ಬೆಂಗಳೂರು : ಕನ್ನಡ ನಾಡು-ನುಡಿಯನ್ನು ಅವಮಾನಿಸುವ ಘಟನೆಗಳು ನಡೆದಾಗ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಹೌದು. ಆದರೆ ಯಾವ ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂಬುದೇ ಯಕ್ಷಪ್ರಶ್ನೆ!
ಇತ್ತೀಚೆಗೆ ಗೂಗಲ್ ಮತ್ತು ಅಮೆಜಾನ್ ಕನ್ನಡ ಭಾಷೆ, ಕನ್ನಡದ ಧ್ವಜ ಮತ್ತು ರಾಜ್ಯ ಸರಕಾರದ ಲಾಂಛನಕ್ಕೆ ಅಗೌರವ ತೋರಿದಾಗ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳುವುದಾಗಿ ಸರಕಾರ ಭರವಸೆ ನೀಡಿತು. ಕನ್ನಡಿಗರ ಭಾವನಾತ್ಮಕ ಪ್ರತಿರೋಧಕ್ಕೆ ಮಣಿದ ಗೂಗಲ್, ಅಮೆಜಾನ್ ತಪ್ಪು ತಿದ್ದಿಕೊಂಡವು.
ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವುದರ ಸಹಿತ ಕನ್ನಡ ಮತ್ತು ಕನ್ನಡಿಗರಿಗೆ ಆಗುವ ಅನ್ಯಾಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈವರೆಗೆ 300ಕ್ಕೂ ಹೆಚ್ಚು ಆದೇಶಗಳು ಹೊರ ಬಿದ್ದಿವೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಇದೆ. ಹಿಂದೆ ಕನ್ನಡ ಕಾವಲು ಸಮಿತಿ ಇತ್ತು, ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ. ನಾಲ್ಕು ಸಾವಿರ ಪುಟಗಳ ಡಿ.ಎಂ. ನಂಜುಂಡಪ್ಪ ವರದಿ ಇದೆ. 800 ಪುಟಗಳ ಮಹಾಜನ್ ವರದಿ ಇದೆ. ಕಾಲಕಾಲಕ್ಕೆ ಹತ್ತಾರು ಸಮಿತಿಗಳನ್ನು ರಚಿಸಲಾಗಿತ್ತು. ನೂರಾರು ಕನ್ನಡಪರ ಸಂಘಟನೆಗಳು ಸಕ್ರಿಯವಾಗಿವೆ. ಆದರೆ ಭಾಷೆಯನ್ನು ಅವಮಾನ, ಅಗೌರವಗಳಿಂದ ರಕ್ಷಿಸುವ ಪ್ರಬಲ ಕಾನೂನು ಇಲ್ಲ.
ಇಂತಹ ಪ್ರಸಂಗ ಎದುರಾದಾಗ ಮಾಹಿತಿ ತಂತ್ರಜ್ಞಾನ ಕಾಯ್ದೆಗಳಲ್ಲಿ ಮತ್ತು ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಕಾಯ್ದೆಯಲ್ಲಿ ಯಾವೆಲ್ಲ ಅವಕಾಶಗಳಿವೆ ಎಂದು ಪರಿಶೀಲಿಸಬೇಕು.
– ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ವ್ಯಕ್ತಿಗಳು ಭಾಷೆಗೆ ಅವಮಾನ ಮಾಡಿದಾಗ ಐಪಿಸಿ ಸೆಕ್ಷನ್ 507ರಡಿ ಪ್ರಕರಣ ದಾಖಲಿಸಬಹುದು. ಆದರೆ ಅದು ಕೋರ್ಟ್‌ನಲ್ಲಿ ನಿಲ್ಲುವ ಸಾಧ್ಯತೆ ಕಡಿಮೆ.
– ಕೆ.ವಿ. ಧನಂಜಯ, ಸುಪ್ರೀಂ ಕೋರ್ಟ್ ವಕೀಲ