ಕಲ್ಯಾಣ್, ನ. 14: ಪವಿತ್ರ ಪಾವನಳಾದ ಕನ್ನಡಾಂಭೆಯ ಮಡಿಲ ಮಕ್ಕಳಾದ ನಾವು ಕನ್ನಡ ನಾಡಿನಿಂದ ದೂರವಿದ್ದರೂ ಕನ್ನಡಾಂಬೆಯನ್ನು ನಮ್ಮ ಹೃದಯ ಸಿಂಹಾಸನದಲ್ಲಿ ಪೂಜಿಸುತ್ತಾ ನಮ್ಮ ಸಿರಿವಂತ ಭಾಷೆ, ಕಲೆ ಹಾಗೂ ಸಂಸ್ಕೃತಿಯ ಕಂಪನ್ನು ವಿಶ್ವಮಟ್ಟದಲ್ಲೂ ಉಳಿಸಿ ಬೆಳೆಸುತ್ತಿದ್ದು ಇದಕ್ಕೆ ವಿದೇಶಿಗರು ಆಕರ್ಷಿತರಾಗಿದ್ದಾರೆ.
ಆದ್ದರಿಂದ ಇದನ್ನು ಇನ್ನಷ್ಟು ವೃದ್ಧಿಗೊಳಿಸಿ ನಾವು ಕರ್ನಾಟಕದ ರಾಯಭಾರಿಗಳೆಂಬ ಹೆಗ್ಗಳಿಕೆಯೊಂದಿಗೆ ಜೀವನವನ್ನು ಸಾರ್ಥಕಗೊಳಿಸೋಣ ಎಂದು ಡೊಂಬಿವಲಿ ಮಂಜುನಾಥ ವಾಣಿಜ್ಯ ವಿದ್ಯಾಲಯದ ಪ್ರಾಂಶುಪಾಲ ಡಾ| ವಿ. ಎಸ್. ಅಡಿಗಲ್ ಅವರು ನುಡಿದರು.
ನ. 10ರಂದು ಸಂಜೆ ಕಲ್ಯಾಣ್ ಪೂರ್ವದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ನಡೆದ ಕಲ್ಯಾಣ್ ಕರ್ನಾಟಕ ಸಂಘದ ವಾರ್ಷಿಕ ಕರ್ನಾಟಕ ರಾಜ್ಯೋತ್ಸವ ಹಾಗೂ 17ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಮೂರು ದಶಕಗಳ ಹಿಂದೆ ನನ್ನ ಉಜ್ವಲ ಭವಿಷ್ಯಕ್ಕಾಗಿ ತಾಯ್ನಾಡಿನಿಂದ ಮುಂಬಯಿಗೆ ಬಂದಾಗ ಎಲ್ಲಿ ಕನ್ನಡದ ಕೊಂಡಿ ಕಳಚಿ ಹೋಗುವುದೊ ಎಂಬ ಆತಂಕ ನನ್ನಲ್ಲಿತ್ತು. ಆದರೆ ನನ್ನ ಊಹೆ ಸುಳ್ಳಾಗಿ ಅನೇಕ ಕನ್ನಡ ಸಂಸ್ಥೆಗಳು ಕನ್ನಡದ ಕಂಪನ್ನು ಮುಂಬಯಿಯಲ್ಲಿ ಬೀರುತ್ತಿರುವುದನ್ನು ಕಂಡು ಸಂತೋಷವಾಯಿತು. ಇಂದು ನಾನು ಓರ್ವ ಹೊರನಾಡ ಕನ್ನಡಿಗ ಎಂಬ ಹೆಮ್ಮೆ ನನಗಿದ್ದು, ಕನ್ನಡಮ್ಮನಿಗಾಗಿ ಅಳಿಲು ಸೇವೆ ಮಾಡಲು ದೊರೆತದ್ದೇ ನನ್ನ ಸೌಭಾಗ್ಯ. ನನ್ನ ಅಳಿಲು ಸೇವೆ, ಸಾಧನೆಗಳನ್ನು ಗುರುತಿಸಿ ಗೌರವಿಸಿದ್ದಕ್ಕೆ ಕೃತಜ್ಞನಾಗಿದ್ದು, ನನ್ನ ಈ ಸಮ್ಮಾನವನ್ನು ಡೊಂಬಿವಲಿ ಕರ್ನಾಟಕ ಸಂಘದ ಆಡಳಿತ ಮಂಡಳಿ, ಮಂಜುನಾಥ ಮಹಾವಿದ್ಯಾಲಯದ ಸಿಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅರ್ಪಿಸುತ್ತೇನೆ. 17ರ ಯೌವನಾವಸ್ಥೆಯಲ್ಲಿ ಕಲ್ಯಾಣ್ ಕರ್ನಾಟಕ ಸಂಘ ನೂರಾರು ವರ್ಷಗಳವರೆಗೆ ಕನ್ನಡದ ಕೈಂಕರ್ಯವನ್ನು ನಡೆಸಲಿ ಎಂದು ನುಡಿದು ಹಾರೈಸಿದರು.
ಇನ್ನೋರ್ವ ಗೌರವ ಅತಿಥಿ ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ ನಾಯಕ್ ಅವರು ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಅವಿನಾಭಾವ ಸಂಬಂಧವಿದೆ. ಮುಂಬಯಿಯ ಕೋಳಿ ಜನಾಂಗದವರು ಮೂಲ ಕರ್ನಾಟಕದವರು ಎಂದು ಇತಿಹಾಸ ಹೇಳುತ್ತದೆ. ಇಂದು ಮುಂಬಯಿ ಮತ್ತು ಉಪನಗರಗಳಲ್ಲಿ ನೂರಾರು ಕನ್ನಡಪರ ಸಂಘಟನೆಗಳಿದ್ದು, ಅವು ಕನ್ನಡದ ಕೈಂಕರ್ಯದಲ್ಲಿ ತೊಡಗಿವೆ. ಇಂತಹ ಸಂಸ್ಥೆಗಳಿಗೆ ಕರ್ನಾಟಕ ಸರಕಾರ ಸೂಕ್ತ ಸ್ಥಾನಮಾನ ನೀಡಬೇಕು. ಹದಿನೇಳರ ಸಂಭ್ರಮದಲ್ಲಿರುವ ಕಲ್ಯಾಣ್ ಕರ್ನಾಟಕ ಸಂಘ ತನ್ನ ರಜತ ಮಹೋತ್ಸವವನ್ನು ಸ್ವಂತ ಸಭಾಗೃಹದಲ್ಲಿ ಆಚರಿಸುವಂತಾಗಲಿ ಎಂದು ಹಾರೈಸಿ. ನನ್ನಂತಹ ಓರ್ವ ಸಾಮಾನ್ಯ ಕನ್ನಡದ ಸೇವಕನನ್ನು ಗೌರವಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ 2019ನೇ ಸಾಲಿನ ಶ್ರೇಷ್ಟ ಕಲ್ಯಾಣ ಕನ್ನಡಿಗ ಪುರಸ್ಕಾರವನ್ನು ಸಮಾಜ ಸೇವಕ, ಉದ್ಯಮಿ ಪ್ರಫುಲ್ ಗಾಳ್ಳಿ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನಿಸಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಪ್ರಫುಲ್ ಗಾಳ್ಳಿ ಅವರು, ನಮಗೆ ಜನ್ಮ ನೀಡಿದ ತಾಯಿಯಂತೆ ನಮಗೆ ನಮ್ಮ ಜನ್ಮಭೂಮಿಯು ಶ್ರೇಷ್ಟ. ಕರ್ನಾಟಕದಂತಹ ಸಿರಿವಂತ, ಸಂಸ್ಕೃತಿಯ ಮಣ್ಣಿನಲ್ಲಿ ಜನಿಸಿದ ನಾವು ಧನ್ಯರು. ಕನ್ನಡಾಂಭೆಯ ಮಕ್ಕಳಾದ ನಾವು ನಮ್ಮ ನಾಡಿನ ಹಿರಿಮೆ-ಗರಿಮೆಯನ್ನು ಇತರರಿಗೆ ಪರಿಚಯಿಸಿ, ಕನ್ನಡ-ಮರಾಠಿ ಹಾಗೂ ಇತರ ಭಾಷಿಕರ ನಡುವಿನ ಬಾಂಧವ್ಯದ ಸೇತುವೆಯಾಗೋಣ ಎಂದರು.
ಸಂಸ್ಥೆಯ ಅಧ್ಯಕ್ಷೆ ದರ್ಶನಾ ಸೋನ್ಕರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ 2019ನೇ ಸಾಲಿನ ಸಂಸ್ಥೆಯ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗೊಳಿಸಿದರು. ಸಂಘದ ಮಾಜಿ ಅಧ್ಯಕ್ಷ ಟಿ. ಎಸ್. ಉಪಾಧ್ಯಾಯ ದಂಪತಿ ಹಾಗೂ ಸಂಘದಲ್ಲಿ ಪ್ರಸಕ್ತ ವರ್ಷದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣೇಶ್ ಪೈ ಮತ್ತು ಇನ್ನಿತರ ಸದಸ್ಯರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ವೇದಿಕೆಯಲ್ಲಿ ಡಾ| ವಿ. ಎಸ್. ಅಡಿಗಲ್, ಗುರುರಾಜ ನಾಯಕ್, ದರ್ಶನಾ ಸೋನ್ಕರ್, ಡಾ| ಸುರೇಂದ್ರ ಶೆಟ್ಟಿ, ಭಾಸ್ಕರ್ ಶೆಟ್ಟಿ, ನಂದಾ ಶೆಟ್ಟಿ, ನ್ಯಾಯವಾದಿ ನೂತನ್ ಹೆಗ್ಡೆ, ಜಯಂತ್ ದೇಶುಮುಖ್, ವಿಶ್ವನಾಥ ಶೆಟ್ಟಿ, ಪ್ರಶಾಂತಿ ಶೆಟ್ಟಿ, ರಮೇಶ್ ಶೆಟ್ಟಿ, ನಾಗರಾಜ ಭಟ್ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಗೌರವ ಕಾರ್ಯದರ್ಶಿ ಜಯಂತ್ ದೇಶುಮುಖ್ ವಾರ್ಷಿಕ ವರದಿ ವಾಚಿಸಿದರು. ಸಂಘದ ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ವರ ಕಲಾ ವೇದಿಕೆಯ ಗುರುರಾಜ ಕಾಂಜೀಕರ, ಉಮಾನಾಯಕ್, ವಿಭಾ ದೇಶುಮುಖ್ ಪ್ರಾರ್ಥನೆಗೈದರು. ನಾಡಗೀತೆಯೊಂದಿಗೆ ಜ್ಯೋತಿ ಬೆಳಗಿಸುವುದರ ಮೂಲಕ ಪ್ರಾರಂಭವಾದ ಈ ವರ್ಣರಂಜಿತ ಸಮಾರಂಭವನ್ನು ಸವಿತಾ ಕುಲಕರ್ಣಿ ನಿರ್ವಹಿಸಿದರು. ವಿಶ್ವನಾಥ ಶೆಟ್ಟಿ ವಂದಿಸಿದರು. ಶ್ರೀಧರ ಕುಲಕರ್ಣಿ, ಟಿ. ಎಸ್. ಉಪಾಧ್ಯಾಯ, ಪ್ರಶಾಂತಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವಾಮನ್ ಶೆಟ್ಟಿ, ಎಂ. ಬಿ. ಬಿರಾದಾರ್, ಟಿ. ಎನ್. ಅಶೋಕ್, ವೆಂಕಟೇಶ್ ಪೈ, ಪ್ರಕಾಶ್ ದೇಶ್ಪಾಂಡೆ, ಗೋಪಾಲ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಗೀತಾ ಪೂಜಾರಿ, ಸುಹಾಸ್ ಕುಲಕರ್ಣಿ, ಪೂಜಾ ಕುಲಕರ್ಣಿ, ಕೆ. ಚಂದ್ರಶೇಖರ್, ಅಹಲ್ಯಾ ಶೆಟ್ಟಿ, ವೀಣಾ ಕಾಮತ್ ಸಹಕರಿಸಿದರು. ನೂರಾರು ತುಳು-ಕನ್ನಡಿಗರು ಉಪಸ್ಥಿತರಿದ್ದರು.
ಚಿತ್ರ-ವರದಿ: ಗುರುರಾಜ ಪೋತನೀಸ್