ಹೊಸದಿಲ್ಲಿ: “ಎಮರ್ಜೆನ್ಸಿ”(Emergency) ಚಿತ್ರವು ಸೆನ್ಸಾರ್ ಮಂಡಳಿಯಲ್ಲಿ ಇನ್ನೂ ಅಂಟಿಕೊಂಡಿದ್ದು, ಬಿಡುಗಡೆಗೆ ಅನುಮತಿ ನೀಡಲಾಗಿದೆ ಎಂಬ ವದಂತಿಗಳನ್ನು ನಟಿ-ಸಂಸದೆ ಕಂಗನಾ ರಣಾವತ್(Kangana Ranaut ) ಶುಕ್ರವಾರ(ಆ 30) ತಳ್ಳಿಹಾಕಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೋ ಸಂದೇಶದಲ್ಲಿ, ತನಗೆ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಸದಸ್ಯರಿಗೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.
“ನಮ್ಮ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ನಿಜವಲ್ಲ. ವಾಸ್ತವವಾಗಿ, ನಮ್ಮ ಚಲನಚಿತ್ರವನ್ನು ಮೊದಲೇ ಬಿಡುಗಡೆಗೆ ಅನುಮತಿ ನೀಡಲಾಗಿತ್ತು ಆದರೆ ಹಲವಾರು ಬೆದರಿಕೆಗಳಿಂದಾಗಿ ಅದರ ಪ್ರಮಾಣೀಕರಣವನ್ನು ನಿಲ್ಲಿಸಲಾಗಿದೆ, ”ಎಂದು ಕಂಗನಾ ಹೇಳಿದ್ದಾರೆ.
ಇಂದಿರಾ ಗಾಂಧಿ, ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಹತ್ಯೆ ಮತ್ತು ಪಂಜಾಬ್ ಗಲಭೆಗಳನ್ನು ತೋರಿಸದಂತೆ ನಮ್ಮ ಮೇಲೆ ಒತ್ತಡವಿದೆ. ನಂತರ ನಾವು ಏನು ತೋರಿಸುತ್ತೇವೆ ಎಂದು ನನಗೆ ತಿಳಿದಿಲ್ಲ, ಚಿತ್ರದಲ್ಲಿ ಬ್ಲ್ಯಾಕೌಟ್ ಇದೆ ಎಂದು ಹೇಳಲಾಗಿದೆ. ಇದು ನನಗೆ ನಂಬಲಾಗದ ಸಮಯ ಮತ್ತು ಈ ದೇಶದ ಈ ಸ್ಥಿತಿಗೆ ನಾನು ತುಂಬಾ ವಿಷಾದಿಸುತ್ತೇನೆ”ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಬೇಕಿದ್ದ ಚಿತ್ರದಲ್ಲಿ ಕಂಗನಾ ರಣಾವತ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಶಿರೋಮಣಿ ಅಕಾಲಿದಳ ಶುಕ್ರವಾರ ಸಿಬಿಎಫ್‌ಸಿಗೆ ಲೀಗಲ್ ನೋಟಿಸ್ ಕಳುಹಿಸಿದ್ದು, ರಣಾವತ್ ಅವರ ಚಲನಚಿತ್ರ “ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ” ಮತ್ತು “ತಪ್ಪು ಮಾಹಿತಿ ಹರಡಬಹುದು” ಎಂದು ಆರೋಪಿಸಿ ಬಿಡುಗಡೆಯನ್ನು ತಡೆಯುವಂತೆ ಕೋರಿದೆ. ಹಲವು ಸಿಖ್ ಸಂಘಟನೆಗಳೂ ಆಕ್ಷೇಪ ವ್ಯಕ್ತಪಡಿಸಿವೆ.