Advertisement

ಇರಾನ್‌ನ ಶಾರೂಖ್‌ ಖಾನ್‌ ಜೊತೆಗೆ ಕನ್ನಡದ ನಟಿ

10:00 PM Jan 24, 2018 | |

ಕನ್ನಡ ಚಿತ್ರಗಳಲ್ಲಿ ವಿದೇಶದ ಕೆಲ ನಟ, ನಟಿಯರು ನಟಿಸಿದ್ದಾರೆ. ಅದು ಹೊಸ ಸುದ್ದಿಯೇನಲ್ಲ. ಕನ್ನಡದ ಸುದೀಪ್‌ ಅವರು ಸಹ ಹಾಲಿವುಡ್‌ನ‌ “ರೈಸನ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೂ ಹಳೆಯ ಸುದ್ದಿಯೇ. ಈಗ ಹೊಸ ಸುದ್ದಿ ಅಂದರೆ, ಧಾರವಾಡದ ಜವಾರಿ ಹುಡುಗಿಯೊಬ್ಬಳು ಇರಾನಿಯನ್‌ ಚಿತ್ರದಲ್ಲಿ ನಟಿಸಿ ಬಂದಿದ್ದಾಳೆ. ಹೌದು, ಇದೇ ಈ ಹೊತ್ತಿನ ಸುದ್ದಿ. 

Advertisement

ಅಂದಹಾಗೆ, ಇರಾನಿ ಚಿತ್ರದಲ್ಲಿ ನಟಿಸಿದ ಧಾರವಾಡದ ಅಪ್ಪಟ ಕನ್ನಡತಿಯ ಹೆಸರು ಸಿಮ್ರಾನ್‌ ಮಿಶ್ರಕೋಟಿ. ಸಿಮ್ರಾನ್‌ ಇನ್ನೂ ಬಿಡುಗಡೆಯಾಗಬೇಕಿರುವ “ಆ ಒಂದು ದಿನ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಆಕೆ ಹುಟ್ಟಿದ್ದು, ಬೆಳೆದದ್ದು, ಓದಿದ್ದೆಲ್ಲವೂ ಧಾರವಾಡದಲ್ಲೇ. ಖಡಕ್‌ ಧಾರವಾಡ ಭಾಷೆಯಲ್ಲೇ ಮಾತನಾಡುವ ಸಿಮ್ರಾನ್‌, ಈಗ ನೆಲೆಸಿರೋದು ಮುಂಬೈನಲ್ಲಿ. ಅಲ್ಲಿಂದ ನೇರ ಇರಾನಿಯನ್‌ ಚಿತ್ರದಲ್ಲಿ ನಟಿಸಿ ಬಂದಿದ್ದಾರೆ.

ಘೋರ್ಬನ್‌ ಮಹಮ್ಮದ್‌ಪೊರ್‌ ನಿರ್ದೇಶನದ “ಸಲಾಂ ಮುಂಬೈ’ ಎಂಬ ಇರಾನ್‌ ಚಿತ್ರದಲ್ಲಿ ಸಿಮ್ರಾನ್‌ ಮಿಶ್ರಕೋಟಿ ನಟಿಸಿದ್ದಾರೆ. ಆ ಚಿತ್ರದಲ್ಲಿ ರೆಜ ಗುಲ್ಜರ್‌ ಹೀರೋ. ಇರಾನ್‌ ಚಿತ್ರರಂಗದಲ್ಲಿ ರೆಜಗುಲ್ಜರ್‌ ಬಾಲಿವುಡ್‌ನ‌ ಶಾರುಖ್‌ ಖಾನ್‌ ಇದ್ದಂಗೆ ಎಂಬುದು ಸಿಮ್ರಾನ್‌ ಮಿಶ್ರಕೋಟಿಯ ಮಾತು. “ದಿಯಾ ಮಿರ್ಜಾ ಆ ಚಿತ್ರದ ಮೊದಲ ನಾಯಕಿ. ಸಿಮ್ರಾನ್‌ ಮಿಶ್ರಕೋಟಿ ಅವರು ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರಂತೆ.

ಅದೊಂದು ಇರಾನಿ ಹುಡುಗ, ಇಂಡಿಯನ್‌ ಹುಡುಗಿ ನಡುವಿನ ಲವ್‌ಸ್ಟೋರಿ. ಇರಾನಿ ಹುಡುಗ ಇಂಡಿಯಾಗೆ ಬಂದಾಗ, ನಡೆಯುವ ಕಥೆಯಲ್ಲಿ ಅನೇಕ ಪ್ರೀತಿಯ ಮಜಲುಗಳಿವೆ. ಈಗಾಗಲೇ ಚಿತ್ರ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಐದು ಪ್ರಶಸ್ತಿಗಳು ದೊರೆತಿವೆ. ಮುಂಬೈನಲ್ಲಿ ಆಡಿಷನ್‌ ಇದ್ದಾಗ, ನಾನು ಹೋಗಿ ಆಡಿಷನ್‌ ಕೊಟ್ಟಿದ್ದೆ. ಆ ಚಿತ್ರದಲ್ಲಿ ಎರಡು ಪಾತ್ರಗಳಿದ್ದವು. ಆ ಪೈಕಿ ಒಂದನ್ನು ಆಯ್ಕೆ ಮಾಡಿಕೊಂಡೆ.

ನಿರ್ದೇಶಕರು ಒಳ್ಳೆಯ ಪಾತ್ರ ಕಟ್ಟಿಕೊಟ್ಟಿದ್ದಾರೆ. ಇರಾನಿ ಚಿತ್ರದಲ್ಲಿ ನಟಿಸಿದ್ದು ಖುಷಿಕೊಟ್ಟಿದೆ. ಇರಾನಿಯನ್‌ನಲ್ಲಿ ಬಾಲಿವುಡ್‌ ಶೈಲಿಯ ಚಿತ್ರಗಳು ಇಲ್ಲ. “ಸಲಾಂ ಮುಂಬೈ’ ಇಲ್ಲಿನ ಶೈಲಿಯ ಚಿತ್ರ ಎನ್ನಬಹುದು. ಪಕ್ಕಾ ಕಮರ್ಷಿಯಲ್‌ ಅಂಶಗಳು ಅದರಲ್ಲಿವೆ’ ಎನ್ನುವ ಸಿಮ್ರಾನ್‌, ಪಾಕಿಸ್ತಾನಿ ಸಿನಿಮಾದಲ್ಲೂ ನಟಿಸಿದ್ದಾಗಿ ಹೇಳುತ್ತಾರೆ.

Advertisement

“ಪ್ರೇಮ್‌ರತನ್‌ ಧನ್‌ಪಾಯೋ’ ಚಿತ್ರದ ನೃತ್ಯ ನಿರ್ದೇಶಕಿ ಶಬೀನಾ ಖಾನ್‌ ಅವರ “ಲಂಡನ್‌ ಕೆ ಬಂಧನ್‌’ ಎಂಬ ಪಾಕ್‌ ಚಿತ್ರದಲ್ಲಿ ನಟಿಸಿದ್ದೇನೆ. ಆ ಚಿತ್ರದಲ್ಲಿ ಓಂಪುರಿ ಅವರೂ ನಟಿಸಿದ್ದರು. ಆದರೆ, ಅವರು ಚಿತ್ರೀಕರಣದ ಅರ್ಧದಲ್ಲೇ ನಿಧನರಾದರು. ಹಾಗಾಗಿ, ಆ ಚಿತ್ರದ ನಿರ್ಮಾಪಕರು ಚಿತ್ರವನ್ನು ಪುನಃ ಚಿತ್ರೀಕರಿಸುತ್ತಿದ್ದಾರೆ. ಇದಲ್ಲದೆ, ನಾನು ಒಪ್ಪೋ ಮೊಬೈಲ್‌ ಜಾಹಿರಾತಿನಲ್ಲಿ ಧೋನಿ ಮತ್ತು ಕೊಹ್ಲಿ ಅವರೊಂದಿಗೂ ಕಾಣಿಸಿಕೊಂಡಿದ್ದೇನೆ.

ಬಾಲಿವುಡ್‌ನ‌ “ಮಿಷೀನ್‌’ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೊಂದಷ್ಟು ಹಿಂದಿ ಚಿತ್ರಗಳು ಬಿಡುಗಡೆಯಾಗಬೇಕಿದೆ. ನಾನು ಕನ್ನಡತಿ. ಹಾಗಾಗಿ ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆ ಇದೆ. “ಆ ಒಂದು ದಿನ’ ಎಂಬ ಚಿತ್ರದಲ್ಲಿ ನಾನು ಸ್ಪೆಷಲ್‌ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇಲ್ಲಿನ ಸ್ಟಾರ್‌ ನಟರ ಜತೆ ನಟಿಸುವ ಆಸೆ ನನಗೂ ಇದೆ. ಸಣ್ಣ ಸಿನಿಮಾ, ಹೊಸಬರ ಸಿನಿಮಾ ಇದ್ದರೂ ಸರಿ, ನಾನು ಕನ್ನಡದಲ್ಲಿ ನಟಿಸಲು ಸೈ.

ಮುಂಬೈನಲ್ಲಿರುವುದರಿಂದ ಅವಕಾಶ ದೂರ ಅಂದುಕೊಳ್ಳುತ್ತೇನೆ. ಮುಂದಿನ ತಿಂಗಳು ಬೆಂಗಳೂರಲ್ಲೇ ಶಿಫ್ಟ್ ಆಗ್ತಿನಿ’ ಎನ್ನುತ್ತಾರೆ ಸಿಮ್ರಾನ್‌. ಹಾಗಾದರೆ, ಸಿಮ್ರಾನ್‌ ಬಣ್ಣದ ಲೋಕಕ್ಕೆ ಬರುವ ಮುನ್ನ ಏನಾಗಿದ್ದರು ಗೊತ್ತಾ? ಅವರು ಕತಾರ್‌ ದೇಶದಲ್ಲಿ ಗಗನಸಖೀ ಆಗಿ ಆರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆರು ವರ್ಷ ಗಗನಸಖೀ ಆಗಿ ಕೆಲಸ ಮಾಡಿ, ನಟನೆಯತ್ತ ಆಸಕ್ತಿ ಬಂದಿದ್ದೇ ತಡ, ಕೆಲಸಕ್ಕೆ ಗುಡ್‌ಬೈ ಹೇಳಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next