Advertisement

ಕಾಂಜೀವರಂ ಸೀರೆಗಳು

10:21 PM Aug 22, 2019 | mahesh |

ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಗೆ ಅಧಿಕ ಮಹತ್ವ ನೀಡುವ ರಾಜ್ಯಗಳಲ್ಲಿ ತಮಿಳುನಾಡು ಒಂದು. ಮಹಿಳೆಯರು ಉಡುವ ಸಾಂಪ್ರದಾಯಿಕ ಸೀರೆ ಹಾಗೂ ಕುಪ್ಪಸ ಸೀರೆ ಉಡುವ ವಿಧಾನಕ್ಕೆ “ಪವಡಾ’ ಎಂದು ಕರೆಯುತ್ತಾರೆ. ತಮಿಳುನಾಡಿನ ಸೀರೆಗಳು ಹತ್ತಿ, ರೇಶ್ಮೆ ಹಾಗೂ ಇತರ ಮಿಶ್ರಿತ ಬಟ್ಟೆಗಳಲ್ಲಿ ಕಾಣಸಿಗುತ್ತವೆ.

Advertisement

ವಿಖ್ಯಾತವಾಗಿರುವ, ಪ್ರಸಿದ್ಧ ಕಾಂಜೀವರಂ ಸೀರೆಯ ಹುಟ್ಟು ತಮಿಳುನಾಡಿನಲ್ಲಿ ಉಂಟಾಗಿದ್ದು, ಭಾರತದ ಎಲ್ಲೆಡೆ ಹಾಗೂ ವಿಶ್ವದ ಹಲವೆಡೆ ಪ್ರಸಿದ್ಧಿ ಪಡೆದುಕೊಂಡಿರುವುದು ಒಂದು ದಂತಕತೆ!

ಪಾವಡಾ ಸೀರೆ ಉಡುವ ಶೈಲಿಯ ವೈಶಿಷ್ಟವೆಂದರೆ “ಹಾಫ್ ಸಾರಿ’ ಅಥವಾ ಅರ್ಧ ಸೀರೆಯಂತಹ ಸೀರೆ. ಅಂದರೆ ಉದ್ದದ ಲಂಗದಂತಹ ವಸ್ತ್ರಧರಿಸಿ ಅದರ ಮೇಲೆ ಕುಪ್ಪಸ ಹಾಗೂ “ಶಾಲ್‌’ ಧರಿಸುತ್ತಾರೆ. ಈ ಶಾಲ್‌ನಂಥ ಮೇಲ್‌ ಹೊದಿಕೆ “ದಾವಣಿ’ಯಂತಿರುತ್ತದೆ.

ಕಾಂಜೀವರಂ ಸೀರೆಗಳು ತಯಾರಾಗುವುದು “ಕಾಂಜೀಪುರಂ’ ಎಂಬ ಪ್ರದೇಶದಲ್ಲಿ. ಚರಿತ್ರೆಯಲ್ಲಿ ಕಾಂಜೀವರಂ ಸೀರೆಯ ನೇಯ್ಗೆಕಾರರು “ಮೃಕಂಡು’ ಮುನಿಯ ವಂಶಸ್ಥರೆಂದು ನಂಬಲಾಗುತ್ತದೆ. ಮೃಕಂಡು ಮುನಿಯು ದೇವದೇವತೆಗಳಿಗಾಗಿ ಗುಲಾಬಿದಳಗಳಿಂದ ಸೀರೆಯನ್ನು ನೇಯ್ದಿದ್ದರೆಂಬುದು ಐತಿಹ್ಯ!

ಕಾಂಜೀವರಂ ಸಿಲ್ಕ್ ಸೀರೆಗಳು ಶುದ್ಧ ಮಲ್‌ಬರಿ ರೇಶ್ಮೆ ನೂಲಿನಿಂದ ತಯಾರು ಮಾಡಲಾಗುತ್ತದೆ. ಇದಕ್ಕೆ ಬಳಸುವ ಜರಿ ಗುಜರಾತ್‌ನಿಂದ ತರಿಸಲಾಗುತ್ತದೆ. ಈ ಸೀರೆಯ ವೈಶಿಷ್ಟವೆಂದರೆ ಸೀರೆಯ “ಪಲ್ಲು’ ಅಥವಾ ಸೆರಗು ವೈಭವಯುತವಾಗಿ ತಯಾರು ಮಾಡಲಾಗುತ್ತದೆ. ಸೀರೆಯ ಅಂಚು ಸಹ ವೈವಿಧ್ಯಮಯವಾಗಿರುತ್ತದೆ. ಸೀರೆಯ ವಿನ್ಯಾಸ ಮೂಲತಃ ದಕ್ಷಿಣಭಾರತದ ದೇವಾಲಯಗಳ ಚಿತ್ತಾರದಿಂದ ನಿಸರ್ಗದ ಎಲೆ, ಹೂವು, ಹಕ್ಕಿ ಹಾಗೂ ಪ್ರಾಣಿಗಳ ಚಿತ್ತಾರದಿಂದ, ರಾಜಾ ರವಿವರ್ಮ ಅವರ ಶ್ರೇಷ್ಠ ಕಲಾಕೃತಿಗಳಾದ ರಾಮಾಯಣ ಮಹಾಭಾರತದ ಚಿತ್ತಾರಗಳಿಂದ ನೇಯಲಾಗುತ್ತದೆ.

Advertisement

ವಿಶೇಷ ಸಭೆ-ಸಮಾರಂಭ, ಮದುವೆ-ಮುಂಜಿಗಳಲ್ಲಿ ಇಂದಿಗೂ ಬನಾರಸ್‌ ಸೀರೆಯಂತೆ, ಕಾಂಜೀವರಂ ಸೀರೆಯು ಅಧಿಕವಾಗಿ ಬಳಸಲಾಗುತ್ತದೆ.

ಈ ಸೀರೆ ಭಾರೀ ತೂಕದಿಂದ ಕೂಡಿದ್ದರೂ, ದೀರ್ಘ‌ಕಾಲ ಬಾಳಿಕೆಗಾಗಿ ಪ್ರಸಿದ್ಧ. ಕಾಂಜೀವರಂ ಸೀರೆಯ ಪ್ರಾರಂಭಿಕ ಶಾಸ್ತ್ರೀಯ ವಿಧಾನದ ಸೀರೆಯ ನೇಯ್ಗೆಗೆ “ಕಾಂಚೀಪಟ್ಟು’ ಸೀರೆ ಎನ್ನಲಾಗುತ್ತದೆ. ಕಾಂಜೀಪುರಂ ಸೀರೆಯ ಹುಟ್ಟು 400 ವರ್ಷಗಳ ಹಿಂದೆಯೇ ಆಗಿದ್ದು, ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯನ ಆಡಳಿತ ಕಾಲದಲ್ಲಿ ಬಹಳ ಪ್ರಸಿದ್ಧಿ ಪಡೆಯಿತು. ಈ ಸೀರೆಯ ಅಂಚು (ಬಾರ್ಡರ್‌) ತಯಾರಿಯಲ್ಲಿಯೂ ವಿಶೇಷವಿದೆ! ಅದರಲ್ಲಿ ಝಿಗ್‌ಝಾಗ್‌ ವಿನ್ಯಾಸವನ್ನು ಕಾಣಬಹುದು! ಸೀರೆಯನ್ನು ತಯಾರಿಸುವಾಗ ಸೀರೆಯ ಮೈಯ ಭಾಗದ ವಸ್ತ್ರ ಹಾಗೂ ಸೆರಗಿನ ಭಾಗದ ವಸ್ತ್ರ ಹಾಗೂ ಜರಿಯ (ಅಂಚಿನ) ಭಾಗದ ವಸ್ತ್ರವನ್ನು ಬೇರೆ ಬೇರೆಯಾಗಿ ನೇಯ್ದು, ತದನಂತರ ಜೋಡಿಸಲಾಗುತ್ತದೆ.

ಕಾಂಜೀವರಂ ಸೀರೆಯು ಭೌಗೋಳಿಕ ಸೂಚನೆ ಅಥವಾ ಎ.ಐ. (Geographical indication)) ಪಡೆದ ಭಾರತದ ಕೆಲವು ಮಹತ್ವಗಳಲ್ಲಿ ಒಂದಾಗಿದೆ.

ಕಾಂಜೀವರಂ ಸೀರೆಯು ಹೆಚ್ಚಿನ ಎಲ್ಲಾ ಗಾಢ ರಂಗುಗಳಲ್ಲಿ ಲಭ್ಯವಿದ್ದು ಪಿರಮಿಡ್‌ ಆಕೃತಿಯ ವಿನ್ಯಾಸ, ಚೌಕಾಕಾರದ ವಿನ್ಯಾಸ, ಹೂವಿನ ಹಾಗೂ ಚುಕ್ಕಿ (ಬುಟ್ಟಾ) ವಿನ್ಯಾಸಗಳು ಹೆಚ್ಚು ಜನಪ್ರಿಯ.

ಸಾಂಪ್ರದಾಯಿಕ ಕಾಂಜೀವರಂ ಸೀರೆ 9 ಯಾರ್ಡ್‌ನ ಉದ್ದ ಹೊಂದಿರುತ್ತದೆ. ಬಂಗಾರದ ಹಾಗೂ ಬೆಳ್ಳಿಯ ಜರಿಗಳು ದುಬಾರಿ ಬೆಲೆಯುಳ್ಳದ್ದಾದ್ದರಿಂದ ಇಂದು ಇತರ ತಾಮ್ರದ ಹಾಗೂ ಇತರ ಲೋಹಗಳ ಎಳೆಗಳಿಂದ ತಯಾರಿಸಿದ ಜರಿಯನ್ನು ಬಳಸಲಾಗುತ್ತದೆ. ಇಂದು ವೈವಿಧ್ಯಮಯ ಕಾಂಜೀವರಂ ಸೀರೆಗಳು ಲಭ್ಯವಿದ್ದು, ದುಬಾರಿ ಬೆಲೆಯಿಂದ ಆರಂಭವಾಗಿ ಸಾಮಾನ್ಯ ಬೆಲೆಯವರೆಗೆ ಲಭ್ಯವಾಗುತ್ತಿದೆ. ಕಾಂಜೀಪುರಂನಲ್ಲಿ ಐದು ಸಾವಿರ ಕುಟುಂಬಗಳು ಈ ಸೀರೆಯ ತಯಾರಿ (ನೇಯ್ಗೆ)ಯಲ್ಲಿ ತೊಡಗಿಕೊಂಡಿವೆ. ಬೇಡಿಕೆಯು ಎಲ್ಲೆಡೆ ಹೆಚ್ಚುತ್ತಲೇ ಇದೆ.

ತಮಿಳು ಸಿನೆಮಾ “ಕಾಂಜೀವರಂ’ನ್ನು 2008ರಲ್ಲಿ ಪ್ರದರ್ಶಿಸಲಾಗಿತ್ತು. ಈ ಸಿನೆಮಾದಲ್ಲಿ ಕಾಂಜೀವರಂ ಸೀರೆಯ ಇತಿಹಾಸ, ಬೆಳವಣಿಗೆ ಹಾಗೂ ನೇಯ್ಗೆಕಾರರ ಜೀವನದ ಮೇಲೆ ಬೆಳಕು ಚೆಲ್ಲಲಾಗಿದೆ.

ಇಂದಿನ ಆಧುನಿಕ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಲಾದ ಕಾಂಜೀವರಂ ಸೀರೆಗಳಿಗೆ ಇಮಿಟೇಶನ್‌ ಬಾರ್ಡರ್‌ (ಕೃತಕ ಜರಿಯನ್ನು) ಅಳವಡಿಸಲಾಗುತ್ತಿದೆ. ನಿತ್ಯದ ಬಳಕೆಗೆ ಹಾಗೂ ಆಧುನಿಕ ಶೈಲಿಯಲ್ಲಿ ಧರಿಸುವಂತೆಯೂ ತಯಾರಿಸಲಾಗುತ್ತಿದೆ.

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next