“ನಾನೊಬ್ಬ ಕಲಾವಿದನಾಗಿ ಜನರಿಗೆ ಪರಿಚಯವಾದೆ. ಜನ ಎಲ್ಲೇ ಹೋದರೂ, ನನ್ನನ್ನು ಕಲಾವಿದನಾಗಿ ಗುರುತಿಸಿ ಮಾತನಾಡಿಸುತ್ತಾರೆ. ನನಗೀಗ 75 ವರ್ಷವಾಗಿದೆ. ಈ ಬಣ್ಣದ ನಂಟು, ಬಣ್ಣದ ಬದುಕಿಗೆ ಬಂದು 50 ವರ್ಷವಾಗುತ್ತಿದೆ. ಒಬ್ಬ ಕಲಾವಿದನಾಗಿ ಈ ಬದುಕಿನಲ್ಲಿ ತೃಪ್ತಿ ಕಂಡಿದ್ದೇನೆ’ ಇದು ಹಿರಿಯ
ನಟ ಶ್ರೀನಿವಾಸ ಮೂರ್ತಿ ಅವರ ಮಾತು. ಹೌದು, ರಂಗಭೂಮಿ ಕಲಾವಿದನಾಗಿ ಆನಂತರ ಚಿತ್ರರಂಗದಲ್ಲಿ ನಾಯಕ, ನಿರ್ಮಾಪಕ, ಪೋಷಕ ಕಲಾವಿದನಾಗಿ ಗುರುತಿಸಿಕೊಂಡಿರುವ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರಿಗೀಗ 75 ವರ್ಷ. ಇದೇ ವರ್ಷ ಶ್ರೀನಿವಾಸ ಮೂರ್ತಿ ಬಣ್ಣದ ಬದುಕಿಗೆ ಕಾಲಿಟ್ಟು 50 ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಮೂರ್ತಿ ಇದೇ ಮೇ 15 ಮತ್ತು 16 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ “ತರಕಾರಿ ಚೆನ್ನಿ’ ಮತ್ತು “ಸದಾರಮೆ ಕಳ್ಳ’ ಎಂಬ ಎರಡು ನಾಟಕಗಳಲ್ಲಿ ವಿಶೇಷ ಪ್ರದರ್ಶನ ನೀಡಲಿದ್ದಾರೆ.
ತಮಗೆ 75 ಮತ್ತು ತಮ್ಮ ಬಣ್ಣದ ಬದುಕಿಗೆ 50 ವರ್ಷವಾಗುತ್ತಿರುವ ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ಮೂರ್ತಿ, “ಈಗ ನನಗೆ 75 ವರ್ಷ ಆಗಿದೆ. ಜತೆಗೆ ನಾನು ಬಣ್ಣದ ಬದುಕಿಗೆ ಬಂದು 50 ವರ್ಷಗಳಾಗುತ್ತಿವೆ. ಈ ನೆನಪಿನಲ್ಲಿ “ತರಕಾರಿ ಚೆನ್ನಿ’ ಮತ್ತು “ಸದಾರಮೆ ಕಳ್ಳ’ ಎಂಬ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ನನ್ನ ಬದುಕಿಗೆ ನಾನು ಸಾರ್ಥಕತೆ ಕಂಡುಕೊಳ್ಳುತ್ತಿರುವೆ’ ಎನ್ನುತ್ತಾರೆ.
“ನಾನು ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದು ಸರ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದೆ. ಆ ವೇಳೆ ನಾಟಕದ ರುಚಿ ಹತ್ತಿಸಿಕೊಂಡೆ. ಒಮ್ಮೆ ಬಂಗಾರಪ್ಪ ನನ್ನ ನಾಟಕ ನೋಡಲು ಬಂದರು. ನಾಟಕ ನೋಡಿದ ನಂತರ, ಇನ್ನು ಮೇಲೆ ಇಲಾಖೆಯಲ್ಲಿ ಇವರಿಗೆ ಏನೂ ಕೆಲಸ ಹೇಳಬೇಡಿ. ಕಲಾವಿದರಾಗಿ ಹೆಚ್ಚು ತೊಡಗಿಸಿಕೊಳ್ಳಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲಿಂದ ನಟನೆ ಹೆಚ್ಚಾಯಿತು’ ಎಂದು ತಮ್ಮ ಬಣ್ಣದ ಬದುಕಿನ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ ಶ್ರೀನಿವಾಸ ಮೂರ್ತಿ.
“ತಮಿಳಿನ “ಕಾಲತ್ತಿಲ್’ ಸಿನಿಮಾಕ್ಕೆ ಹೀರೋ ಆದೆ. ಆದ್ರೆ ಆ ಸಿನಿಮಾದ ಬಿಡುಗಡೆ ಸಮಯದಲ್ಲಿ ನಿರ್ಮಾಪಕರು ಅರೆಸ್ಟ್ ಆದರು. ಮುಂದೆ “ಅಪ್ಪು’ ಸಿನಿಮಾದಲ್ಲಿ ನನ್ನ ಪಾತ್ರ ನೋಡಿದ ನಿರ್ದೇಶಕ ಪುರಿ ಜಗನ್ನಾಥ್ ತೆಲುಗಿಗೆ ನನ್ನ ಕರೆದರೂ, ಇಲ್ಲಿ ಒಂದಷ್ಟು ಸಿನಿಮಾಗಳಲ್ಲಿ ಬಿಝಿಯಾಗಿದ್ದರಿಂದ ಅಲ್ಲಿಗೂ ಹೋಗಲಿಲ್ಲ. ಬೇರೆ ಭಾಷೆಗಳಿಂದಲೂ ಕರೆ ಬಂದಿರೂ ಹೋಗಲಿಲ್ಲ. ಹಾಗಾಗಿ ಪರಭಾಷೆಗಳಲ್ಲಿ ನಟಿಸುವ ಕನಸು ಹಾಗೆ ಉಳಿದು ಹೋಯಿತು. “ನೀನು ಯಾಕೆ ತಮಿಳು ಚಿತ್ರಗಳಲ್ಲಿ ಬಂದು ನಟಿಸಬಾರದು? ಬಾ ಇಲ್ಲಿಗೆ’ ಅಂತ ರಜನಿಕಾಂತ್ ಆಗಾಗ ಕರೆಯುತ್ತಿರುತ್ತಾರೆ’ ಎಂದು ಬೇರೆ ಭಾಷೆಗಳಲ್ಲೂ ತಮಗಿದ್ದ ಅವಕಾಶಗಳ ಬಗ್ಗೆ ಮಾತನಾಡುತ್ತಾರೆ ಶ್ರೀನಿವಾಸ ಮೂರ್ತಿ.