ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಸ್ಯಾಂಡಲ್ವುಡ್ ನಟಿ ಶ್ರುತಿ ಅವರು ಖಂಡಿಸಿದ್ದಾರೆ.
ಘಟನೆ ಕುರಿತು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಆಕ್ರೋಶ ಹೊರಹಾಕಿರುವ ಅವರು, ‘ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ? ಇಂತಹ ಪುರುಷರ ಮನಸ್ಥಿತಿ ಬದಲಾಗುವುದು ಯಾವಾಗ? ಕಾಮುಕರನ್ನ ಬಂಧಿಸುವ ಕಾನೂನು ಮತ್ತಷ್ಟು ಗಟ್ಟಿಯಾಬೇಕು ಎಂದು ಆಗ್ರಹಿಸಿದ್ದಾರೆ.
ಇಂತಹ ಪುರುಷರು ಬೆಳೆಯುವ ಮನೆಯ ವಾತಾವರಣ, ಸಂಸ್ಕಾರ ಪೋಷಕರ ಜವಾಬ್ದಾರಿಯೂ ಆಗಿರುತ್ತದೆ. ಹುಟ್ಟಿನಿಂದ ಸಾವಿನವರೆಗೆ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟ ನೂರಾರು ಆಗಿದೆ. ಹಲವಾರು ಮಹಿಳೆಯರು ಅದನ್ನು ಹಿಮ್ಮೆಟ್ಟಿ ಇಡೀ ಭಾರತವೇ ಮೆಚ್ಚುವಂತಹ ಸಾಧನೆಯನ್ನು ಮಾಡುತ್ತಿದ್ದಾರೆ. ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವಂತಾಗುತ್ತದೆ ಇದು ಆಗದಿರಲಿ ಎಂದಿದ್ದಾರೆ ಶ್ರುತಿ.
ಇನ್ನು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರದ ಗುಡ್ಡದಲ್ಲಿ ಇತ್ತೀಚಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ಐದು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.ಆಕೆಯೊಂದಿಗೆ ಇದ್ದ ಸ್ನೇಹಿತನ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದೆ. ಹೀಗಾಗಿ ಇಬ್ಬರೂ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.