊ, ಈ ಊರೊ, ಹಿಂದೆಯೋ ಮುಂದೆಯೋ ಎಲ್ಲಿಯೋ ಒಂದು ಕಡೆ ಕೈ ಹಾಕಿದವರು.’ ಎನ್ನುವ ಕವಿಮಾತು ಅರ್ಥ ಪಡೆದುಕೊಂಡಿದೆ ಎನ್ನುಬಹುದು.
-ಸರಿತಾ ನವಲಿ, ನ್ಯೂಜೆರ್ಸಿ