Advertisement
ಕೇರಳ ಸರಕಾರದ ಅನುಮತಿ ಪತ್ರ ಸಿಗದಿರುವುದರಿಂದ ಮಹತ್ವಾಕಾಂಕ್ಷೆಯ ಕಾಂಞಂಗಾಡ್-ಕಾಣಿಯೂರು ರೈಲು ಹಳಿ ಕಡತದಲ್ಲೇ ಉಳಿದುಕೊಳ್ಳಲು ಕಾರಣವಾಗಿದೆ ಎಂದು ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್ ಹೇಳಿದ್ದಾರೆ. ಅವರು ಐಎನ್‌ಟಿಯುಸಿ ನೇತಾರರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಈ ಯೋಜನೆಯ ನನೆಗುದಿಗೆ ಬೀಳಲು ರಾಜ್ಯ ಸರಕಾರದ ಅಸಡ್ಡೆ ಕಾರಣವೆಂದಿದ್ದಾರೆ.
Related Articles
Advertisement
ಕಾಂಞಂಗಾಡಿನಿಂದ ಪಾಣತ್ತೂರಿಗೆ 41 ಕಿಲೋ ಮೀಟರ್ ದೂರವಿದೆ. ಕೇರಳ ಮತ್ತು ಕರ್ನಾಟಕ ಗಡಿ ಭಾಗದಿಂದ ಕಾಣಿಯೂರು ವರೆಗೆ 49 ಕಿಲೋ ಮೀಟರ್ ಅಂದರೆ ಕಾಣಿಯೂರು ಸಮೀಪದ ಎಡಮಂಗಲ ಎಂಬ ಸ್ಥಳದ ತನಕ ಈ ರೈಲು ಮಾರ್ಗವನ್ನು ಅಧ್ಯಯನ ನಡೆಸಲಾಗಿದೆ.ಕಾಂಞಂಗಾಡಿನಿಂದ ಪಾಣತ್ತೂರಿಗೆ ಕೇವಲ 20 ನಿಮಿಷಗಳಲ್ಲಿ ತಲುಪಲು ಸಾಧ್ಯವಿದೆ. ಬಳಿಕ 20 ನಿಮಿಷಗಳಲ್ಲಿ ಕಾಣಿಯೂರಿಗೆ ತಲುಪಿ ಅಲ್ಲಿಂದ ಸುಳ್ಯಕ್ಕೆ ತೆರಳಬಹುದಾಗಿದೆ.
ನಂತರ ಎರಡು ಗಂಟೆಗಳ ಕಾಲ ಪ್ರಯಾಣ ನಡೆಸಿದರೆ ಹಾಸನಕ್ಕೆ ಹಾಗೂ ಅಲ್ಲಿಂದ ಇತ್ತೀಚೆಗೆ ಕಾರ್ಯಾರಂಭಗೊಂಡ ಶ್ರವಣಬೆಳಗೊಳ ಮಾರ್ಗದ ಮೂಲಕ ಸಂಚರಿಸಿದರೆ ಆರು ಗಂಟೆಗಳೊಳಗೆ ಬೆಂಗಳೂರಿಗೆ ತಲುಪಬಹುದಾಗಿದೆ.ಕೇರಳ ಮತ್ತು ಕರ್ನಾಟಕ ರಾಜ್ಯಗಳು ಒಪ್ಪಿಗೆ ಪತ್ರ ನೀಡಿದ ಬಳಿಕ ರೈಲು ಮಾರ್ಗದ ಅಂತಿಮ ರೂಪುರೇಷೆ ದಕ್ಷಿಣ ರೈಲ್ವೇಯಿಂದ ರೈಲ್ವೇ ಮಂಡಳಿಗೆ ತಲುಪಬೇಕಾಗಿದೆ. ಮಂಡಳಿಯು ಅಂಗೀಕರಿಸಿದ ರೈಲ್ವೇಯ ಪಿನ್‌ಬುಕ್‌ನಲ್ಲಿ ಈ ಯೋಜನೆಯು ಸ್ಥಾನ ಪಡೆಯಬೇಕು.
ಪ್ರದೇಶ ಸರ್ವೇ ಮುಂತಾದ ಯೋಜನೆ ಯನ್ನು ತಯಾರಿಸಲು ರೈಲ್ವೇ ಸಚಿವಾಲಯ ಹಸಿರು ನಿಶಾನೆ ತೋರಿಸ ಬೇಕು. ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಬೇಕು. ಸ್ವಾಧೀನಪಡಿಸುವ ಭೂಮಿಯ ಮಾಲಕರಲ್ಲಿ ತಿಳಿವಳಿಕೆ ಮೂಡಿಸಲು ಪ್ರತ್ಯೇಕ ಕ್ರಿಯಾಪಡೆಯನ್ನು ರಚಿಸಬೇಕು. ಅಲ್ಲದೆ ಯೋಜನೆಗೆ ಸಂಬಂಧಿಸಿ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ನಂತರವಷ್ಟೇ ಕಾಮಗಾರಿ ಆರಂಭವಾಗಲಿದೆ.
ಕೇರಳ ಸರಕಾರವು 325 ಕೋಟಿ ರೂ. ನೀಡಬೇಕಿದೆ. ಈ ಮೊತ್ತವನ್ನು ಕೊಡುವುದಾಗಿ ಸೂಚಿಸುವ ಒಪ್ಪಿಗೆಪತ್ರವನ್ನು ಕೇರಳ ಸರಕಾರ ಇನ್ನೂ ನೀಡದಿರುವುದರಿಂದ ಯೋಜನೆಗೆ ಸಂಬಂಧಪಟ್ಟ ವರದಿಯು ರೈಲ್ವೇಯ ಚೆನ್ನೈ ಕಚೇರಿಯ ಕಡತದಲ್ಲೇ ಉಳಿದುಕೊಂಡಿದೆ. ಒಪ್ಪಿಗೆ ಪತ್ರಕ್ಕಾಗಿ ಇನ್ನಷ್ಟು ದಿನ ಕಾಯಲು ಸಾಧ್ಯವಿಲ್ಲ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಆದರೆ ಒಪ್ಪಿಗೆ ಪತ್ರವಿಲ್ಲದೆ ಯೋಜನಾ ವರದಿ ಮಾತ್ರ ಕಳುಹಿಸಿದರೆ ರೈಲ್ವೇ ಮಂಡಳಿಯು ಈ ಯೋಜನೆಯನ್ನು ಕೈಬಿಡುವ ಸಾಧ್ಯತೆ ನಿಚ್ಚಳವಾಗಿದೆ.