Advertisement

ಕಾಣಿಯೂರು ಸೇತುವೆಯಿಂದ ಹೊಳೆಗೆ ಬಿದ್ದ ಕಾರು ; ಯುವಕರ ಪತ್ತೆಯೇ ಇಲ್ಲ

09:45 PM Jul 11, 2022 | Team Udayavani |

ಕಾಣಿಯೂರು : ಮಂಜೇಶ್ವರ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿಯ ಬಳಿಯಿರುವ ಸೇತುವೆಗೆ ಢಿಕ್ಕಿ ಹೊಡೆದು ಕಾರೊಂದು ಹೊಳೆಗೆ ಬಿದ್ದು, ಕಾರಿನಲ್ಲಿದ್ದ ಯುವಕರಿಬ್ಬರು ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಯುವಕರ ಪತ್ತೆಗಾಗಿ ಶೋಧ ಕಾರ್ಯಚರಣೆ ಜು. 11ರಂದು ಮುಂದುವರಿದರೂ ಕೂಡ ಕಣ್ಮರೆಯಾಗಿರುವ ಯುವಕರಿಬ್ಬರ ಸುಳಿವು ಪತ್ತೆಯಾಗಿಲ್ಲ. ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೂ ಶೋಧ ಕಾರ್ಯಚರಣೆ ನಡೆಯಿತು.

Advertisement

ಬೈತಡ್ಕ ಹೊಳೆಯಲ್ಲಿ ಹಾಗೂ ಕುಮಾರಾಧಾರ ನದಿಯ ಭಾಗ ಕಾಪೆಜಾಲು ಎಂಬಲ್ಲಿ ಶೋಧ ಕಾರ್ಯ ಮಾಡಲಾಯಿತು. ಯುವಕರು ನೀರು ಪಾಲಾಗಿರಬಹುದು ಎನ್ನುವ ಶಂಕೆಯಲ್ಲಿ ನೀರಿನಲ್ಲಿ ರವಿವಾರದಿಂದ ಹುಡುಕಾಟ ನಡೆಸಲಾಗುತ್ತಿದೆ. ಕಾರು ಪತ್ತೆಯಾದರೂ ಕಾರಿನಲ್ಲಿ ಇದ್ದವರು ಪತ್ತೆಯಾಗಿಲ್ಲ. ಕಣ್ಮರೆಯಾಗಿರುವ ಯುವಕರಿಗಾಗಿ ಎರಡನೇ ದಿನ ಸೋಮವಾರ ಸಂಜೆಯ ತನಕವೂ ಹೊಳೆ ನೀರಿನಲ್ಲಿ ಶೋಧ ನಡೆಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಅಗ್ನಿಶಾಮಕ ದಳದವರು ಹಾಗೂ ಗುತ್ತಿಗಾರು ವಿಪತ್ತು ನಿರ್ವಹಣ ಘಟಕದವರಿಗೆ ಸ್ಥಳೀಯರಾದ ಕೇಶವ ಗೌಡ ಬೈತಡ್ಕ, ಜಯಂತ್‌ ಅಣವುಮೂಲೆಯವರು ಸಾಥ್‌ ನೀಡಿದರು. ಜು. 12ರಂದು ಮತ್ತೆ ಶೋಧ ಕಾರ್ಯಾಚರಣೆ ನಡೆಯಲಿದೆ.

ಘಟನೆಯ ಹಿನ್ನೆಲೆ
ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಗೌರಿ ಹೊಳೆಗೆ ಕಾರೊಂದು ಬಿದ್ದು ಯುವಕರಿಬ್ಬರು ನಾಪತ್ತೆಯಾದ ಘಟನೆ ಜು. 9ರಂದು ತಡರಾತ್ರಿ ನಡೆದಿತ್ತು. ಬಂಟ್ವಾಳ ತಾಲೂಕಿನ ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್‌ (25) ಹಾಗೂ ವಿಟ್ಲ ಕನ್ಯಾನ ನಿವಾಸಿ ಧನುಷ್‌ (21) ಕಾರಿನಲ್ಲಿದ್ದರು ಎನ್ನಲಾಗಿದ್ದು, ಅವರು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ : ಜಡೆ ಗ್ರಾಮಕ್ಕೆ ಜಟಾಯುಪುರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯ

ಮಾಹಿತಿ ಪಡೆದ ಸಚಿವರು
ಕಾಣಿಯೂರು ಬೈತಡ್ಕದ ಘಟನ ಸ್ಥಳಕ್ಕೆ ಸಚಿವ ಎಸ್‌. ಅಂಗಾರ ಅವರು ಜು. 11ರಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು. ಈ ವೇಳೆ ಸಚಿವರು ಶೋಧ ಕಾರ್ಯವನ್ನು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೈತಡ್ಕ ಸೇತುವೆಗೆ ಭದ್ರವಾದ ತಡೆ ಬೇಲಿ ನಿರ್ಮಾಣ ಮಾಡುವಂತೆ ಸ್ಥಳೀಯರು ಸಚಿವರಿಗೆ ಮನವಿ ಮಾಡಿದರು. ಸಚಿವರಿಗೆ ಪುತ್ತೂರು ಸಹಯಕ ಆಯುಕ್ತ ಗಿರೀಶ್‌ ನಂದನ್‌ ಮಾಹಿತಿ ನೀಡಿದರು. ಈ ಸಂದರ್ಭ ಕಡಬ ತಹಶೀಲ್ದಾರ್‌ ಅನಂತ ಶಂಕರ, ಕಂದಾಯ ನಿರೀಕ್ಷಕ ಅವಿನ್‌ ರಂಗತ್ತಮಲೆ, ಬೆಳ್ಳಾರೆ ಠಾಣಾಧಿಕಾರಿ ರುಕ್ಮ ನಾಯ್ಕ, ಬಿಜೆಪಿ ಬೆಳಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್‌ ಉದನಡ್ಕ, ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಗ್ರಾ.ಪಂ. ಸದಸ್ಯರಾದ ಮೋಹನ್‌ ಅಗಳಿ, ಉಮೇಶ್ವರಿ ಅಗಳಿ, ಪಿಡಿಒ ನಾರಾಯಣ, ಗ್ರಾಮಕರಣಿಕ ಪುಷ್ಪರಾಜ್‌, ಕಾಣಿಯೂರು ಗ್ರಾ.ಪಂ.ಸದಸ್ಯರಾದ ದೇವಿಪ್ರಸಾದ್‌ ದೋಳ್ಪಾಡಿ, ತಾರಾನಾಥ ಇಡ್ಯಡ್ಕ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next