ಬೆಂಗಳೂರು; ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕರೆಗೆ ಓಗೊಟ್ಟ ಅವರ ಅಭಿಮಾನಿಗಳು ಹಾಗೂ ಆಪ್ತರು ಸಂಗ್ರಹಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ.
ಲಾಕ್ ಡೌನ್ ಪರಿಣಾಮ ಪ್ರವಾಸಿಗರಿಲ್ಲದೆ ರಾಜ್ಯದಲ್ಲಿರುವ 9 ಪ್ರಾಣಿ ಸಂಗ್ರಹಾಲಯಗಳಿಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದರಿಂದ ಸಂಗ್ರಹಾಲಯದಲ್ಲಿರುವ ಪ್ರಾಣಿಗಳ ಆಹಾರಕ್ಕೂ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಮನಗಂಡ ದರ್ಶನ್ ಅವರು ನೆರವಿಗೆ ಧಾವಿಸಿದ್ದಾರೆ.
ನಿನ್ನೆ ( ಜೂ.5) ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾತನಾಡಿದ್ದ ದರ್ಶನ್, ಝೂನಲ್ಲಿರುವ ನಿಮಗೆ ಇಷ್ಟವಾದ ಪ್ರಾಣಿಗಳನ್ನು ದತ್ತು ಪಡೆದು ಸಹಕಾರ ಮಾಡಿ ಎಂದು ಕರೆ ನೀಡಿದ್ದರು. ಇದೀಗ ದರ್ಶನ್ ಅವರ ಕರೆಗೆ ನೂರಾರು ಜನರು ಸ್ಪಂದಿಸಿದ್ದಾರೆ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ” ದರ್ಶನ್ ” ಎಂಬ ಹೆಸರಿನ ಸಿಂಹವನ್ನು ನಿರ್ಮಾಪಕರಾದ ಶೈಲಜಾ ನಾಗ್ ಅವರು ದತ್ತು ಪಡೆದಿದ್ದಾರೆ. ಇವರಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ದರ್ಶನ್ ಅಭಿಮಾನಿಗಳ ಸಂಘಗಳೂ ಕೂಡ ಪ್ರಾಣಿಗಳನ್ನು ದತ್ತು ಪಡೆಯಲು ಮುಗಿ ಬಿದ್ದಿದ್ದಾರೆ.
ಇನ್ನು ತಮ್ಮ ಮಾತಿಗೆ ಸ್ಪಂದಿಸಿ, ಪ್ರಾಣಿ ಸಂಗ್ರಹಾಲಯಗಳ ಕಷ್ಟಕ್ಕೆ ಸ್ಪಂದಿಸಿರುವ ತಮ್ಮ ಅಭಿಮಾನಿಗಳಿಗೆ, ಆಪ್ತರಿಗೆ ದರ್ಶನ್ ಅವರು ತಮ್ಮ ಟ್ವಿಟರ್ ಖಾತೆಗಳ ಮೂಲಕ ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ.