ಬೆಂಗಳೂರು : ಚಂದನವನದ ಹಿರಿಯ ನಟ ಜಗ್ಗೇಶ್ ಅವರು ಜೀವನದಲ್ಲಿ ನೊಂದವರಿಗೆ ಜಿಗುಪ್ಸೆ ಹೊಂದಿದವರಿಗೆ ಮನೋಸ್ಥೈರ್ಯ ತುಂಬುವ ಕಾರ್ಯ ಆಗಾಗ ಮಾಡುತ್ತಿರುತ್ತಾರೆ.
ಟ್ವಿಟರಿನಲ್ಲಿ ಸಕ್ರಿಯವಾಗಿರುವ ನವರಸ ನಾಯಕ, ಇದೀಗ ಜೀವನದಲ್ಲಿ ಪರೀಕ್ಷೆಗಳಿಂದ ಪಡೆಯುವ ಅಂಕಗಳು ಮುಖ್ಯವಲ್ಲ, ಬದುಕಲು ಆತ್ಮವಿಶ್ವಾಸ ಮುಖ್ಯ ಎಂದು ಹೇಳಿದ್ದಾರೆ.
ನಾಯಕ ಜಗ್ಗೇಶ್ ಟ್ವಿಟರಿನಲ್ಲಿ ತಮ್ಮ ಎಸ್‌ಎಸ್‌ಎಲ್ ಸಿ ಮಾರ್ಕ್ಸ್ ಕಾರ್ಡ್ ಹಂಚಿಕೊಂಡಿದ್ದಾರೆ. 1979 ರಲ್ಲಿ ಎಸ್ ಎಸ್ ಎಲ್ ಸಿ ಪಾಸ್ ಮಾಡಿರುವ ಜಗ್ಗೇಶ್ ಕನ್ನಡಕ್ಕೆ 101 ಅಂಗಳನ್ನು ಗಳಿಸಿದ್ದಾರೆ. ಉಳಿದ ವಿಷಯಗಳಲ್ಲೂ ತಕ್ಕ ಮಟ್ಟಿಗೆ ಸಾಧನೆ ಮಾಡಿದ್ದಾರೆ. ಆದರೆ, ಸೆಕೆಂಡ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಕ್ಕೆ ಜಗ್ಗೇಶ್ ಅವರ ತಂದೆ ಬೂಟಿನಿಂದ ಹೊಡೆದಿದ್ದರಂತೆ, ಇದರಿಂದ ಬೇಸರಗೊಂಡು ಅವಮಾನ ಸಹಿಸಲಾಗದೇ ಜಗ್ಗೇಶ್ ಆತ್ಮಹತ್ಯೆಗೆ ಮುಂದಾಗಿದ್ದೆ ಎಂದು ರಿವಿಲ್ ಮಾಡಿದ್ದಾರೆ.
ಆದರೆ ಅದೃಷ್ಟವಶಾತ್ ಹೇಗೋ ಪ್ರಾಣಾಪಾಯದಿಂದ ಪಾರಾದ ಜಗ್ಗೇಶ್, ಅಂದು ಅನಾಹುತ ಸಂಭವಿಸಿದ್ದರೆ ಇಂದು ಜಗ್ಗೇಶ್ ಇರುತ್ತಿರಲಿಲ್ಲ ಎಂಬ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜಗ್ಗೇಶ್ ಅವರು ತಮ್ಮ ಎಸ್‌ಎಸ್‌ಎಲ್ಸಿ ಮಾರ್ಕ್ಸ್ ಕಾರ್ಡ್ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಂದು ಅವರು ಅನುಭವಿಸಿದ ಕಷ್ಟವನ್ನು ಅಕ್ಷರಗಳ ಮೂಲಕ ತೋಡಿಕೊಂಡಿದ್ದಾರೆ.