Advertisement

ಆಗಬೇಕಿದೆ ಕಾಂಞಂಗಾಡ್‌- ಕಾಣಿಯೂರು ರೈಲು ಮಾರ್ಗ

10:08 AM May 26, 2019 | Naveen |

ಕಾಣಿಯೂರು: ಉಡುಪಿಯ ಅಷ್ಟಮಠಗಳಲ್ಲೊಂದಾದ ಕಾಣಿಯೂರು ಮಠದ ಮೂಲ ಮಠವಿರುವ ಕಾಣಿಯೂರಿನಲ್ಲಿ ಮಂಗಳೂರು-ಹಾಸನ ರೈಲು ಮಾರ್ಗ ನಿರ್ಮಾಣದ ಸಂದರ್ಭ ಬ್ರೇಕ್‌ಹಾಲ್r ರೈಲ್ವೇ ನಿಲ್ದಾಣವನ್ನು ನಿರ್ಮಾಣ ಮಾಡಲಾಯಿತು. ಈಗಲೂ ಬ್ರೇಕ್‌ಹಾಲ್r ನಿಲ್ದಾಣವಾಗಿಯೇ ಕಾಣಿಯೂರು ರೈಲು ನಿಲ್ದಾಣವಿದೆ.

Advertisement

ಹೊಸ ಮಾರ್ಗ
ಕಾಣಿಯೂರು ರೈಲು ನಿಲ್ದಾಣವು ರೈಲ್ವೇ ಸಂಪರ್ಕ ವ್ಯವಸ್ಥೆಯಲ್ಲಿ ಅಭಿವೃದ್ಧಿ ಹೊಂದಲು ಇರುವ ಏಕೈಕ ಮಾರ್ಗವೆಂದರೆ ಕಾಂಞಂಗಾಡ್‌-ಕಾಣಿಯೂರು ಹೊಸ ರೈಲು ಮಾರ್ಗ ರಚನೆ. ಈ ರೈಲು ಮಾರ್ಗ ರಚನೆಯಾದರೆ ಕಾಣಿಯೂರು ಹೊಸ ರೈಲ್ವೇ ಜಂಕ್ಷನ್‌ ಆಗುತ್ತದೆ. ಮಂಗಳೂರು-ಹಾಸನ ಮತ್ತು ಕಾಞಂಗಾಡ್‌-ಕಾಣಿಯೂರು ರೈಲು ಮಾರ್ಗವು ಇಲ್ಲಿ ಸಂಧಿಸುತ್ತದೆ. ಉದ್ದೇಶಿತ ರೈಲು ಮಾರ್ಗದ ಯೋಜನೆಗಾಗಿ ಕಾಣಿಯೂರಿನ ಏಲಡ್ಕದಲ್ಲಿ ರೈಲ್ವೇ ಇಲಾಖೆಯು ಈಗಾಗಲೇ ನಿವೇಶನವನ್ನು ಗುರುತಿಸಿದೆ. ಕಾಣಿಯೂರು ರೈಲು ನಿಲ್ದಾಣವು ಈಗ ಇರುವ ಸ್ಥಳದಿಂದ ಎರಡು ಕಿ.ಮೀ. ಮುಂದಕ್ಕೆ ರಚನೆಯಾಗುವ ಕಾಣಿಯೂರು ಜಂಕ್ಷನ್‌ಗೆ ಸ್ಥಳಾಂತರಗೊಳ್ಳುತ್ತದೆ.

ಈಗಿನ ಸ್ಥಿತಿ
ಕಾಣಿಯೂರು ಬ್ರೇಕ್‌ಹಾಲ್r ರೈಲು ನಿಲ್ದಾಣವು ಕಾಣಿಯೂರು ಪೇಟೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಕಮಿಷನ್‌ ಏಜೆಂಟ್ ಇರುವ ನಿಲ್ದಾಣವಾಗಿದೆ. ರೈಲು ಬಳಕೆದಾರರ ಸಂಖ್ಯೆಯೂ ಇದೆ. ಈ ಹಿಂದೆ ದೂರ ಪ್ರಯಾಣದ ರೈಲುಗಳು ಕಾಣಿಯೂರಿನಲ್ಲಿ ನಿಲುಗಡೆಗೊಳ್ಳುತ್ತಿದ್ದವು. ಗೇಜ್‌ ಪರಿವರ್ತನೆಯ ಬಳಿಕ ಕಾಣಿಯೂರು ಬ್ರೇಕ್‌ಹಾಲ್r ನಿಲ್ದಾಣದಲ್ಲಿ ಮಂಗಳೂರು -ಸುಬ್ರಹ್ಮಣ್ಯ ರಸ್ತೆ ಲೋಕಲ್ ರೈಲು ಮಾತ್ರ ನಿಲುಗಡೆಗೊಳ್ಳುತ್ತದೆ.

5 ವರ್ಷಕ್ಕೊಮ್ಮೆ ಸಮಸ್ಯೆ
ಕಾಣಿಯೂರು ರೈಲ್ವೇ ನಿಲ್ದಾಣದಲ್ಲಿ ಕಮಿಷನ್‌ ಏಜೆಂಟ್ ನೆಲೆಯಲ್ಲಿ 5 ವರ್ಷಗಳ ಅವಧಿಗೆ ರೈಲ್ವೇ ಏಜೆಂಟರನ್ನು ನೇಮಕಗೊಳಿಸಲಾಗುತ್ತದೆ. ಪ್ರತಿ ಬಾರಿಯೂ 5 ವರ್ಷಗಳ ಬಳಿಕ ಏಜೆಂಟ್ ನೇಮಕ ವಿಳಂಬವಾಗುತ್ತಿದ್ದು, ಈ ಕಾರಣದಿಂದ ಕಾಣಿಯೂರಿನಲ್ಲಿ ಲೋಕಲ್ ರೈಲು ನಿಂತರೂ ಪ್ರಯಾಣಿಕರು ಟಿಕೆಟ್ ಖರೀದಿಸಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೊಸ ಏಜೆಂಟರ ಅಥವಾ ಹಳೆ ಏಜೆಂಟರನ್ನೇ ಮುಂದುವರಿಸುವ ಪ್ರಕ್ರಿಯೆ ಮುಗಿಯುವವರೆಗೆ ಕಾಣಿಯೂರಿನವರು ಮಂಗಳೂರಿಗೆ ತೆರಳುವುದಾದರೆ ನರಿಮೊಗರು ರೈಲ್ವೇ ನಿಲ್ದಾಣದಲ್ಲಿ ಇಳಿದು ಟಿಕೆಟ್ ಮಾಡಿ ಮತ್ತೆ ಪ್ರಯಾಣ ಮುಂದುವರಿಸ ಬೇಕಾಗುತ್ತದೆ. ಅದೇ ರೀತಿ ಸುಬ್ರಹ್ಮಣ್ಯ ರಸ್ತೆ ಕಡೆಗೆ ತೆರಳುವುದಾದರೆ ಎಡಮಂಗಲ ರೈಲ್ವೇ ನಿಲ್ದಾಣದಲ್ಲಿ ಇಳಿದು ಟಿಕೆಟ್ ಖರೀದಿಸಿ ಪ್ರಯಾಣ ಮುಂದುವರಿಸಬೇಕಾಗುತ್ತದೆ.

ನನೆಗುದಿಗೆ ಬಿದ್ದ ಯೋಜನೆ
ಕಾಣಿಯೂರು-ಕಾಂಞಂಗಾಡ್‌ ಹೊಸ ರೈಲುಮಾರ್ಗ ಯೋಜನೆಯು ದಶಕಗಳಿಂದ ನನೆಗುದಿಗೆ ಬಿದ್ದಿದೆ. ಕೇರಳ ಭಾಗದಿಂದ ಈ ಯೋಜನೆಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಯಾಕೆಂದರೆ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕದ ಹಾಸನ, ಬೆಂಗಳೂರು ನಗರಗಳನ್ನು ಸಂಪರ್ಕಿಸಲು ಇದು ಹತ್ತಿರದ ರೈಲು ಮಾರ್ಗವಾಗಿದೆ. ಕರ್ನಾಟಕ ಭಾಗದಲ್ಲಿ ಈ ಯೋಜನೆಗೆ ಹೆಚ್ಚಿನ ಆಸಕ್ತಿ ವ್ಯಕ್ತವಾಗುತ್ತಿಲ್ಲ. ಈ ರೈಲು ಮಾರ್ಗ ರಚನೆಯಾದರೆ ಸುಳ್ಯದ ಮೂಲಕ ರೈಲು ಮಾರ್ಗ ಹಾದು ಹೋಗುತ್ತದೆ. ಡಿ.ವಿ. ಸದಾನಂದ ಗೌಡರು ಕೇಂದ್ರ ರೈಲ್ವೇ ಸಚಿವರಾಗಿದ್ದಾಗ ಈ ಯೋಜನೆಯ ಸರ್ವೇ ನಡೆಸಲು ಅನುದಾನ ಮಂಜೂರು ಮಾಡಿದ್ದರು. ಮುಂದೆ ಏನಾಗಿದೆ ಎಂದು ಯಾರಿಗೂ ಗೊತ್ತಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next