ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಗೆ ಸೇರಿದ್ದ ಮುಂಬೈ ಕಚೇರಿ ಕಟ್ಟಡವನ್ನು ಧ್ವಂಸಗೊಳಿಸದಂತೆ ನೀಡಿದ್ದ ಆದೇಶವನ್ನು ಸೆಪ್ಟೆಂಬರ್ 22ರವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಬಾಂಬೆ ಹೈಕೋರ್ಟ್ ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ ಗುರುವಾರ ಸೂಚಿಸಿದೆ.
ಕಂಗನಾ ರನೌತ್ ಕಟ್ಟಡವನ್ನು ಧ್ವಂಸಗೊಳಿಸುವ ಬಿಎಂಸಿ ಕಾರ್ಯಾಚರಣೆ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೀಠ ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ. ಇದರಿಂದಾಗಿ ಕಂಗನಾಗೆ ಮತ್ತಷ್ಟು ನಿರಾಳತೆ ಸಿಕ್ಕಂತಾಗಿದೆ ಎಂದು ವರದಿ ತಿಳಿಸಿದೆ.
ಕಂಗನಾ ರನೌತ್ ಕಟ್ಟಡ ಧ್ವಂಸಗೊಳಿಸುವ ಕಾರ್ಯಾಚರಣೆಗೆ ಮುಂದಾಗಿದ್ದು ಬಿಎಂಸಿ. ಶಿವಸೇನಾಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಬೇಕಾದರೆ ಮೇಯರ್ ಅಥವಾ ಬಿಎಂಸಿ ಕಮಿಷನರ್ ಜತೆ ಮಾತನಾಡಬಹುದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈ ಮಹಾನಗರ ಪಾಲಿಕೆಗೆ ಮುಖಭಂಗ; ಕಂಗನಾ ಕಟ್ಟಡ ಧ್ವಂಸ ಕಾರ್ಯಕ್ಕೆ ಹೈಕೋರ್ಟ್ ತಡೆ
ಟಿ ಕಂಗನಾ ರನೌತ್ ಹಿಮಾಚಲ ಪ್ರದೇಶದಿಂದ ಮುಂಬೈಗೆ ಆಗಮಿಸುವ ಮುನ್ನವೇ ಕಟ್ಟಡ ಧ್ವಂಸದ ಬಗ್ಗೆ ಬಿಎಂಸಿ ನೋಟಿಸ್ ಜಾರಿಗೊಳಿಸಿತ್ತು. ಬುಧವಾರ ಬೆಳಗ್ಗೆ ಕಂಗನಾ ಪರ ವಕೀಲ ಬಾಂಬೆ ಹೈಕೋರ್ಟ್ ಗೆ ಬಿಎಂಸಿ ಕಾರ್ಯಾಚರಣೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು, ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಬಿಎಂಸಿ ಕಾರ್ಯಾಚರಣೆಗೆ ತಡೆ ನೀಡಿದ್ದು, ಗುರುವಾರ ಮಧ್ಯಾಹ್ನ 3ಗಂಟೆಗೆ ವಿಚಾರಣೆ ಮುಂದೂಡಿದೆ ಎಂದು ವರದಿ ತಿಳಿಸಿತ್ತು.
ವಾಣಿಜ್ಯ ನಗರಿ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಆಡಳಿತಾರೂಢ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಮುಂಬೈಗೆ ಆಗಮಿಸಿದ್ದು, ಕಂಗನಾ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿತ್ತು. ಬುಧವಾರ ಬೆಳಗ್ಗೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಅಧಿಕಾರಿಗಳು ಅಕ್ರಮವಾಗಿ ಕಚೇರಿ ಕಟ್ಟಿರುವುದಾಗಿ ಆರೋಪಿಸಿದ್ದು, ಕಟ್ಟಡವನ್ನು ನೆಲಸಮಗೊಳಿಸಲು ಆರಂಭಿಸಿದ್ದರು.
ಇದನ್ನೂ ಓದಿ: ಥ್ಯಾಂಕ್ಸ್ ಅಮಿತ್ ಶಾಜೀ: ಬಾಲಿವುಡ್ ನಟಿ ಕಂಗನಾಗೆ “ವೈ” ಕೆಟಗರಿ ಭದ್ರತೆ