ಬೆಂಗಳೂರು: ಶಾಲಾ ಮಕ್ಕಳಿಗೆ ಸ್ವೇಟರ್ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದಲ್ಲಿ ಸುಖಾಸುಮ್ಮನೆ ತಮ್ಮ ಹಾಗೂ ಸಚಿವ ಆರ್. ಅಶೋಕ್ ಅವರ ಹೆಸರು ಎಳೆದು ತಂದಿರುವ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಸಿ.ಎಸ್.ರಘು ವಿರುದ್ಧ ನಟ ಜಗ್ಗೇಶ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ.
ನಟ ಕೋಮಲ್ ಅವರು ಶಾಲಾ ಮಕ್ಕಳ ಸ್ವೆಟರ್ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಬಿಬಿಎಂಪಿ ಕಚೇರಿ ಮುಂಭಾಗ ಸಮಿತಿ ಅಧ್ಯಕ್ಷ ಡಾ.ಸಿ.ಎಸ್.ರಘು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು.
ಪಾಲಿಕೆ ಶಾಲಾ, ಕಾಲೇಜುಗಳಲ್ಲಿ ದಲಿತ, ಹಿಂದುಳಿದ ಮತ್ತು ಕಡು ಬಡವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. 2020-21ನೆ ಸಾಲಿನಲ್ಲಿ ಪಾಲಿಕೆ ಮಕ್ಕಳಿಗೆ ಸ್ವೆಟರ್‍ಗಳನ್ನು ನೀಡಲು ಅನುದಾನ ಮೀಸಲು ಇಟ್ಟಿರುತ್ತಾರೆ. ಆದರೆ, ಪಾಲಿಕೆಯ ಕೆಲ ಅಧಿಕಾರಿಗಳು ಟೆಂಡರ್ ಕರೆಯದೇ 4ಜಿ ವಿನಾಯಿತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್‍ಗಳನ್ನು ಸರಬರಾಜು ಮಾಡಲು ಆದೇಶ ನೀಡಿದ್ದಾರೆ.
ಕಳೆದ ಸಾಲಿನಲ್ಲಿ ಕೋವಿಡ್ ಸಾಂಕ್ರಮಿಕ ರೋಗದ ಕಾರಣದಿಂದ ಶಾಲಾ, ಕಾಲೇಜು ಬಂದ್ ಮಾಡಲಾಗಿತ್ತು. ಆದರೆ, ಸ್ವೆಟರ್‍ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು 1.76 ಕೋಟಿ ರೂ.ಹಣವನ್ನು ಪಾವತಿ ಮಾಡಲಾಗಿದೆ. ಅಂದಾಜು 16 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸ್ವೆಟರ್‍ಗಳನ್ನು ವಿತರಣೆ ಮಾಡದೇ ಈ ಯೋಜನೆಯಲ್ಲಿ ಪಾಲಿಕೆ ಅಧಿಕಾರಿಗಳು ಹಣವನ್ನು ಲೂಟಿ ಮಾಡಿದ್ದಾರೆಂದು ರಘು ಆರೋಪಿಸಿದರು.
ಈ ಪ್ರಕರಣದಲ್ಲಿ ಜಗ್ಗೇಶ್ ಅವರು ಆರ್, ಅಶೋಕ ಮೂಲಕ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿಸಿದ್ದಾರೆ ಎಂದು ಇದೇ ವೇಳೆ ರಘು ಗಂಭೀರ ಆರೋಪ ಮಾಡಿದ್ದಾರೆ. ಇದು ಜಗ್ಗೇಶ್ ಅವರನ್ನು ಕೆರಳಿಸಿದ್ದು, ಸಂಬಂಧವಿಲ್ಲದೆ ನನ್ನ ಹೆಸರು ಹಾಗು ಆರ್, ಅಶೋಕ ಅವರ ಹೆಸರು ತೆಗೆದು ರಘು ಎಂಬುವರು ಅಪಮಾನಿಸಿದ್ದಾರೆ. ಇದು ನನಗೆ ಬಹಳ ನೋವುಂಟು ಮಾಡಿದೆ.ಹಾಗಾಗಿ ಸಂಬಂಧವಿಲ್ಲದೆ ನನ್ನ ಬಗ್ಗೆ ಸುಳ್ಳು ಆಪಾದನೆ ಮಾಡಿರುವ ರಘುರವರ ಮೇಲೆ ಮಾನನಷ್ಟ ಅಪಾದನೆ ದಾಖಲಿಸುತ್ತಿರುವೆ. ದಯಮಾಡಿ ಯಾರೆ ಆಗಲಿ ಸತ್ಯ ಅರಿತು ನುಡಿಯುವ ಗುಣ ಬೆಳಸಿಕೊಳ್ಳಿ ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.