Advertisement

ಬೈರನ ಹಾಡು-ಪಾಡು 

12:30 AM Mar 01, 2019 | |

ವಯೋವೃದ್ಧ  ತಂದೆ-ತಾಯಿಯರನ್ನು, ಹಿರಿಯರನ್ನು ಸಮಾಜದಲ್ಲಿ ಎಲ್ಲರೂ ಗೌರವಯುತವಾಗಿ ನೋಡಿಕೊಳ್ಳಬೇಕು. ಇಳಿವಯಸ್ಸಿನವರು ಅಗಲುವ ಮುನ್ನ ಮಕ್ಕಳಾದವರು ಅವರ ಆಸೆ-ಆಕಾಂಕ್ಷೆಗಳನ್ನು  ಈಡೇರಿಸಬೇಕು. ಬದುಕಿದ್ದಾಗ ನೋಯಿಸಿ, ನರಕ ತೋರಿಸಿ, ಸತ್ತ ನಂತರ ಸ್ವರ್ಗ ಸೇರಲಿ ಎಂದು ಅವರಿಷ್ಟದ ವಸ್ತುಗಳನ್ನು ಇಟ್ಟು ತಿಥಿ, ಶ್ರಾದ್ಧಗಳನ್ನು ಮಾಡಿದರೇನು ಪ್ರಯೋಜನ? ಇದೇ ವಿಷಯವನ್ನು ಇಟ್ಟುಕೊಂಡು “ಇಂತಿ ನಿಮ್ಮ ಪ್ರೀತಿಯ ಬೈರಾ’ ಎನ್ನುವ ಹೆಸರಿನಲ್ಲಿ, ಸಂದೇಶವನ್ನು ಹೊತ್ತ ಚಿತ್ರವೊಂದು ತೆರೆಗೆ ಬರುತ್ತಿದೆ. 

Advertisement

ಬಹುತೇಕ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರದಲ್ಲಿ ಹಳ್ಳಿಯ ಬದುಕು, ರೈತಾಪಿ ವರ್ಗದ ಬದುಕು, ಬವಣೆಗಳನ್ನು ದೃಶ್ಯ ರೂಪದಲ್ಲಿ ತೆರೆಮೇಲೆ ತರಲಾಗುತ್ತಿದೆ. ಕನಕಪುರದ ಹಳ್ಳಿಯೊಂದರ ಒಂದಷ್ಟು ಯುವಕರು ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಅದೇ ಹಳ್ಳಿಯ ಆರ್ಯನ್‌ ವೆಂಕಟೇಶ್‌ ಎನ್ನುವ ಹಳ್ಳಿ ಹೈದ ನಾಯಕನಾಗಿ ಅಭಿನಯಿಸಿದ್ದಾರೆ. 

ಇತ್ತೀಚೆಗೆ ನಡೆದ ಸಮಾರಂಭದಲ್ಲಿ “ಇಂತಿ ನಿಮ್ಮ ಬೈರಾ’ ಚಿತ್ರದ ಆಡಿಯೋ ಹೊರಬಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ಶಿಲ್ಪಾ ಶ್ರೀನಿವಾಸ್‌, ಬಾ.ಮಾ ಗಿರೀಶ್‌ ಮೊದಲಾದವರು ಹಾಜರಿದ್ದು ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.  ಇದೇ ವೇಳೆ ಮಾತನಾಡಿದ ಚಿತ್ರತಂಡ, “ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌ ಮಗ ಪಂಕಜ್‌ಗಾಗಿಯೇ ಈ ಕಥೆಯನ್ನು ಬರೆಯಲಾಗಿತ್ತು.  ಅವರನ್ನು ಭೇಟಿ ಮಾಡಿ ಕಥೆ ಹೇಳಿದಾಗ, ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಹಲವು ನಿರ್ಮಾಪಕರಿಗೆ ಕಥೆ ಹೇಳಿದರೂ, ಯಾರೂ ಚಿತ್ರವನ್ನು ಮಾಡುವುದರ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಹಿರಿಯ ನಟ, ನಿರ್ದೇಶಕ ಕಾಶೀನಾಥ್‌ ಬಳಿ ಹೋದಾಗಲೂ ಚಿತ್ರರಂಗಕ್ಕೆ ಬರುವ ಬದಲು ಇದಕ್ಕೆ ಹೂಡುವ ಹಣವನ್ನು ವ್ಯವಸಾಯಕ್ಕೆ  ಬಳಸಿಕೋ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ ಚಿತ್ರವನ್ನು ಮಾಡಲೇ ಬೇಕು ಎನ್ನುವ ಛಲ ಬಲವಾಗಿ ಇದ್ದಿದ್ದರಿಂದ ಕೊನೆಗೆ ಒಂದಷ್ಟು ಸಮಾನ ಮನಸ್ಕರು ಒಟ್ಟಾಗಿ ಸೇರಿ “ಇಂತಿ ನಿಮ್ಮ ಬೈರಾ’ ಚಿತ್ರವನ್ನು ನಿರ್ಮಿಸಿದ್ದೇವೆ’ ಎಂದಿದೆ. 

“ಇಂತಿ ನಿಮ್ಮ ಬೈರಾ’ ಚಿತ್ರದಲ್ಲಿ  ನಾಯಕ ಆರ್ಯನ್‌ ವೆಂಕಟೇಶ್‌ಗೆ ನಾಯಕಿಯಾಗಿ ಪ್ರಗತಿ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಪ್ರಗತಿ ಅವರದ್ದು, ಘಾಟಿ ಸ್ವಭಾವದ ಹಳ್ಳಿ ಹುಡುಗಿಯ ಪಾತ್ರವಂತೆ. “ಅಪ್ಪನ ಮುದ್ದಿನ  ಮಗಳು. ಹತ್ತನೆ ತರಗತಿ ಓದುವಾಗ ಪ್ರೇಮದಲ್ಲಿ ಸಿಲುಕಿಕೊಂಡು ಅದರಲ್ಲಿ ಒದ್ದಾಡಿ, ಮುಂದೇನು ಎಂದು ಕೊರಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಪ್ರಗತಿ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಉಳಿದಂತೆ ಚಿತ್ರದಲ್ಲಿ ಗಿರೀಶ್‌ ಜಟ್ಟಿ, ಸುನೇಂದ್ರ ಪಂಡಿತ್‌, ಅಪೂರ್ವ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

ಚಿತ್ರದ ಹಾಡುಗಳಿಗೆ ಎಸ್‌. ನಾಗು ಸಂಗೀತ ಸಂಯೋಜನೆಯಿದು, ಡಾ. ವಿ ನಾಗೇಂದ್ರ ಪ್ರಸಾದ್‌, ಕವಿರಾಜ್‌ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರದ ದೃಶ್ಯಗಳನ್ನು ಸಂತೋಷ್‌ ಪಾಂಡಿಯನ್‌ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಕಿರಣ್‌ ಕುಮಾರ್‌. ಜಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರವನ್ನು ಕೆ.ಜೆ ಚಿಕ್ಕು  ನಿರ್ದೇಶನ ಮಾಡಿದ್ದಾರೆ.  ಸದ್ಯ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆ ಮತ್ತು ಟ್ರೇಲರ್‌ ಮೂಲಕ ಹೊರಬಂದಿರುವ “ಇಂತಿ ನಿಮ್ಮ ಬೈರಾ’ ಮುಂದಿನ ಏಪ್ರಿಲ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. 

Advertisement

ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next