ಬೆಂಗಳೂರು: ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಏಳು ವರ್ಷಗಳ ವಿಚಾರಣೆಯ ಬಳಿಕ ಮರಣದಂಡನೆ ಶಿಕ್ಷೆ ಖಾಯಂ ಆಗಿದೆ. ದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲಿ ಇದೇ ತಿಂಗಳ 20ನೇ ತಾರೀಖಿನಂದು ಬೆಳಿಗ್ಗೆ ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸಲು ಸುಪ್ರೀಂ ಕೋರ್ಟ್ ಡೆತ್ ವಾರಂಟ್ ಸಹ ಹೊರಡಿಸಿದೆ.
ಈ ನಾಲ್ವರನ್ನು ಗಲ್ಲಿಗೇರಿಸುವ ವಧಾಕಾರ ತಿಹಾರ್ ಜೈಲಿನಲ್ಲಿ ಇಲ್ಲದೇ ಇರುವ ಕಾರಣಕ್ಕೆ ಪೊಲೀಸರು ಉತ್ತರಪ್ರದೇಶದಿಂದ ವಧಾಕಾರನನ್ನು ಈ ಕೆಲಸಕ್ಕೆ ನಿಯೋಜಿಸಿದ್ದಾರೆ. ಪವನ್ ಜಲ್ಲಾದ್ ಎಂಬ ವಧಾಕಾರ ಈ ಪಾಪಿಗಳನ್ನು ಗಲ್ಲಿಗೇರಿಸುವ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ವಿಪರ್ಯಾಸವೆಂದರೆ ಕಡುಬಡತನದಲ್ಲಿ ಬದುಕುತ್ತಿರುವ ಪವನ್ ಜಲ್ಲಾದ್ ಈ ಕೆಲಸದಿಂದ ತನಗೆ ಸಿಗುವ ಹಣದಲ್ಲಿ ತನ್ನ ಮಗಳ ಮದುವೆಯನ್ನು ನೆರವೇರಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.
ಈ ವಿಷಯವನ್ನು ತಿಳಿದ ನವರಸ ನಾಯಕ ಜಗ್ಗೇಶ್ ಅವರು ಪವನ್ ಜಲ್ಲಾದ್ ಅವರಿಗೆ ತಮ್ಮ ಪರವಾಗಿ ಒಂದು ಲಕ್ಷ ರೂಪಾಯಿಗಳ ಕೊಡುಗೆಯನ್ನು ಘೋಷಿಸಿದ್ದಾರೆ. ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಈ ವಿಚಾರವನ್ನು ಬರೆದುಕೊಂಡಿರುವ ಜಗ್ಗೇಶ್ ಅವರು ಹೀಗೆ ಬರೆದುಕೊಂಡಿದ್ದಾರೆ.
‘ಮಾನ್ಯರೆ ರಾಕ್ಷಸ ಸಂಹಾರ ದೇವರ ನಿಯಮ! ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ! ನೀವೆ ಆ ಪಾಪಿಗಳ ನೇಣಿಗೇರಿಸಿದರೆ ನಾನು ಕಲೆಯಿಂದ ದುಡಿದ 1ಲಕ್ಷ ರೂ ನಿಮಗೆ ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ! ಇಂದೆ ಆ ಹಣ ನಿಮಗಾಗಿ ಮೀಸಲಿಟ್ಟೆ! ದುರುಳ ನಿಗ್ರಹ ದೇವರ ಸೇವೆ! ಹರಿಓಂ…’