ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ನಮ್ಮ ಹೋರಾಟ ಮುಂದುವರೆದಿದೆ. ಕಳೆದ ಎರಡು ತಿಂಗಳ ಹಿಂದೆ ಗೋವಾದಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗೋವಾದಲ್ಲಿ ಜಾಗ ಪರಿಶೀಲನೆ ಕೂಡ ನಡೆದಿದೆ. ಗೋವಾ ಕನ್ನಡ ಭವನ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದೆ. ಕಳೆದ ಬಾರಿ ಸರ್ಕಾರ ಮಂಜೂರಿ ಮಾಡಿದ್ದ ಹಣ ವಾಪಸ್ಸು ಹೋಗಿದೆ. ಇದರಿಂದಾಗಿ ಈ ಹಿಂದೆ ನಾವು ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಇದೀಗ ಮತ್ತೆ ಹೊಸದಾಗಿ ಫೈಲ್ ಕಳುಹಿಸಲಾಗಿದ್ದು ಕನ್ನಡ ಭವನಕ್ಕಾಗಿ ನಮ್ಮ ಹೋರಾಟ ಮುಂದುವರೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ನುಡಿದರು.
ಭಾನುವಾರ ಗೋವಾದ ವೆರ್ಣಾದಲ್ಲಿರುವ “ಶಿಲ್ಪಲೋಕ”ದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ತಾಲೂಕಾ ಘಟಕಗಳ ಪದಾಧಿಕಾರಿಗಳ 2 ನೇಯ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸಬೇಕಾಗಿದೆ. ಒಂದು ವರ್ಷದಲ್ಲಿ ಒಂದು ಲಕ್ಷ ಸದಸ್ಯತ್ವ ಪೂರ್ಣಗೊಳಿಸುವತ್ತ ನಮ್ಮ ಗುರಿ ಕೇಂದ್ರೀಕರಿಸಬೇಕು. ಗೋವಾದಲ್ಲಿರುವ ಕನ್ನಡಿಗರ ಮನೆ ಮನೆಗೆ ತಲುಪುವ ಮೂಲಕ ಸಾಹಿತ್ಯ ಪರಿಷತ್ತಿಗೆ ಸದಸ್ಯರನ್ನಾಗಿ ಮಾಡಬೇಕು. ಈ ಮೂಲಕ ನಮ್ಮ ಗುರಿ ತಲುಪಬೇಕು ಎಂದು ಸಿದ್ಧಣ್ಣ ಮೇಟಿ ನುಡಿದರು.
ಗೋವಾದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಬೇಕಿದೆ ಈ ನಿಟ್ಟಿನಲ್ಲಿ ಪೂರ್ವ ಸಿದ್ಧತಾ ಕಾರ್ಯ ಕೈಗೊಳ್ಳಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ನುಡಿದರು. ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ರವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ ದೂರದರ್ಶನ ನಿರ್ದೇಶಕಿ ನಿರ್ಮಲಾ ಎಲಿಗಾರ ರವರ ಹೇಳಿಕೆಯನ್ನು ಸಭೆಯಲ್ಲಿ ಖಂಡಿಸಲಾಯಿತು. ರಾಜ್ಯಾಧ್ಯಕ್ಷರ ಸೋಚನೆಯಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ಕಸಾಪ ಗೋವಾ ರಾಜ್ಯ ಘಟಕದ, ಜಿಲ್ಲಾ ಘಟಕದ ಹಾಗೂ ತಾಲೂಕಾ ಘಟಕದ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.
ವೇದಿಕೆಯ ಮೇಲೆ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಕೋಶಾಧ್ಯಕ್ಷ ಪುಟ್ಟಸ್ವಾಮಿ ಗುಡಿಗಾರ, ಗೌ. ಕಾರ್ಯದರ್ಶಿ ನಾಗರಾಜ ಗೋಂದಕರ್, ಗೌ. ಕಾರ್ಯದರ್ಶಿ ಪ್ರಕಾಶ್ ಭಟ್, ಕಸಾಪ ಸಂಘಟನಾ ಅಧ್ಯಕ್ಷ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ಕಸಾಪ ಗೌ.ಕಾರ್ಯದರ್ಶಿ ನಾಗರಾಜ ಗೋಂದಕರ್ ಸ್ವಾಗತ ಕೋರಿದರು. ಗೌ. ಕಾರ್ಯದರ್ಶಿ ಪ್ರಕಾಶ್ ಭಟ್ ವಂದನಾರ್ಪಣೆಗೈದರು.