ಕಾಸರಗೋಡು, ಮಾ.19: ಪುಲಿಯಂಕುಳಂ ನೆಲ್ಲಿಯರ ಕಾಲನಿ ನಿವಾಸಿ ಚಾಣಮೂಪ್ಪನ್ ಎಂಬ 106 ವರ್ಷ ಪ್ರಾಯದ ಹಿರಿಯ ವ್ಯಕ್ತಿ ಈ ಬಾರಿಯೂ ತಮ್ಮ ಮತ ಚಲಾಯಿಸಲಿದ್ದಾರೆ. ವಾಹನ ಸೌಲಭ್ಯ ಇಲ್ಲದ ಕಾಲಾವಧಿಯಲ್ಲೂ ಎರಡು ದಿನ ಮುನ್ನವೇ ನಡೆದು ಸಾಗಿ ಮತದಾನ ನಡೆಸಿದ ತಮ್ಮ ನೆನಪನ್ನು ಈ ಶತಾಯುಷಿ ಮೆಲುಕು ಹಾಕುತ್ತಾರೆ. ಕೂಲಿಕಾರ್ಮಿಕರಾಗಿ, ಜಾನುವಾರು ಮೇಯಿಸುವ ಕಾಯಕ ನಡೆಸಿ ಬದುಕುತ್ತಿರುವ ಇವರು ಪ್ರಜಾಪ್ರಭುತ್ವದ ಮಹತ್ವ ತಿಳಿದಿದ್ದಾರೆ.
ಇದನ್ನೂ ಓದಿ:ಅಸ್ಸಾಂ : ದ್ವೇಷವನ್ನು ಹರಡುವುದರ ಮೂಲಕ ಜನರನ್ನು ವಿಭಜಿಸುತ್ತಿದೆ ಬಿಜೆಪಿ : ರಾಹುಲ್ ಗಾಂಧಿ
ನೂತನ ತಲೆಮಾರಿನ ಮಂದಿಗೆ ಮತದಾನ ಜಾಗೃತಿ ಮೂಡಿಸುವ ಕಾಯದಲ್ಲೂ ಚಾಣ ಮೂಪನ್ ಅವರು ಉತ್ಸಾಹ ತೋರುತ್ತಿದ್ದಾರೆ. ಮತದಾನ ಜಾಗೃತಿ ಕಾರ್ಯಕ್ರಮ ಅಂಗವಾಗಿ ಕಾಂಞಂಗಾಡ್ ವಿಧಾನಸಭೆ ಕ್ಷೇತ್ರದ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‌ನ ನೆಲ್ಲಿಯರ ಕಾಲನಿಯ ಮೂಪ್ಪನ್ ಆಗಿರುವ ಚಾಣ ಮೂಪ್ಪನ್ ಅವರನ್ನು ಗೌರವಿಸಲಾಗಿದೆ.
ಈ ಕಾಲನಿಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಸ್ವೀಪ್ ಜಿಲ್ಲಾ ನೋಡೆಲ್ ಅಧಿಕಾರಿ ಕವಿತಾರಾಣಿ ರಂಜಿತ್ ಅವರು ಚಾಣ ಮೂಪ್ಪನ್ ಅವರಿಗೆ ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಿದರು. ಈ ವೇಳೆ ಪತ್ನಿ ಕೊರುಂಬಿ, ಮೂವರು ಮಕ್ಕಳೂ ಜತೆಗಿದ್ದರು.
ಈ ಸಂದರ್ಭದಲ್ಲಿ ಮತದಾನ ಜಾಗೃತಿ ಪ್ರತಿಜ್ಞೆ ಪಠಿಸಲಾಯಿತು. ಸ್ವೀಪ್ ಕಾರ್ಯಕರ್ತರಾದ ಎಂ.ಕೆ.ನಿಷಾ ನಂಬಪೊಯಿಲ್, ದಿಲೀಷ್ ಎ., ಝುಬೈರ್, ವಿನೋದ್ ಕುಮಾರ್ ಕೆ., ವಿದ್ಯಾ ವಿ., ಆನ್ಸ್, ಮೋಹನದಾಸ್ ವಯಲಾಕುಳಿ, ಕ್ರಿಸ್ಟಿ, ವಿಪಿನ್ ಡಿ, ರಜೀಷಾ, ಸುನಾ ಎಸ್.ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಅಂಗವಾಗಿ ಸ್ಥಳೀಯರಿಂದ ಮಂಗಲಂಕಳಿ ಜರುಗಿತು.