ಜೋಯಿಡಾ: ಗಡಿ ತಾಲೂಕಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿ ಆಗಬೇಕು. ಇಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಬೇಕು. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸಬೇಕು ಎನ್ನುವ ಸದುದ್ದೇಶದಿಂದ ರಾಜ್ಯ ಕನ್ನಡ ಪ್ರಾಧಿಕಾರ ಪ್ರತಿ ಗಡಿ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಿಸಿದೆ. ಆದರೆ ಜೋಯಿಡಾ ತಾಲೂಕಿನಲ್ಲಿ ಬೇಕಾಬಿಟ್ಟಿ ಬಳಕೆಯಾದ ಈ ಕಟ್ಟಡ ನಿರ್ವಹಣೆ ಇಲ್ಲದೆ, ಸಂಕಲ್ಪಿತ ಉದ್ದೇಶವೂ ಈಡೇರದೆ ಅನಾಥವಾಗಿ ನಿಂತಿದೆ.
ಕಳೆದ 2006-07 ರಲ್ಲಿ ಬಿಜೆಪಿ ಸರಕಾರವಿದ್ದಾಗ ತಾಲೂಕಿನ ಕನ್ನಡ ಭವನ ನಿರ್ಮಾಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆರಂಭದಲ್ಲಿ 5ಲಕ್ಷ ರೂ. ನೀಡಿತ್ತು. ನಂತರ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮತ್ತು ಪ್ರಾಧಿಕಾರದ ಸದಸ್ಯ ವಿಷ್ಣು ನಾಯ್ಕರ ವಿಶೇಷ ಕಾಳಜಿಯಿಂದ ಗಡಿಭಾಗ ಜೋಯಿಡಾದಲ್ಲಿ 20 ರೂ. ಲಕ್ಷದ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಆದರೆ ಕನ್ನಡ ಭವನದ ನೀಲ ನಕ್ಷೆಯಂತೆ ಗ್ರಂಥಾಲಯ, ವಿಶ್ರಾಂತಿ ಕೋಠಡಿ ನಿರ್ಮಾಣವಾಗದೆ ಕಳಪೆ ಕಾಮಗಾರಿ ಸುದ್ದಿ ಹರಡಿ, ಪ್ರಾಧಿಕಾರದ ಕೆಣಗಣ್ಣಿಗೆ ಗುರಿಯಾಗಿತ್ತು. ಕೊನೆಯಲ್ಲಿ ತಕ್ಕಮಟ್ಟಿಗೆ ಕನ್ನಡಿಗರಿಗೊಂದು ಕನ್ನಡ ಭವನ ಎಂಬಂತೆ ನಿರ್ಮಾಣಗೊಂಡ ಸಮಾಧಾನ ತಂದಿತ್ತು.
ಅನಾಥವಾದ ಭವನ: 2008-09 ರಲ್ಲಿ ಕನ್ನಡ ಭವನ ಉದ್ಘಾಟನೆಗೊಂಡು ಈತನಕ 10 ವರ್ಷಗಳಲ್ಲಿ ನೂರಾರು ಸಭೆ ಸಮಾರಂಭಗಳು ನಡೆದಿವೆ. ಇನ್ನೂ ನಡೆಯುತ್ತಲೇ ಇದೆ. ಆದರೆ ಒಂದು ಬಾರಿಯೂ ಕಟ್ಟಡಕ್ಕೆ ಸುಣ್ಣಬಣ್ಣ ಹಾಕಲಾಗಿಲ್ಲ. ಕೊಠಡಿಯ ಸ್ವತ್ಛತೆಗೆ ನಿಗಾ ವಹಿಸಿಲ್ಲ, ಇಲ್ಲಿನ ಫ್ಯಾನ್ ತಿರುಗುತ್ತಿಲ್ಲ, ಶೌಚಕೊಠಡಿ ಬಳಕೆಗೆ ಯೋಗ್ಯವಿಲ್ಲ. ಕೊಠಡಿ ಒಂದು ಬಾಗಿಲು ಮುರಿದು ಬಿದ್ದಿದೆ. ಕಟ್ಟಡದ ಮೇಲ್ಛಾವಣಿ ಸೋರುತ್ತಿದೆ. ಆದರೆ ಈ ಕಟ್ಟಡದ ಸುಪರ್ದಿ ಪಡೆದ ಇಲಾಖೆ ಅಧಿಕಾರಿಗಳು ಮಾತ್ರ ಇದು ತಮ್ಮದಲ್ಲ ಎಂಬಂತೆ ಬೇಕಾಬಿಟ್ಟಿ ಬಳಕೆಗೆ ಮಾತ್ರ ಸೀಮಿತವಾಗಿಟ್ಟು ಪಾಳು ಕೆಡವುತ್ತಿದ್ದಾರೆ ಎನ್ನುವ ಆರೋಪ ಕನ್ನಡಪರ ಸಂಘಟನೆಯಿಂದ ಕೇಳಿಬರುತ್ತಿದೆ.
ನಿರ್ವಹಣಾ ಸಮೀತಿ ಇಲ್ಲ: ನೂರಾರು ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಿರುವ ಕನ್ನಡ ಭವನ ಸೋರುತ್ತಿದ್ದು, ಬಾಗಿಲು ಕಿಡಕಿಗಳು ಕೃಷಗೊಂಡು ಪಾಳು ಬಿದ್ದ ಕಟ್ಟಡಂತೆ ಕಾಣುತ್ತಿದೆ. ಆದರೆ ಇದರ ಉಪಯೋಗ ಪಡೆದ ಇಲಾಖೆಗಳು ಇದರ ದುರಸ್ತಿಗೆ, ಸ್ವತ್ಛತೆಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲವೇಕೆ ಎನ್ನುವ ಪ್ರಶ್ನೆ ಕೇಳುವಂತೆ ಮಾಡಿದೆ. ಕನ್ನಡ ಭವನಕ್ಕೆ ಇರುವ ವಿದ್ಯುತ್ ಸಂಪರ್ಕದ ಬಿಲ್ ಕಟ್ಟಲಾಗದೆ ವಿದ್ಯುತ್ ತೆಗೆದಿದ್ದಾರೆ ಎನ್ನುವ ಮಾಹಿತಿ ಇದೆ. ಕಾರ್ಯಕ್ರಮ ನಡೆಸುವವರು ಪಕ್ಕದ ಇಲಾಖೆಯಿಂದ ವಿದ್ಯುತ್ ಸಂಪರ್ಕ ಪಡೆದು ನಡೆಸುತ್ತಿದ್ದಾರೆ ಎನ್ನಲಾಗಿದೆ. ಇಂದಿಗೂ ಕಟ್ಟಡ ಹೆಸರಿಗಷ್ಟೇ ಕನ್ನಡ ಭವನವಾಗಿ ಉಳಿದಿದೆ. ಕನ್ನಡ ಭವನ ನಿರ್ವಹಣಾ ಸಮೀತಿ ಇದ್ದರೆ ಕಾಲಕಾಲಕ್ಕೆ ಸರಿಯಾಗಿ ಕೆಲಸ ಆಗುತ್ತಿತ್ತು. ಇದರ ಉಸ್ತುವಾರಿ ಹೊತ್ತುಕೊಂಡ ಇಲಾಖೆ ಮಾತ್ರ ಈ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ರಿಪೇರಿಗೆ ಅನುದಾನವಿಲ್ಲವೇ?: ತಾಲೂಕಿನ ವಿವಿಧ ಇಲಾಖೆ ಕಟ್ಟಡಗಳಿಗೆ ರಿಪೇರಿ ಅಗತ್ಯವಿಲ್ಲದಿದ್ದರೂ ಹಂಚಿನ ಮೇಲೆ ಅಲ್ಯೂಮಿನಿಯಂ ಸೀಟ್ ಹೊದಿಕೆ ಹಾಕಿ ತೋರಿಕೆಗೆ ರಿಪೇರಿ ಮಾಡಿ, ಅನುದಾನ ಖರ್ಚು ತೋರಿಸುವ ಅಧಿಕಾರಿಗಳು, ನಮ್ಮದೇ ಸರಕಾರದ ಗಡಿ ಕನ್ನಡಿಗರ ಕನ್ನಡ ಭವನ ರಿಪೇರಿಗೆ ಮುತುವರ್ಜಿ ವಹಿಸುತ್ತಿಲ್ಲವೇಕೆ. ಇದಕ್ಕೆ ರಿಪೇರಿ ಮಾಡಿದರೆ ಕಡಿಮೆ ಅನುದಾನ ತಗುಲಲಿದೆ.